ಧರ್ಮ ದುಂದುಭಿ ವೀರವಿರಾಗಿ ಲಿಂ. ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು

ಧರ್ಮ ದುಂದುಭಿ ವೀರವಿರಾಗಿ ಲಿಂ. ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು

ಲೋಕದರ್ಶನ ವರದಿ 

ಧರ್ಮ ದುಂದುಭಿ ವೀರವಿರಾಗಿ ಲಿಂ. ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು 


  ಭಾರತಾಂಬೆಯ ಪೃಕೃತಿ ಮಡಿಲಿನಲ್ಲಿ ಅನೇಕ ಪವಾಡಗಳು ವಿಸ್ಮಯಗಳು ಕಾಲಕಾಲಕ್ಕೆ ಗೊಚರಿಸುತ್ತಾ ಬಂದಿರುತ್ತವೆ. ಹಲವಾರು ಪುಣ್ಯ ಕ್ಷೇತ್ರಗಳಲ್ಲಿ ಹಿಮಾಲಯಗಿರಿ ಶಿಖರಗಳಲ್ಲಿ ಸಂತರು ಅಘೋರಿಗಳು ತಪಸ್ವಿಗಳು ಲೋಕಕಲ್ಯಾಣರ್ಥಾಕ್ಕಾಗಿ ಪೂಜಾಕೈಂಕರ್ಯಗಳು ಹೋಮಹವನ ತಪೋನುಷ್ಠಾನಗಳನ್ನು ನೆಡೆಸಿಕೊಂಡು ಬಂದಿದ್ದು ನಮ್ಮ ಸನಾತನ ಹಿಂದೂಧರ್ಮದ ಒಂದು ವೈಶಿಷ್ಠವಾಗಿದೆ. ಈ ನಮ್ಮ ದೇಶದಲ್ಲಿ ವೀರಶೈವ ಧರ್ಮವು ತನ್ನದೇ ಆದ ವಿಶಿಷ್ಠ ವಿಚಾರ ಧಾರೆ ಹಾಗೂ  ಸಂಸೃತಿ ಸಂಸ್ಕಾರವನ್ನು ನೀಡಿ ವಿಶ್ವಮಟ್ಟದಲ್ಲಿ ಗಮನ ಸೆಳೆದಿದೆ. ವೀರಶೈವ ಧರ್ಮದ ಮೂಲ ಸ್ಥಾಪಕರಾದ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಜಗತ್ತಿನ ಕಲ್ಯಾಣಕ್ಕಾಗಿ ಪರಶಿವನ ಪಂಚಮುಖಗಳಿಂದ ಆವಿರ್ಭವಿಸಿದವರು. ಶ್ರೀ ರಂಭಾಪುರಿ ಶ್ರೀ ಉಜ್ಜೈನಿ ಶ್ರೀ  ಕೇದಾರ ಶ್ರೀ  ಶ್ರೀಶೈಲ ಶ್ರೀ ಕಾಶಿ ಪೀಠಗಳು ಶಿವಾದ್ವೈತ ಸಿದ್ದಾಂತದ ಕೇಂದ್ರಗಳು. ಧರ್ಮ ರಕ್ಷಣೆಗಾಗಿ ಭಕ್ತಸಂಕುಲಕ್ಕೆ ಶಿವಜ್ಞಾನದ ಬೆಳಕು ಆಚಾರ ವಿಚಾರಗಳನ್ನು ಬೆಳೆಸುವ ಮಹಾತ್ಕಾರ್ಯ ಮಾಡುತ್ತಾ ಬಂದಿವೆ. 

