ಅಧಿಕಾರಿಗಳ ವಿರುದ್ಧ ದೂರು ಕೇಳಿಬಂದರೆ ಶಿಸ್ತು ಕ್ರಮ
ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಕಡಕ್ ಎಚ್ಚರಿಕೆ: ಎರಡನೇ ತ್ರೈಮಾಸಿಕ ಪ್ರಗತಿ ಪರೀಶೀಲನಾ ಸಭೆ
ಬಳ್ಳಾರಿ,ಡಿ.03: ನನ್ನ ಉಸ್ತುವಾರಿ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ, ಸಾರ್ವಜನಿಕರಿಂದ ದೂರು ಬಂದರೆ ಸುಮ್ಮನಿರುವುದಿಲ್ಲ, ಅಂತಹ ಇಲಾಖೆಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಯುವ ಸಬಲೀಕರಣ, ಕ್ರೀಡೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಎಚ್ಚರಿಸಿದರು.
ಶನಿವಾರ, ನಗರದ ಜಿಲ್ಲಾ ಪಂಚಾಯತ್ ನಜೀರ್ ಸಾಬ್ ಸಭಾಂಗಣದಲ್ಲಿ ಏರಿ್ಡಸಲಾಗಿದ್ದ ಜಿಲ್ಲಾ ಮಟ್ಟದ ಕರ್ನಾಟಕ ಅಭಿವೃದ್ಧಿ ಎರಡನೇ (ವಾರ್ಷಿಕ) ತ್ರೈಮಾಸಿಕ (ಕೆಡಿಪಿ) ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ಆಯುಷ್ ಇಲಾಖೆಯಲ್ಲಿ ಓಷಧಿ ವಿತರಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ, ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಇಲಾಖೆಯ ಪ್ರಗತಿಯ ಬಗ್ಗೆ ಸಮರ್ಕ ಮಾಹಿತಿ ನೀಡುತ್ತಿಲ್ಲ, ಏಕೆ? ಎಂದು ಸಚಿವ ಬಿ.ನಾಗೇಂದ್ರ ಅವರು, ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿಯನ್ನು ಪ್ರಶ್ನಿಸಿದರು.
ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣ ತಗ್ಗಿಸಲು ಕ್ರಮ ವಹಿಸಬೇಕು. ಭ್ರೂಣ ಹತ್ಯೆ ಪತ್ತೆಹಚ್ಚುವುದು ತಡೆಗಟ್ಟಬೇಕು ಹಾಗೂ ಕೆಲವು ಆಸ್ಪತ್ರೆಗಳಲ್ಲಿ ಹಣ ಪಡೆದುಕೊಂಡು ಸೇವೆ ನೀಡುತ್ತಿರುವುದು ಕಂಡುಬರುತ್ತಿದ್ದು, ಈ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ನಿಗಾ ವಹಿಸಬೇಕು ಎಂದು ಸಚಿವ ಬಿ.ನಾಗೇಂದ್ರ ಅವರು ಸೂಚಿಸಿದರು.
ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರು ಮಾತನಾಡಿ, ರಾತ್ರಿ ಸಮಯದಲ್ಲಿ ತುರ್ತು ಸೌಲಭ್ಯಕ್ಕಾಗಿ ಆಸ್ಪತ್ರೆಗಳ ಶುಶೂಷ್ರಕರಿಗೆ ಕರೆ ಮಾಡಿದಾಗ, ಶಾಸಕರ ಕರೆ ಎಂಬುದು ಲೆಕ್ಕಿಸದೇ, ಕರೆ ಸ್ವೀಕರಿಸುವುದಿಲ್ಲ ಎಂದು ಹೇಳಿದರು. ಇದಕ್ಕೆ ಸಚಿವ ಬಿ.ನಾಗೇಂದ್ರ ಮಾತನಾಡಿ, ಯಾರಿಗಾದರೂ ಅಪಘಾತವಾದರೆ, ಅವರನ್ನು ಸಂಪರ್ಕಿಸಿದರೆ, ಕರೆ ಸ್ವೀಕರಿಸುವುದಿಲ್ಲ ಎಂದರೆ ಏನು ಅರ್ಥ? ವೈದ್ಯಾಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದುಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಅನುಷ್ಠಾನಗೊಳಿಸುತ್ತಿರುವ ವಿವಿಧ ಬ್ಯಾಚ್ಗಳ ಕುಡಿಯುವ ನೀರಿನ ಯೋಜನೆಗಳು ಸಮರ್ಕವಾಗಿ ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಸಚಿವ ಬಿ.ನಾಗೇಂದ್ರ ಅವರು ಕಳವಳ ವ್ಯಕ್ತಪಡಿಸಿದರು. ಈ ಕುರಿತು ಮಧ್ಯಪ್ರವೇಶಿಸಿದ ಕಂಪ್ಲಿ ಶಾಸಕ ಜೆ.ಎನ್.ಗಣೇಶ್, ಸರ್ಕಾರ ಕುಡಿಯುವ ನೀರಿನ ಯೋಜನೆಗೆ ಸಾಕಷ್ಟು ಹಣ ವ್ಯಯ ಮಾಡುತ್ತಿದೆ, ಆದರೆ ಹಣ ದುರುಪಯೋಗವಾಗುವುದು ತಪ್ಪುತ್ತಿಲ್ಲ, ಮತ್ತು ರಸ್ತೆಗಳು ದುರಸ್ಥಿಗೊಳ್ಳುತ್ತಿರುವುದು ತಪ್ಪುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಬಳ್ಳಾರಿ ತಾಲ್ಲೂಕಿನ ಹರಗಿನಡೋಣಿ, ಜಾನಕುಂಟೆ ಹಾಗೂ ಬೆಳಗಲ್ಲು ಗ್ರಾಮಗಳಿಗೆ ಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಲಿದ್ದು, ಅಲ್ಲಿಪುರ ಕೆರೆಯಿಂದ ಪೈಪ್ಲೈನ್ ವ್ಯವಸ್ಥೆ ಕೈಗೊಂಡು ಹರಗಿನಡೋಣಿಯ ಕೆರೆಯಲ್ಲಿ ನೀರು ಸಂಗ್ರಹಿಸುವ ಕೆಲಸ ಮಾಡಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಪ್ರತಿ ತಾಲ್ಲೂಕಿನಲ್ಲಿ ಕೆಟ್ಟು ಹೋಗಿರುವ ಆರ್ಓ ಘಟಕಗಳನ್ನು ಗುರುತಿಸಿ, ಅವುಗಳ ದುರಸ್ಥಿಗೆ ಕ್ರಮ ವಹಿಸಬೇಕು. ಅರ್ಹ ಗುತ್ತಿಗೆದಾರರರಿಗೆ ಕಾಮಗಾರಿ ನೀಡಬೇಕು. ಜನರಿಗೆ ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂದು ಸಚಿವ ಬಿ.ನಾಗೇಂದ್ರ, ತಾಪಂ ಇಓಗಳು ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಇಂಜಿಯರ್ಗಳಿಗೆ ಸೂಚಿಸಿದರು.
ಜಿಲ್ಲೆಯ ಪ್ರಗತಿ ಪರೀಶೀಲನಾ ಸಭೆಯಲ್ಲಿ ಅಪೂರ್ಣ ಮಾಹಿತಿ ನೀಡುವುದು ಸರಿಯಲ್ಲ. ಅಧಿಕಾರಿಗಳು ಮುಂದಿನ ಸಭೆಯಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಬೇಕು. ಇಲ್ಲದಿದ್ದಲ್ಲಿ ಶಿಸ್ತಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಸಭೆಯಲ್ಲಿ ಗೈರು ಹಾಜರಾದವರಿಗೆ ನೋಟಿಸ್ ಜಾರಿ ಮಾಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಇಎಸ್ಐ ಆಸ್ಪತೆ ನಿರ್ಮಾಣಕ್ಕೆ ಸ್ಥಳ ಮಂಜೂರಾತಿ ಕುರಿತು, ಕಾರ್ಮಿಕ ಇಲಾಖೆಯ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದುಕೊಂಡರು.
ಸಭೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಸುಧೀರ್ಘ ಚರ್ಚೆ ನಡೆಯಿತು.
