ಹೊಸ್ತಿಲ ಹುಣ್ಣಿಮೆ: ಯಲ್ಲಮ್ಮನಗುಡ್ಡಕ್ಕೆ ಭಕ್ತರ ದಂಡು
ಉಗರಗೋಳ 25: ಹೊಸ್ತಿಲ ಹುಣ್ಣಿಮೆ ಅಂಗವಾಗಿ ಯಲ್ಲಮ್ಮನಗುಡ್ಡಕ್ಕೆ ಸೋಮವಾರ ಭಕ್ತರ ದಂಡೇ ಹರಿದುಬಂದಿತ್ತು. ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಸಂಜೆ ದೇವಿಯ ಕಂಕಣ ಮಂಗಳಸೂತ್ರ ವಿಸರ್ಜನೆ ಕಾರ್ಯಕ್ರಮ ಜರುಗಿತು.
ಕರ್ನಾಟಕ ಹಾಗೂ ಮಹಾರಾಷ್ಟ್ರದಿಂದ ಅಪಾರ ಸಂಖ್ಯೆಯಲ್ಲಿ ಬಂದಿದ್ದ ಭಕ್ತರು, 'ಎಲ್ಲರ ಅಮ್ಮ' ಯಲ್ಲಮ್ಮನ ದರ್ಶನಾಶೀರ್ವಾದ ಪಡೆದು ಕೃತಾರ್ಥರಾದರು. ಸಕಲ ಜೀವರಾಶಿ ಒಳಿತಿಗೆ ಪ್ರಾರ್ಥಿಸಿದರು. ಬೆಳಿಗ್ಗೆಯಿಂದ ಸಂಜೆಯವರೆಗೂ ಜನದಟ್ಟಣೆ ಕಂಡುಬಂತು. ಯುವಕರ ಪಡೆ ಭಂಡಾರದಲ್ಲಿ ಮಿಂದೆದ್ದವು.
ಯಲ್ಲಮ್ಮನಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಸವದತ್ತಿ, ಜೋಗುಳಬಾವಿ ಹಾಗೂ ಉಗರಗೋಳ ಮಾರ್ಗದಲ್ಲಿ ವಾಹನದಟ್ಟಣೆ ಹೆಚ್ಚಿತ್ತು. ಯಲ್ಲಮ್ಮನಗುಡ್ಡದ ಬಸ್ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರೇ ಹೆಚ್ಚಾಗಿ ಕಂಡುಬಂದರು.
ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು. ಆರೋಗ್ಯ ಇಲಾಖೆ ಹಾಗೂ ಮಹಾರಾಷ್ಟ್ರದ ಶಿವಸೇನೆಯವರು ವೈದ್ಯಕೀಯ ವ್ಯವಸ್ಥೆ ಕಲ್ಪಿಸಿದ್ದರು. ಡಿ.26ರಂದು ಹೋಮ-ಹವನ ಕಾರ್ಯಕ್ರಮ ನಡೆಯಲಿದೆ.