  ನಾನೀಗ ಹೇಳಲು ಹೊರಟಿರುವುದು ಇಂದಿನ ಲೇಖನದ ನಾಯಕರಾದ ವೀರಶೈವ ಧರ್ಮದ ಅಭಿನವ ಪರಮೇಶ್ವರರು ಯುಗಪುರುಷರು ಧರ್ಮ ದುಂದುಭಿ ವೀರವಿರಾಗಿ ಲಿಂ. ಶ್ರೀಮದ್ರಂಭಾಪುರಿ 

ವೀರಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ವೀರಗಂಗಾಧರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಭಗವತ್ಪಾದ ಮಹಾಸನ್ನಿಧಿಯವರು. ವಿಶ್ವಶಾಂತಿಗಾಗಿ ನಾಡುನುಡಿ ಸಂಸ್ಕೃತಿಗಾಗಿ ಹೋರಾಡಿದ ಪರಮ ವೈರಾಗಿಗಳು. ಬಾಲ್ಯದಲ್ಲಿಯೇ ವೀರಶೈವ ಧರ್ಮ, ಇಷ್ಟಲಿಂಗ ಮಹಾಪೂಜೆ, ಗುರುಪರಂಪರೆ, ಸಿದ್ದಾಂತ ಶಿಖಾಮಣಿ ಗ್ರಂಥದ ಬಗ್ಗೆ ಅಪಾರ ಶ್ರದ್ದಾಭಕ್ತಿಯನ್ನು ಹೊಂದಿದವರಾಗಿದ್ದರು. ಕಾಲಾಂತರದಲ್ಲಿ ಶ್ರೀಗಳು ತಮ್ಮ ವಿದ್ಯಾಭ್ಯಾಸ ಹಾಗೂ ವೈದಿಕ ಸಂಸ್ಕಾರವನ್ನು ಮುಗಿಸಿಕೊಂಡು ಪಾಲಿಕೊಪ್ಪ ಹಿರೇಮಠದ ಪಟ್ಟಾಧಿಕಾರಕ್ಕೆ 1926 ರಲ್ಲಿ ಭಾಜನರಾಗಿದ್ದರು. ಹಾಗೆಯೆ 1931 ರಲ್ಲಿ ಬೆಂಗಳೂರಿನ ವಿಭೂತಿಪುರ ಮಠದ ಅಧಿಕಾರವನ್ನು ಕೊಡ ವಹಿಸಿಕೊಂಡಿದ್ದರು. ಕಾಲಕ್ರಮೇಣ ಕುಂದಗೋಳ ತಾಲ್ಲೂಕು ಹರಲಾಪೂರ ಗ್ರಾಮದವರ ಆಶಯದಂತೆ ಒಂದು ತಿಂಗಳ ಕಾಲ ಶ್ರೀಗಳು ಶಿವಲಿಂಗಪೂಜಾ ಅನುಷ್ಠಾನವನ್ನು ಕೈಗೊಂಡಿದ್ದರು. ನಂತರ ಧರ್ಮ ಪ್ರಚಾರಗೈಯುತ್ತ ಲಕ್ಷೇಶ್ವರ ಬಳಿಯ ಮುಕ್ತಿಮಂದಿರಕ್ಷೇತ್ರಕ್ಕೆ ಬಂದು ಘೋರತಪಸ್ಸನ್ನು ಆಚರಿಸಿದರು. ಶ್ರೀಗಳ ತಪ್ಪಸ್ಸಿನ ಫಲದಿಂದ ಭಕ್ತರು ಕಾಣಿಕೆಯಾಗಿ ಅಲ್ಲಿದ್ದ ಭೂಮಿಯನ್ನು ಮಠದ ಸ್ಥಾಪನೆಗೆ ದಾನವನ್ನಾಗಿ ನೀಡಿದರು. ಸಮಯ ಕಳೆದಂತೆ ಭಕ್ತರ ಸಹಾಯದಿಂದ ಮುಕ್ತಿಮಂದಿರವನ್ನು ಧರ್ಮಕ್ಷೇತ್ರವನ್ನು ಮಾಡಿ ಬಂದ ಭಕ್ತರಿಗೆ ಧರ್ಮಮಾರ್ಗವನ್ನು ಬೋಧಿಸುತ್ತಿದ್ದರು. ಮುಕ್ತಿಮಂದಿರದಲ್ಲಿ ಶ್ರೀರೇಣುಕಾಚಾರ್ಯರ, ಶಂಕರಚಾರ್ಯರ, ಮಧ್ವ್ವಾಚಾರ್ಯರ, ರಾಮಾನುಜಾಚಾರ್ಯರ, ಬುದ್ಧ, ಮಹಾವೀರ, ನಾನಕ, ಯೇಸುಕ್ರಿಸ್ತ , ಪೈಗಂಬರ ಹೀಗೆ ಸರ್ವ ಧರ್ಮದವರ ಮೂರ್ತಿಯನ್ನು ಕೆತ್ತಿಸಿ ಸ್ಥಾಪಿಸಿ ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶವನ್ನು ಜಗತ್ತಿಗೆ ಸಾರಿದ ಧರ್ಮ ದುಂಧುಭಿಯಾಗಿದ್ದಾರೆ. 