ಸಿರುಗುಪ್ಪ ಶಾಸಕ ಬಿ.ಎಂ.ನಾಗರಾಜ, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ, ಸಹಾಯಕ ಆಯುಕ್ತ ಹೇಮಂತ್ ಕುಮಾರ್ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
--------
ಕ್ಷಯಮುಕ್ತ ಗ್ರಾಮಪಂಚಾಯತ್ಗೆ ಶ್ರಮಿಸೋಣ: ಡಿಹೆಚ್ಓ ಡಾ.ವೈ ರಮೇಶ ಬಾಬು
ಬಳ್ಳಾರಿ,ಡಿ.03: ಗ್ರಾಮೀಣ ಪ್ರದೇಶಗಳಲ್ಲಿ ಕ್ಷಯರೋಗ ನಿರ್ಮೂಲನೆ ಮಾಡಲು ಜಾಗೃತಿ ಮತ್ತು ಸಮುದಾಯಕ್ಕೆ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ ರಮೇಶ್ ಬಾಬು ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮದಡಿಯಲ್ಲಿ ದಿ ಯುನಿಯನ್ ಸೌತ್ ಈಸ್ಟ್ ಏಷ್ಯಾ ದೆಹಲಿ ಹಾಗೂ ಜೆಎಸ್ಡಬ್ಲ್ಯೂ ಫೌಂಡೆಷನ್ ತೋರಣಗಲ್ಲು ರವರ ಬೆಂಬಲದೊಂದಿಗೆ ಕ್ಷಯರೋಗ ಪತ್ತೆ, ಚಿಕಿತ್ಸೆ, ಮೇಲ್ವಿಚಾರಣೆ, ತಡೆಗಟ್ಟುವಿಕೆ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಶನಿವಾರದಂದು ನಗರದ ನಕ್ಷತ್ರ ಹೋಟೆಲ್ ಸಭಾಂಗಣದಲ್ಲಿ ವೈದ್ಯಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಎರಡು ವಾರಗಳಿಗಿಂತ ಹೆಚ್ಚು ದಿನದ ಕೆಮ್ಮು, ಉಸಿರಾಟದಲ್ಲಿ ತೊಂದರೆ, ಸಂಜೆ ವೇಳೆ ಜ್ವರ, ರಾತ್ರಿ ವೇಳೆ ಮೈ ಬೆವರುವುದು, ಕಫದಲ್ಲಿ ರಕ್ತ ಬೀಳುವುದು, ಎದೆ ನೋವು, ಹಸಿವಾಗದಿರುವುದು, ತೂಕ ಇಳಿಕೆ, ರೋಗದ ಪ್ರಮುಖ ಲಕ್ಷಣಗಳಿದ್ದಲ್ಲಿ ಸಾರ್ವಜನಿಕರಿಗೆ ಪರೀಕ್ಷೆ ಮಾಡಿಸಲು ಗ್ರಾಮ ಪಂಚಾಯತಿಗಳ ಸಹಕಾರದೊಂದಿಗೆ ಆಸ್ಪತ್ರೆಗೆ ಬರುವಂತೆ ಸೂಚಿಸಬೇಕು ಎಂದು ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲಿ ಕ್ಷಯರೋಗ ಕುರಿತು ಜಾಗೃತಿ ನೀಡುವ ದಿಶೆಯಲ್ಲಿ ಸಮುದಾಯ ಮಟ್ಟದಲ್ಲೇ ಕ್ಷಯರೋಗ ಮುಕ್ತ ಗ್ರಾಮ ಪಂಚಾಯತ್ಗಾಗಿ ಎಲ್ಲರೂ ಶ್ರಮಿಸಬೇಕಿದೆ ಎಂದು ತಿಳಿಸಿದರು.
ಒಮ್ಮೆ ರೋಗ ಪತ್ತೆಯಾದರೆ ಅವರ ಚಿಕಿತ್ಸಾ ಅವಧಿಯು ಮುಗಿಯುವವರೆಗೆ ಮೇಲ್ವಿಚಾರಣೆ, ರೋಗಿಗೆ ಬೆಂಬಲ ಹಾಗೂ ದಾನಿಗಳಿಂದ ಪೌಷ್ಟಿಕ ಆಹಾರ ಒದಗಿಸುವ ಮೂಲಕ ಅವರ ಆರ್ಥಿಕ ನೆರವಿಗೆ ಬೆಂಬಲ ನೀಡಬೇಕು ಎಂದು ಹೇಳಿದರು.
