ಶಿವಣ್ಣನ 126ನೇ ಚಿತ್ರಕ್ಕೆ ರಿಷಭ್ ಶೆಟ್ಟಿ ನಿರ್ದೇಶನ
ಬೆಂಗಳೂರು, ಆಗಸ್ಟ್ 20 ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 126ನೇ ಚಿತ್ರಕ್ಕೆ ರಿಷಭ್ ಶೆಟ್ಟಿ ಆ್ಯಕ್ಸನ್ ಕಟ್ ಹೇಳಲಿದ್ದಾರೆ.
ಇತ್ತೀಚೆಗಷ್ಟೆ ಶಿವರಾಜ್ ಕುಮಾರ್ ಅವರ 124ನೇ ಸಿನಿಮಾದ ಮುಹೂರ್ತ ನೆರವೇರಿದ್ದು, ಸುದೀಪ್ ಅವರು ಕ್ಲ್ಯಾಪ್ ಮಾಡಿ, ಗೀತಾ ಶಿವರಾಜ್ಕುಮಾರ್ ಅವರು ಕ್ಯಾಮೆರಾಗೆ ಚಾಲನೆ ನೀಡಿದ್ದರು. ಈ ಸಿನಿಮಾ ಪ್ರಕಟವಾದ ಬೆನ್ನಲ್ಲೇ ಈಗ 126ನೇ ಚಿತ್ರ ಸಹ ಘೋಷಣೆಯಾಗಿದೆ.
ಈಗಾಗಲೇ ಈ ಸಿನಿಮಾ ಕುರಿತಾಗಿ ಮಾತುಕತೆ ಸಹ ನಡೆದಿದ್ದು, ರಿಷಭ್ ಶೆಟ್ಟಿ ಅವರು ಈ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಶಿವಣ್ಣ ಅವರನ್ನು ಭೇಟಿ ಮಾಡುವ ಭಾಗ್ಯ ನನ್ನದಾಯ್ತು. ಹೊಸ ಹೆಜ್ಜೆಯೊಂದನ್ನು ಇಡುವ ಬಗ್ಗೆ ಉತ್ಸುಕನಾಗಿದ್ದೇನೆ ಎಂದು ಪೋಸ್ಟ್ ಮಾಡುವುದರ ಜೊತೆಗೆ ಶಿವರಾಜ್ಕುಮಾರ್ ಜತೆಗಿನ ಎರಡು ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ ರಿಷಭ್ ಶೆಟ್ಟಿ.
ರಿಷಭ್ ಶೆಟ್ಟಿ ಅವರು ನಿರ್ಮಾಪಕ ಜಯಣ್ಣ ಅವರ ಜತೆ ಶಿವರಾಜ್ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.