ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಲಾಭಾಂಶ ವಿತರಣೆ
ಮಹಾಲಿಂಗಪುರ 22: ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯಶೃಈ ವಿರೇಂದ್ರ ಹೆಗಡೆಜಿ ಅವರು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಅಡಿ ಸ್ಥಾಪಿತ ರಾಜ್ಯದ ಎಲ್ಲ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಮತ್ತು ಅವುಗಳ ವ್ಯವಹಾರ ಆಧರಿಸಿ ಸುಮಾರು 682 ಕೋಟಿ ಲಾಭಾಂಶ ವಿತರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಸಂಸ್ಥೆಯ ಮುಧೋಳ ತಾಲೂಕಾ ಯೋಜನಾಧಿಕಾರಿ ಧನಂಜಯಕುಮಾರ ಹೇಳಿದರು.
ಪಟ್ಟಣದ ಕೆಂಗೇರಿಮಡ್ಡಿಯಲ್ಲಿ ಬೆಳಗಲಿ ವಲಯದ ಸುಮಾರು 12 ಸಂಘಗಳಿಗೆ 99.641 ರೂಗಳ ಲಾಭಾಂಶ ವಿತರಣಾ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಮುಧೋಳ ತಾಲೂಕಿನ 1851 ಸ್ವ-ಸಹಾಯ ಸಂಘಗಳಿಗೆ 1 ಕೋಟಿ 35 ಲಕ್ಷ ರೂಗಳ ವಿತರಣೆಗೆ ಪೂಜ್ಯರು ಅನುಮತಿ ನೀಡಿದ್ದಾರೆ. ಇಲ್ಲಿಯವರೆವಿಗೆ ಮುಧೋಳ ತಾಲೂಕಿನ 509 ಸಂಘಗಳಿಗೆ ಸುಮಾರು 35 ಲಕ್ಷ ಲಾಭಾಂಶ ವಿತರಿಸಿದ್ದು ಉಳಿದ ಸಂಘಗಳಿಗೆ ಹಂತ ಹಂತವಾಗಿ ಲಾಭಾಂಶ ವಿತರಿಸಲಾಗುವುದು ಎಂದರು.
ಸಮಾರಂಭದ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದ ಸಿದ್ದಾರೂಢ ಬ್ರಹ್ಮವಿದ್ಯಾಶ್ರಮದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಮೋರೆ ಮಹಿಳಾ ಸಂಘಗಳಿಗೆ ಲಾಭಾಂಶ ಹಣವನ್ನು ವಿತರಿಸಿ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಅಡಿಯಲ್ಲಿ ಪ್ರಾರಂಭವಾದ ಸ್ವ-ಸಹಾಯ ಸಂಘಗಳು ಮಹಿಳೆಯರ ಸ್ವಾಲಂಬನೆಯ ಸ್ವ-ಉದ್ಯೋಗ ಮತ್ತು ಆರ್ಥಿಕ ಸ್ವಾವಲಂಬನೆಗೆ ಬಹಳ ಸಹಕಾರಿಯಾಗಿವೆ. ಸಂಘದ ಮೂಲಕ ಮಹಿಳೆಯರಿಗೆ ಸಾಲ ಸೌಲಭ್ಯದ ಜೊತೆಗೆ ಶೌಚಾಲಯ ನಿರ್ಮಾಣ, ಶಾಲೆಗಳಿಗೆ ಕಲಿಕಾ ಸಾಮಗ್ರಿ, ದೇವಾಲಯ ಹಾಗೂ ಕೆರೆಗಳ ಅಭಿವೃದ್ಧಿ ಬಡವಿದ್ಯಾರ್ಥಿಗಳಿಗೆ ಶಿಷ್ಯವೇತನ, ವಯಸ್ಕರಿಗೆ ಮಾಶಾಸನ ಸೇರಿದಂತೆ ಇನ್ನೂ ಅನೇಕ ಜನಾನುರಾಗಿ ಕೆಲಸಗಳನ್ನು ಧರ್ಮಸ್ಥಳದ ಪೂಜ್ಯರು ಮಾಡುತ್ತಿರುವದು ಶ್ಲಾಘನೀಯ. ಮಹಿಳೆಯರು ಸಂಘದಿಂದ ಪಡೆಯುವ ಸಾಲವನ್ನು ಸಕಾಲಕ್ಕೆ ಮರು ಪಾವತಿಸಿ, ಸದ್ಭಳಿಸಿ ಸ್ವಾವಲಂಬನೆಯ ಜೀವನದ ಜೊತೆಗೆ ಆರ್ಥಿಕ ಅಭಿವೃದ್ಧಿ ಹೊಂದಬೇಕು ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ರನ್ನಬೆಳಗಲಿ ವಲಯ ಮೇಲ್ವಿಚಾರಕ ಎಚ್.ಲೋಕೇಶ, ಮಹಾಲಿಂಗಪುರದ ಮೇಲ್ವಾಚಾರಕ ಸೋಮಲಿಂಗ ಗರಗ, ಸೇವಾಪ್ರತಿನಿಧಿ ಅನ್ನಪೂರ್ಣ ಧಡೂತಿ, ಆಶಾ ಪೆಂಡಾರಿ ಹಾಗೂ ವಿವಿಧ ಸ್ವ-ಸಹಾಯ ಸಂಘಗಳ ಸದಸ್ಯರು ಇದ್ದರು.