ಕಟ್ಟಿಗೆಯ ಸೇತುವೆಯಿಂದ ಶವ ಹೊತ್ತು ನಡುಗೆ : 6 ಕಿ. ಮೀ ಸಾಗಿದ ಗ್ರಾಮಸ್ಥರು : ಸಮಾಜ ತಲೆ ತಗ್ಗಿಸುವ ಘಟನೆ
ಪಾರೇಶ ಭೋಸಲೆ
ಬೆಳಗಾವಿ : ಶವ ಸಾಗಿಸಲು ವಾಹನಗಳ ವ್ಯವಸ್ಥೆ ಇಲ್ಲದೆ ತಂದೆ ಮಕ್ಕಳ ಶವವನ್ನು ಹೆಗಲು ಮೇಲೆ ಹೊತ್ತು ಸಾಗಿರುವದು ಹಾಗೂ ಮಕ್ಕಳು ತಾಯಿಯ ಶವವನ್ನು ಹೊತ್ತು ಸಾಗುವದನ್ನು ನಾವು ಹಲವು ಹೊರರಾಜ್ಯಗಳಲ್ಲಿನ ಸುದ್ದಿಗಳನ್ನು ಕೇಳಿದ್ದೇವೆ, ನೋಡಿದ್ದೇವೆ ಆದರೆ ಇಂತಹ ಪ್ರಕರಣಗಳು ಸದ್ಯ ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಾಗಿ ವರದಿಯಾಗುತ್ತಿರುವದು ದುರ್ಧೈವದ ಸಂಗತಿಯಾಗಿದ್ದು, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 50 ವರ್ಷಗಳೇ ಗತಿಸಿದರೂ ಬೆಳಗಾವಿ ಜಿಲ್ಲೆಯ ಕಾಡಂಚಿನ ಗ್ರಾಮದ ಜನರಿಗೆ ಮೂಲಸೌಕರ್ಯ ಸಿಗದೆ ಇರುವದು ದುರಂತ ಎನ್ನಲಾಗಿದೆ.

ಹೌದು ಓದುಗರೇ ಹೊರರಾಜ್ಯ ಕೆಲ ಪ್ರದೇಶದಲ್ಲಿ ಅಂಬ್ಯುಲನ್ಸ್ ಸೇವೆ ದೊರೆಯದೆ ಶವಗಳನ್ನು ಹೊತ್ತು ಸಾಗಿರುವದು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಇತ್ತೀಚೆಗೆ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲ್ಲೂಕಿನ ಕಾಡಿನ ಗ್ರಾಮಕ್ಕೆ ತೆರಳಲು ಸರಿಯಾದ ರಸ್ತೆ ಇಲ್ಲದೆ, ನದಿಗೆ ಸೇತುವೆ ಇಲ್ಲದೆ ತಾವೇ ಹಗ್ಗ ಹಾಗೂ ಕಟ್ಟಿಗೆಯಿಂದ ನಿರ್ಮಿಸಿಕೊಂಡಿದ್ದ ಸೇತುವೆ ಮೇಲಿಂದ ಮೊನ್ನೆಯಷ್ಟೇ ಚಟ್ಟವೇರಿ ಆಸ್ಪತ್ರೆಗೆ ಸಾಗಿಸಿದರೂ ಬದುಕಿ ಉಳಿಯದ ಮಹಿಳೆ ಹರ್ಷದಾ ಪ್ರಕರಣ ಎಲ್ಲರ ಕಣ್ಣು ಮುಂದೆ ಮಾಸುವ ಮುನ್ನವೇ ಖಾನಾಪುರ ತಾಲೂಕಿನಲ್ಲಿ ಇಂತಹದೆ ಅಮಾನವೀಯ ಘಟನೆ ಮತ್ತೊಂದು ನಡೆದಿದೆ.