ಮಕ್ಕಳಿಗೆ ಕ್ಷಯರೋಗ ಇದ್ದಲ್ಲಿ ಅವರ ಪಾಲಕರ, ಸುತ್ತಲಿನ ಮನೆಗಳ ಮತ್ತು ಮಗುವಿಗೆ ಒಡನಾಟವಿರುವವರನ್ನು ತಪ್ಪದೆ ಪರೀಕ್ಷೆ ಮಾಡಲು ಕ್ರಮ ವಹಿಸಬೇಕು. ಯಾರಾದರೂ ಚಿಕಿತ್ಸೆ ಪಡೆಯಲು ನಿರಾಕರಿಸಿದರೆ ಸ್ಥಳೀಯ ಗ್ರಾಮ ಪಂಚಾಯತ ಸಹಕಾರದೊಂದಿಗೆ ಚಿಕಿತ್ಸೆ ಪೂರ್ಣಗೊಳಿಸಬೇಕು. ಮುಖ್ಯವಾಗಿ ಕ್ಷಯರೋಗವನ್ನು ಸಾಮಾನ್ಯ ಖಾಯಿಲೆ ಎಂಬ ರೀತಿಯಲ್ಲಿ ಕಾಣುವ ಮೂಲಕ ಕಳಂಕ- ತಾರತಮ್ಯವನ್ನು ತೊಲಗಿಸುವ ಪ್ರಯತ್ನ ಮಾಡುವಂತೆ ಅವರು ಸೂಚಿಸಿದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ.ವಿ ಅವರು ಮಾತನಾಡಿ, ಕ್ಷಯರೋಗದ ಚಿಕಿತ್ಸೆ ಪಡೆಯುವವರು ಚಿಕಿತ್ಸೆ ಮಧ್ಯದಲ್ಲಿ ಬಿಟ್ಟಲ್ಲಿ, ಸರಿಯಾಗಿ ಚಿಕಿತ್ಸೆ ಪಡೆಯದಿದ್ದಲ್ಲಿ ಅಂತವರಿಗೆ ಬಹು ಓಷಧಿ ರೋಗ ನಿರೋಧಕ (ಎಂಡಿಆರ್ ಟಿಬಿ) ಕ್ಷಯರೋಗವು ಬರುವ ಸಾಧ್ಯತೆ ಇದೆ, ಇದು ತುಂಬಾ ಗಂಭೀರವಾದದ್ದು ಅಂತವರಿಗೆ 18 ತಿಂಗಳಿನಿಂದ 24 ತಿಂಗಳ ಕಾಲ ಚಿಕಿತ್ಸೆಯನ್ನು ನೀಡಬೇಕಾಗುತ್ತದೆ. ಕಾರಣ ಸಾಮಾನ್ಯವಾಗಿ ಕ್ಷಯರೋಗಕ್ಕೆ ನೀಡುವ 06 ತಿಂಗಳ ಚಿಕಿತ್ಸೆಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ಎಲ್ಲರೂ ಕಾರ್ಯನಿರ್ವಹಿಸಿ ಇದಕ್ಕಾಗಿ ಗ್ರಾಮಪಂಚಾಯತಗಳ ಸಹಕಾರ ಪಡೆಯಲು ತಿಳಿಸಿದರು.
