ಎರಡನೇ ದಿನಕ್ಕೆ ಕಾಲಿಟ್ಟ ಧರಣಿ: ಹೋರಾಟ ಹೇಳುವುದಿಲ್ಲ, ಮಾಡಿ ತೋರಿಸುತ್ತೇವೆ
ಮುದ್ದೇಬಿಹಾಳ : ಕಳೆದ ನಾಲ್ಕು ಸಭೆಗಳನ್ನು ಮಾಡಿದ್ದರೂ ಕಾರ್ಖಾನೆಯವರು ರೈತರಿಗೆ ಎಫ್.ಆರ್.ಪಿ ದರ ನಿಗದಿ ಮಾಡಿದ್ದನ್ನು ಹೊರತುಪಡಿಸಿ 10 ರೂ.ಕೂಡಾ ಹೆಚ್ಚಳ ಮಾಡಿಲ್ಲ ಎಂದು ರೈತ ಮುಖಂಡ ಗುರುಸಂಗಪ್ಪಗೌಡ ಹಂಡರಗಲ್ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಛೇರಿ ಆವರಣದಲ್ಲಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ ಬುಧವಾರ ಎರಡನೇ ದಿನಕ್ಕೆ ಕಾಲಿರಿಸಿದ ಸಂದರ್ಭ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಅಧಿಕಾರಿಗಳು ಕಾರ್ಖಾನೆ ಮುಖ್ಯಸ್ಥರ ಸಭೆ ನಾಲ್ಕು ಬಾರಿ ಕರೆದರೂ ಬರೀ ಅದೇ ಆಡಿದ್ದ ಮಾತುಗಳನ್ನೇ ಆಡಿ ರೈತರ ಕಣ್ಣಲ್ಲಿ ಮಣ್ಣೆರಚುವ ಕೆಲಸ ಮಾಡುತ್ತಿದ್ದಾರೆ.ಮುಂಬರುವ ದಿನಗಳಲ್ಲಿ ತ್ವರಿತವಾಗಿ ಕಬ್ಬಿನ ಬೆಂಬಲ ಬೆಲೆ ಹೆಚ್ಚಿಸದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳುತ್ತಿದ್ದು ಅದನ್ನು ಹೇಳುವುದಿಲ್ಲ.ಮಾಡಿ ತೋರಿಸುತ್ತೇವೆ ಎಂದು ನಿಗೂಢವಾಗಿ ಹೇಳಿದರು.
ಹೋರಾಟಕ್ಕೆ ಬೆಂಬಲ ನೀಡಿ ಮಾತನಾಡಿ ಜೆಡಿಎಸ್ ತಾಲೂಕಾ ಕಾರ್ಯಾಧ್ಯಕ್ಷ ಮಹೆಬೂಬ ಹಡಲಗೇರಿ, ಕಬ್ಬಿಗೆ ನ್ಯಾಯಯುತವಾದ ಬೆಲೆಯನ್ನು ನೀಡುವ ಕಾರ್ಯವನ್ನು ಸರಕಾರ ಮಾಡಬೇಕು.ತಾಲೂಕಿನಲ್ಲಿರುವ ಒಂದು ಕಾರ್ಖಾನೆಯನ್ನು ನಂಬಿ ಕಬ್ಬು ಬಿತ್ತನೆ ಮಾಡಿರುವ ರೈತರಿಗೆ ಅನ್ಯಾಯವನ್ನು ಮಾಡಬಾರದು ಎಂದು ಹೇಳಿದರು.ಈ ಸಂದರ್ಭದಲ್ಲಿ ಮುಖಂಡ ವೈ.ಎಲ್.ಬಿರಾದಾರ,ಗಂಗಾ ಫೌಂಡೇಶನ್ ಅಧ್ಯಕ್ಷ ಶ್ರೀಕಾಂತ ಚಲವಾದಿ,ವಕೀಲ ಎಂ.ಸಿ.ಮ್ಯಾಗೇರಿ,ಕನ್ನಡಪರ ಹೋರಾಟಗಾರ ವೀರೇಶ ಗುರುಮಠ,ರೇವಣಸಿದ್ದಪ್ಪ ಸರೂರ, ಲಾಲಸಾಬ ಜತ್ತಿ,ವೀರಸಂಗಯ್ಯ ಹಿರೇಮಠ,ವಿಜಯಕುಮಾರ ಗಣಾಚಾರಿ,ರಮೇಶ ಟಕ್ಕಳಕಿ,ರೇವಣಸಿದ್ದಪ್ಪ ಪೂಜಾರಿ, ಆಶಿಫ್ ನಿಡಗುಂದಿಸೋಮಶೇಖರ ಹೊಸಮನಿ,ಬಸವರಾಜ ಚಲವಾದಿ ಮೊದಲಾದವರು ಇದ್ದರು.