ಸತತವಾಗಿ ಸುರಿಯುತ್ತಿರುವ ದಾರಾಕಾರ ಮಳೆಯ ನಡುವೆ ಮೃತ ವ್ಯಕ್ತಿಯೋರ್ವರ ಶವ ಸಂಸ್ಕಾರಕ್ಕಾಗಿ ಸುಮಾರು 6 ಕಿ.ಮೀ ಮೃತ ವ್ಯಕ್ತಿಯ ಶವವನ್ನು ಜನರು ಹೆಗಲ ಮೇಲೆ ಹೊತ್ತುಕೊಂಡೇ ಸಾಗಿದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಖಾನಾಪೂರ ತಾಲ್ಲೂಕಿನಲ್ಲಿ ಸತತವಾದ ಭಾರೀ ಮಳೆಯಿಂದ ಸೇತುವೆಗಳು ಮುಳುಗಿ ರಸ್ತೆ ಸಂಪರ್ಕ ಕಡಿತ ಗೊಂಡಿದ್ದರಿಂದ ಖಾನಾಪುರ ತಾಲ್ಲೂಕಿನ ಕೃಷ್ಣಾಪುರದಲ್ಲಿ ಸದಾನಂದ ನಾಯಕ್ ಎಂಬುವರ ಶವವನ್ನು ಗ್ರಾಮಸ್ಥರು ಹೆಗಲ ಮೇಲೆ ಹೊತ್ತುಕೊಂಡು ಮರದ ಸೇತುವೆ ಮೇಲೆ ಸಾಗಿಸಿ ತಂದು ಅಂತ್ಯಸಂಸ್ಕಾರ ನಡೆಸಿದ ಘಟನೆ ನಡೆದಿದೆ.
ಖಾನಾಪುರ ಕಾಡಿನಂಚಿನಲ್ಲಿ ಬರುವ ಕೃಷ್ಣಪುರ ಗ್ರಾಮದ ನಿವಾಸಿ ಸದಾನಂದ ನಾಯಕರು ತೀವ್ರ ಜ್ವರದಿಂದ ಬಳಲುತ್ತಿದ್ದಾಗ ಚಿಕಿತ್ಸೆಗಾಗಿ ಕುಟುಂಬದವರು ಬೇರೆ ಗ್ರಾಮಕ್ಕೆ ಕರೆದೊಯ್ದಿದ್ದರು.
ಆದರೆ ಅಲ್ಲಿ ಚಿಕಿತ್ಸೆ ಫಲಿಸದೆ ಸದಾನಂದ ಅವರು ಮೃತಪಟ್ಟಿದ್ದಾರೆ. ಆದರೆ ಆ ಗ್ರಾಮಕ್ಕೆ ಸರಿಯಾದ ರಸ್ತೆ ಹಾಗೂ ಹಳ್ಳಕ್ಕೆ ಸೇತುವೆ ಇಲ್ಲದೆ ಗ್ರಾಮಸ್ಥರು ಸೇರಿ ಹಗ್ಗ ಹಾಗೂ ಕಟ್ಟಿಗೆಯ ತುಂಡುಗಳಿಂದ ನಿರ್ಮಿಸಿಕೊಂಡ ಸೇತುವೆ ಮೇಲಿಂದ ಸಾಗಿ ನಂತರ ಅಂತ್ಯಸಂಸ್ಕಾರ ನಡೆಸಲು ಮೃತರ ಶವವನ್ನು 6 ಕಿ.ಮೀ ವರೆಗೆ ಹೊತ್ತುಕೊಂಡೇ ಸ್ಮಶಾನ ಭೂಮಿಗೆ ಕರೆತರಲಾಗಿದೆ.
ಖಾನಾಪುರ ತಾಲೂಕಿನ ಬಂಡೂರಿ ನಾಲಾಗೆ ಅಡ್ಡವಾಗಿ ಹಾಕಲಾಗಿರುವ ಕಟ್ಟಿಗೆಯ ತೂಗುಸೇತುವೆ ಮೇಲೆ ಗ್ರಾಮಸ್ಥರು ತಮ್ಮ ಜೀವವನ್ನು ಪಣಕ್ಕಿಟ್ಟು ಶವಸಾಗಿಸಿದ ದೃಶ್ಯ ಈಗ ಎಲ್ಲೆಡೆ ವೈರಲ್ ಆಗಿದ್ದು, ಕಾಡಂಚಿನ ಜನರು ಅನುಭವಿಸುತ್ತಿರುವ ನರಕಯಾತನೆಗೆ ಜನಾಕ್ರೋಶ ವ್ಯಕ್ತವಾಗತೊಡಗಿದೆ.