ವಿಶೇಷವಾಗಿ ಕ್ಷಯರೋಗ ಚಿಕಿತ್ಸೆ ಪಡೆಯುತ್ತಿರುವರಿಗೆ ರೋಗನಿರೋಧಕ ಶಕ್ತಿ ಕುಂಠಿತಗೊಳ್ಳುವುದರಿಂದ ಜೊತೆಗೆ ಕುಟುಂಬದ ಆಧಾರ ಸ್ತಂಭವಾಗಿರುವ ವ್ಯಕ್ತಿಯು ದುಡಿಮೆ ಇಲ್ಲದೆ ಕುಟುಂಬ ಆರ್ಥಿಕ ತೊಂದರೆ ಈಡಾಗುವ ಜೊತೆಗೆ ಸಂಪೂರ್ಣ ಕುಟುಂಬವೂ ಬಡತನಕ್ಕೆ ಬಂದು ನಿಲ್ಲುವ ಪರಿಸ್ಥಿತಿ ಬರುತ್ತದೆ. ಇಂಥ ಸಂದರ್ಭದಲ್ಲಿ ಪೂರಕ ಪೌಷ್ಟಿಕ ಆಹಾರದ ಅವಶ್ಯಕತೆ ಇದ್ದು ದಾನಿಗಳಾಗಿ ಮುಂದೆ ಬಂದು ಕ್ಷಯರೋಗಿಗಳನ್ನು ಉಳಿಸುವ ಮತ್ತು ನಿರ್ದಿಷ್ಟ ಅವಧಿಯೊಳಗೆ ರೋಗವನ್ನು ಗುಣಪಡಿಸುವ ಕಾರ್ಯದಲ್ಲಿ ಕೈಜೋಡಿಸುವ ಮೂಲಕ ಬಳ್ಳಾರಿ ಜಿಲ್ಲೆಯನ್ನು ಕ್ಷಯ ಬಳ್ಳಾರಿ ಜಿಲ್ಲೆಯನ್ನಾಗಿ ಮಾಡುವ ದೆಶೆಯಲ್ಲಿ ಕೈಜೋಡಿಸಲು ವಿನಂತಿಸಿದರು.
ಈ ಸಂದರ್ಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಕ್ಷಯರೋಗ ಸಲಹೆಗಾರರಾದ ಡಾ.ಹಂಸವೇಣಿ, ಯುಎಸ್ಇಎ ರಾಜ್ಯ ನಿರ್ವಾಹಕ ರಾಜೇಶ ಭರಾಲೀಯಾ, ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ಅಬ್ದುಲ್ಲಾ, ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ.ಆರ್.ಅನೀಲ್ಕುಮಾರ, ಜಿಲ್ಲಾ ಕುಷ್ಠರೋಗ ನಿರ್ಮುಲನಾಧಿಕಾರಿ ಡಾ.ವೀರೇಂದ್ರ ಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಯುಎಸ್ಇಎ ಜಿಲ್ಲಾ ನಿರ್ವಾಹಕ ಸಣ್ಣಕೇಶವ, ಡಿಪಿಸಿ ಅರ್ಚನಾ ಸೇರಿದಂತೆ ಜಿಲ್ಲೆಯ ಎಲ್ಲ ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮುಖ್ಯ ಆಡಳಿತ ವೈದ್ಯಾಧಿಕಾರಿಗಳು, ಆಡಳಿತ ವೈದ್ಯಾಧಿಕಾರಿಗಳು, ಕ್ಷಯರೋಗ ಕಾರ್ಯಕ್ರಮದ ಎಲ್ಲ ಸಿಬ್ಬಂದಿಯವರು ಹಾಜರಿದ್ದರು.
-------
ಅಂತರ ವಿಶ್ವವಿದ್ಯಾಲಯ ಕುಸ್ತಿ ಪಂದ್ಯಾವಳಿ
ವಿಎಸ್ಕೆ ವಿವಿಯ ಆದಿತ್ಯಗೆ
ಕಂಚಿನ ಪದಕ
ಬಳ್ಳಾರಿ,ಡಿ.03: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಸ್ತಿ ತಂಡದ ಆದಿತ್ಯ (ವೀರಶೈವ ಮಹಾವಿದ್ಯಾಲಯ) ಚಂಡಿಗಡ ವಿಶ್ವವಿದ್ಯಾಲಯದಲ್ಲಿ ಜರುಗಿದ ದಕ್ಷಿಣ ಪಶ್ಚಿಮ ವಲಯ ಅಂತರ ವಿಶ್ವವಿದ್ಯಾಲಯ ಪುರುಷ ಮತ್ತು ಮಹಿಳಾ ಕುಸ್ತಿ (ಗ್ರೀಕೊ ರೋಮನ್ 87 ಕೆಜಿ) ಪಂದ್ಯಾವಳಿಯಲ್ಲಿ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿ ಕಂಚಿನ ಪದಕವನ್ನು ಪಡೆಯುವುದರ ಮೂಲಕ ವಿಶ್ವವಿದ್ಯಾಲಯದ ಕೀರ್ತಿಯನ್ನು ಹೆಚ್ಚಿಸಿರುತ್ತಾನೆ ಅದರ ಜೊತೆ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕುಸ್ತಿ ಪಂದ್ಯಾವಳಿಗೆ ಆಯ್ಕೆಯಾಗಿದ್ದಾನೆ.
