ಬಳ್ಳಾರಿ

ಬರಪೀಡಿತ ರೈತರ ಸಾಲ ಮರುರಚನೆಗೆ ಸೂಚನೆ

ಬರಪೀಡಿತ ರೈತರ ಸಾಲ ಮರುರಚನೆಗೆ ಸೂಚನೆ

ಲೋಕದರ್ಶನ ವರದಿ 

ಬಳ್ಳಾರಿ, ಸೆ.25 ಜಿಲ್ಲೆಯ ಎಲ್ಲ ಐದು ತಾಲ್ಲೂಕುಗಳನ್ನು ತೀವ್ರ ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದ್ದು, ಸಂಕಷ್ಟದಲ್ಲಿರುವ ಅನ್ನದಾತರ ಕೆಸಿಸಿ ಹಾಗೂ ಅವಧಿ ಸಾಲಗಳನ್ನು ಮರುರಚನೆ ಮಾಡುವಂತೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅವರು ಬ್ಯಾಂಕ್ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.  ನಗರದ ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಗುರುವಾರ ನಡೆದ ಬರಗಾಲ ಕುರಿತು ವಿಶೇಷ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

60 ತಿಂಗಳ ಕಾಲಾವಕಾಶ: ರೈತರ ಸಾಲಗಳನ್ನು ಮರುರಚಿಸಿ, 12 ತಿಂಗಳ ಮೊರಟೋರಿಯಂ ಅವಧಿ ಸೇರಿದಂತೆ ಒಟ್ಟು 60 ತಿಂಗಳಲ್ಲಿ ಮರುಪಾವತಿಸಲು ಅವಕಾಶ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.  ಸ್ವಯಂಪ್ರೇರಿತ ಸಾಲ ಮರುರಚನೆ: 2026ರ ಆಗಸ್ಟ್‌ 27ರ ವೇಳೆಗೆ 30 ದಿನಗಳಿಗಿಂತ ಕಡಿಮೆ ಅವಧಿಯ ಬಾಕಿ ಹೊಂದಿರುವ ಎಲ್ಲ ‘ಸ್ಟ್ಯಾಂಡರ್ಡ’ ಸಾಲಗಳಿಗೆ ಸ್ವಯಂಪ್ರೇರಿತವಾಗಿ ಮರುರಚನೆ ಪ್ರಕ್ರಿಯೆ ಕೈಗೊಳ್ಳಬೇಕು ಎಂದರು.  

ರೈತರ ಮೇಲೆ ಒತ್ತಡ ಹೇರದಂತೆ ಸೂಚನೆ: ಸಾಲ ಮರುಪಾವತಿಗಾಗಿ ರೈತರಿಗೆ ಯಾವುದೇ ರೀತಿಯ ಕಿರುಕುಳ ಅಥವಾ ಒತ್ತಡ ಹೇರಬಾರದು. ಬೆಳೆ ವಿಮೆ ಪರಿಹಾರ ಬಿಡುಗಡೆಯಾಗುವವರೆಗೆ ಕಾದು, ಅರ್ಹ ರೈತರಿಗೆ ಹೊಸ ಸಾಲಗಳನ್ನು ವಿತರಿಸಬೇಕು ಎಂದು ಸೂಚಿಸಿದರು.  ಖಾಸಗಿ ಲೇವಾದೇವಿದಾರರ ಹಾವಳಿಗೆ ಕಡಿವಾಣ: ಬರಗಾಲದ ಸಂದರ್ಭದಲ್ಲಿ ರೈತರು ತಮ್ಮ ಆರ್ಥಿಕ ಅಗತ್ಯಗಳಿಗಾಗಿ ಸೂಕ್ಷ್ಮ ಹಣಕಾಸು ಸಂಸ್ಥೆಗಳು ಅಥವಾ ಖಾಸಗಿ ಲೇವಾದೇವಿದಾರರ ಬಲೆಗೆ ಬೀಳದಂತೆ ಬ್ಯಾಂಕ್ಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.  


ಸುದ್ದಿ ಓದಿ