  ಶ್ರೀ ಜಗದ್ಗುರು ರಂಭಾಪುರಿ ಪೀಠದ ಜಗದ್ಗುರು ಶಿವಾನಂದ ಶಿವಾಚಾರ್ಯರ ಆಶಯದಂತೆ ಪಂಚಪೀಠದ ಶ್ರೀಮದ್ರಂಭಾಪುರಿ ಮಹಾಪೀಠಕ್ಕೆ 119 ನೇ ಪೀಠಾಧಿಪತಿಯಾಗಿ ಆಯ್ಕೆಯಾದರು. ಪಟ್ಟಾಧಿಕಾರದ ನಂತರ ಅನೇಕ ಧಾರ್ಮಿಕ ಸಾಮಾಜಿಕ ಹಾಗೂ ಲೋಕಕಲ್ಯಾಣಾರ್ಥವಾಗಿ ಜಗತ್ತಿನ ಉದ್ದಗಲಕ್ಕೂ ಅವಿರತವಾಗಿ ಸಂಚರಿಸಿ ವೀರಶೈವ ಧರ್ಮ, ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ ಇದೆಲ್ಲದರ ಬಗ್ಗೆ ಜಾಗೃತಿ ಮೂಡಿಸುತ್ತ ಭಕ್ತರಿಗೆ ಆರ್ಶಿವಾದವನ್ನು ದಯಪಾಲಿಸುತ್ತಿದ್ದರು. ಆಷಾಡ ಮಾಸವನ್ನು ಕೆಲವರು ನಿಷೇಧವೆಂದು ಬಿಂಬಿಸಿದ್ದರು ಕೂಡ ಶ್ರೀಗಳವರು ಅಷಾಡಮಾಸದಲ್ಲೇ ಹರಿಹರ, ದಾವಣಗೆರೆ, ಬೆಂಗಳೂರು, ಇನ್ನು ಹಲವು ಮಹಾನಗರಗಳಲ್ಲಿ ಇಷ್ಟಲಿಂಗ ಮಹಾಪೂಜೆ ಧರ್ಮಜಾಗೃತಿ ಸಮಾರಂಭವನ್ನು ಕೈಗೊಂಡು ಆಷಾಡವನ್ನು ಶುಭಮಾಸವೆಂದು ತೋರಿದವರಾಗಿದ್ದಾರೆ. ಮೈಸೂರಿನ ರಾಜಮನೆತನ ದಸರಾ ಒಂದು ಕಡೆಯಾದರೆ ರಂಭಾಪುರಿ ಪೀಠದ ಗುರುಮನೆ ದಸರಾ ಮತ್ತೊಂದು ವೈಭವದ ಸಂಕೇತ. ಈ ದಸರಾ ಮೂಲಕ ಪಂಚಪೀಠಗಳಲ್ಲಿ ವೈರಾಗ್ಯವು ಇದೆ. ವೈಭವವು ಇದೆ ಎಂಬ ದಿವ್ಯ ಸಂದೇಶವನ್ನು ಜಗತ್ತಿಗೆ ಸಾರಿದರು. 

  ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ಕುಂಭಾಭಿಷೇಕ, ಸಹಸ್ರ ಅಡಪಲ್ಲಕ್ಕಿ ಮಹೋತ್ಸವ, ಸಾಮೂಹಿಕ ವಿವಾಹಗಳು, ಇನ್ನೂ ಅನೇಕ ಧಾರ್ಮಿಕ ಕಾರ್ಯಗಳು ಜರುಗುತ್ತಿದವು. ಅಮವಾಸ್ಯೆಯ ದಿನ ರುದ್ರಾಭಿಷೇಕ, ದಾಸೋಹ, ಧರ್ಮಸಭೆ ನಡೆಸಿ ಸರ್ವರಿಗೂ ವೀರಶೈವ ಧರ್ಮದ ನಿಜಮೌಲ್ಯಗಳನ್ನು ಸಾರುತ್ತಾ ಬಂದಿದ್ದರು. ಶ್ರೀಗಳ ವ್ಯಕ್ತಿತ್ವ ಸಂಪೂರ್ಣ ಶಿವಮಯವಾಗಿತ್ತು. ಬಾಯಲ್ಲಿ ಸದಾ ಶಿವಪಂಚಾಕ್ಷರಿ ಮಂತ್ರ ದೇಹದ ಸರ್ವಭಾಗವು ಸಂಪೂರ್ಣ ಜಲಭಸ್ಮದಿಂದ ಕೂಡಿರುತ್ತಿತ್ತು. ರುದ್ರಾಕ್ಷಿ ಕೀರೀಟ, ರುದ್ರಾಕ್ಷಿ ಸರಗಳನ್ನ ಧರಿಸಿದ ಅಭಿನವ ರೇಣುಕರಾಗಿದ್ದರು.  ಶ್ರೀ ಜಗದ್ಗುರುಗಳ ಸಾಧನೆಯ ಬಗ್ಗೆ ಎಷ್ಟು ಹೇಳಿದರೂ ಸಾಲದು ಎಂಬುವುದು ನಿಜ ಸಂಗತಿ. 

  ಶ್ರೀ ಜಗದ್ಗುರು ಮಹಾ ಸನ್ನಿಧಿಯವರು ಲಿಂಗೈಕ್ಯರಾಗಿ 43 ವರ್ಷಗಳು ಕಳೆದಿದೆ. ಇವರ ಪುಣ್ಯಾರಾಧನೆಯನ್ನು ಕರ್ನಾಟಕದಲ್ಲಿ ಹಲವಾರು ಕ್ಷೇತ್ರಗಳಲ್ಲಿ ಆಚರಿಸುತ್ತಾ ಬಂದಿರುವುದು ವೀರಶೈವರ ಒಂದು ಪುಣ್ಯದ ಫಲವಾಗಿದೆ. ಶ್ರೀ ಜಗದ್ಗುರುಗಳ ಪುಣ್ಯಾರಾಧನೆಯನ್ನು ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ 9 ನೇ ತಾರೀಕಿನಂದು ಮುಂಜಾನೆ ಶ್ರೀ ಜಗದ್ಗುರುಗಳವರ ಗದ್ದುಗೆಗೆ ರುದ್ರಾಭಿಷೇಕ  ಬಿಲ್ವಾರ್ಚನೆ ಮಹಾಮಂಗಳಾರತಿ ಮಧ್ಯಾಹ್ನ ಮಹಾ ಅನ್ನದಾಸೋಹ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧರ್ಮಜಾಗೃತಿ ಸಮಾರಂಭವನ್ನು ಪ್ರಸ್ತುತ ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳವರ ಸಾನ್ನಿಧ್ಯದಲ್ಲಿ ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರ ಅಪೆಕ್ಷೇಯಂತೆ ನಡೆಯುತ್ತಿದ್ದು ಸರ್ವರೂ ಕೂಡ ಆಗಮಿಸಿ ಜಗದ್ಗುರುಗಳ ಕೃಪೆಗೆ ಪಾತ್ರರಾಗಬೆಕೇಂದು ಎಂದು ತಿಳಿಯಬಯಸುತ್ತಾ ಈ ಸಣ್ಣ ನುಡಿಸೇವೆಯನ್ನು ಎನ್ನ ಆರಾಧ್ಯ ಜಗದ್ಗುರುಗಳ ದಿವ್ಯಚೇತನಕ್ಕೆ ಸರ್ಮಪಿಸುತ್ತಿದ್ದೇನೆ. 

ವಿನಾಯಕ ತೆಲಿಗಿಮಠ ಹರಿಹರ 


ಸುದ್ದಿ ಓದಿ