ಕ್ರೀಡಾಪಟುವಿಗೆ ಹಾಗೂ ತಂಡದ ವ್ಯವಸ್ಥಾಪಕಿ ಡಾ.ಕವಿತಾ ಎಸ್.ಎಮ್ ಮತ್ತು ತರಬೇತುದಾರ ಮಲ್ಲಿಕಾರ್ಜುನ.ವೈ.ಡಿ ಅವರಿಗೆ ವಿಶ್ವವಿದ್ಯಾಲಯದ ಆಡಳಿತ ವರ್ಗದವರು, ಕುಲಪತಿಗಳು, ಕುಲಸಚಿವರು, ಕುಲಸಚಿವರು (ಮೌಲ್ಯಮಾಪನ) ಹಣಕಾಸು ಅಧಿಕಾರಿ, ಸಿಬ್ಬಂದಿ ವರ್ಗದವರು ಹಾಗೂ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗ ಮೆಚ್ಚುಗೆ ವ್ಯಕ್ತಪಡಿಸಿ ಶುಭಕೋರಿದ್ದಾರೆ ಎಂದು ವಿವಿ ಪ್ರಕಟಣೆ ತಿಳಿಸಿದೆ.
-------
ಅನಧಿಕೃತ ಗೈರು: ಕರ್ತವ್ಯಕ್ಕೆ ಹಾಜರಾಗಲು ಕೊನೆ ಅವಕಾಶ
ಬಳ್ಳಾರಿ,ಡಿ.03: ತಾಲೂಕಿನ ಸಿಂಧುವಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಗ್ರೂಪ್ ‘ಡಿ’ ನೌಕರ ರಮೇಶ್ ಎಂಬುವಾತ ಪೂರ್ವಾನುಮತಿ ಪಡೆಯದೇ ಅಥವಾ ಯಾವುದೇ ತರಹದ ರಜೆ ಮಂಜೂರು ಮಾಡಿಸಿಕೊಳ್ಳದೇ 2017ರ ಮಾರ್ಚ್ 02ರಿಂದ ಕರ್ತವ್ಯಕ್ಕೆ ಗೈರು ಹಾಜರಾಗಿದ್ದು, ಮರು ಕೆಲಸಕ್ಕೆ ಹಾಜರಾಗಲು ಈಗಾಗಲೇ ಮೂರು ಬಾರಿ ಮರುಕರೆ ನೋಟಿಸ್ಗಳನ್ನು ಜಾರಿ ಮಾಡಿದ್ದು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಅಧಿಕಾರಿಗಳೂ ಕರ್ತವ್ಯಕ್ಕೆ ಹಾಜರಾಗಲು ಅಂತಿಮ ನೋಟೀಸ್ ನೀಡಿದ್ದರೂ ಈವರೆಗೂ ಕೆಲಸಕ್ಕೆ ಹಾಜರಾಗಿರುವುದಿಲ್ಲ. ಈ ವರ್ತನೆಯು ಕರ್ತವ್ಯದ ಮೇಲಿನ ನಿರಾಸಕ್ತಿ ಹೊಂದಿರುವುದು ಕಂಡುಬರುತ್ತದೆ ಮತ್ತು ಕೆಸಿಎಸ್ (ನಡತೆ) ನಿಯಮಾವಳಿಯ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ. ದೀರ್ಘಾವಧಿಯ ಗೈರು ಹಾಜರಿಯಿಂದ ಕಚೇರಿ ಕಾರ್ಯಗಳಲ್ಲಿ ಅಡಚಣೆ ಉಂಟಾಗಿದೆ.
ಆದ್ದರಿಂದ ಪ್ರಕಟಣೆ ಹೊರಡಿಸಿದ ದಿನಾಂಕದಿಂದ 15 ದಿನದೊಳಗೆ ಕೆಲಸಕ್ಕೆ ಹಾಜರಾಗಲು ಅಂತಿಮ ಎಚ್ಚರಿಕೆ ನೀಡಲಾಗಿದ್ದು, ತಪ್ಪಿದಲ್ಲಿ ನಿಯಮಾನುಸಾರ ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡು ಸೇವೆಯಿಂದ ತೆಗೆದುಹಾಕಲು ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ.ರಮೇಶ್ ಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ಲೋಕಾಯುಕ್ತರ ಜನ ಸಂಪರ್ಕ ಸಭೆ
ಡಿ.08 ಮತ್ತು 13ರಂದು ಸಾರ್ವಜನಿಕರಿಂದ ಕುಂದುಕೊರತೆಗಳ ಅಹವಾಲು ಸ್ವೀಕಾರ
ಬಳ್ಳಾರಿ,ಡಿ.03: ಕರ್ನಾಟಕ ಲೋಕಾಯುಕ್ತ ಪೋಲಿಸ್ ಬಳ್ಳಾರಿ ವಿಭಾಗದ ಪೊಲೀಸ್ ಅಧೀಕ್ಷಕ ಎಂ.ಎನ್.ಶಶಿಧರ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ನೀರೀಕ್ಷಕರಾದ ಸಂಗಮೇಶ್ ಮತ್ತು ಮಹಮ್ಮದ್ ರಫಿ ಇವರ ನೇತೃತ್ವದಲ್ಲಿ ಜಿಲ್ಲೆಯ ಕಂಪ್ಲಿ, ಬಳ್ಳಾರಿ, ತಾಲೂಕು ಕೇಂದ್ರಗಳಲ್ಲಿ ಸಾರ್ವಜನಿಕರಿಂದ ಕುಂದುಕೊರತೆಗಳ ಅಹವಾಲುಗಳ ಸ್ವೀಕಾರ/ ಜನ ಸಂಪರ್ಕ ಸಭೆ ನಡೆಸುವರು.
ಡಿ.08 ರಂದು ಬೆಳಿಗ್ಗೆ 11.30ರಿಂದ ಮಧ್ಯಾಹ್ನ 02ರವರೆಗೆ ಕಂಪ್ಲಿ ತಹಶೀಲ್ದಾರರ ಕಚೇರಿಯ ಸಭಾಂಗಣ ಮತ್ತು ಡಿ.13ರಂದು ಬೆಳಿಗ್ಗೆ 11.30ರಿಂದ ಮಧ್ಯಾಹ್ನ 02ರವರೆಗೆ ಬಳ್ಳಾರಿ ತಹಶೀಲ್ದಾರರ ಕಚೇರಿಯ ಸಭಾಂಗಣದಲ್ಲಿ ಲೋಕಾಯುಕ್ತರ ಜನ ಸಂಪರ್ಕ ಸಭೆ ನಡೆಯಲಿದೆ.
ಕುಂದು ಕೊರತೆಗಳಿರುವ ಸಾರ್ವಜನಿಕರು ನಿಗದಿತ ದಿನ ಮತ್ತು ಸ್ಥಳದಲ್ಲಿ ತಮ್ಮ ದೂರು ಅರ್ಜಿಗಳನ್ನು ನೀಡಬಹುದು. ಅಹವಾಲುಗಳಿರುವ ಅರ್ಜಿಗಳನ್ನು ಸ್ವೀಕರಿಸಿ ವಿಚಾರಿಸಲಾಗುತ್ತದೆ. ಕರ್ನಾಟಕ ಲೋಕಾಯುಕ್ತ ಬೆಂಗಳೂರು ವಿಭಾಗ ಲೋಕಾಯುಕ್ತರಿಗೆ ಅರ್ಜಿ ಸಲ್ಲಿಸಲು ನಮೂನೆ/ಫಾರಂ ನಂ:01 ಮತ್ತು 02 ಗಳನ್ನು ಸಹ ನೀಡಲಾಗುವುದು ಎಂದು ಕರ್ನಾಟಕ ಲೋಕಾಯುಕ್ತ ಬಳ್ಳಾರಿ ವಿಭಾಗದ ಪೊಲೀಸ್ ಅಧೀಕ್ಷಕ ಎಂ.ಎನ್.ಶಶಿಧರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.