ದೆವ್ವದ ಕಾಟ : ಸಂಜೆಯಾಗುತ್ತಲೇ ಬಾಗಿಲುಗಳು ಬಂದ್, ಮಾಂಸ ತರಲು, ತಿನ್ನಲು ಇಲ್ಲಿ ನಿಷೇಧ

ದೆವ್ವದ ಕಾಟ : ಸಂಜೆಯಾಗುತ್ತಲೇ ಬಾಗಿಲುಗಳು ಬಂದ್, ಮಾಂಸ ತರಲು, ತಿನ್ನಲು ಇಲ್ಲಿ ನಿಷೇಧ

ಬೆಳಗಾವಿ : ಇಂದಿನ ಆಧುನಿಕ ಕಾಲದಲ್ಲಿ ದೆವ್ವ, ಭೂತಗಳನ್ನು ನಂಬುವದು ಬಹಳ ವಿರಳ. ಆದರೆ ಒಂದೇ ವಾರದಲ್ಲಿ ಒಂದೇ ಗಲ್ಲಿಯಲ್ಲಿ 6 ಜನ ಮೃತಪಟ್ಟಿದ್ದಾರೆ. ತಮಗೆ ದೆವ್ವದ ಕಾಟ ಇದೆ. ಅದು ಕಡಿಮೆ ಆಗಲಿ, ನಮ್ಮ ಜನರಿಗೆ ನೆಮ್ಮದಿ ಸಿಗಲಿ ಎಂದು ಗಲ್ಲಿಯ ಜನರೆಲ್ಲ ದೈವದ ಮೊರೆ ಹೋಗಿದ್ದು, ಸಂಜೆ 7 ಗಂಟೆ ಆದರೆ ಸಾಕು ಮನೆ ಅಂಗಳದಲ್ಲಿ ದೀಪ ಹಚ್ಚಿ ಬಾಗಿಲುಗಳನ್ನು ಹಾಕಿಕೊಂಡು ಭಯದಲ್ಲಿ ಕಾಲ ಕಳೆಯುತ್ತಿರುವ ಸುದ್ದಿ ಒಂದು ಹುಕ್ಕೇರಿ ತಾಲೂಕಿನಲ್ಲಿ ವರದಿಯಾಗಿದೆ.

   ಹೌದು ಓದುಗರೇ ಇಂತಹ ಸನ್ನಿವೇಶ ನಡೆಯುತ್ತಿರುವದು ಬೇರೆ ಎಲ್ಲೂ ಅಲ್ಲ, ಸ್ಮಶಾನದಲ್ಲಿ ಮಲಗುವ ಮೂಲಕ ಮೂಢನಂಬಿಕೆ ವಿರುದ್ದ ಸಡ್ಡು ಹೊಡೆದು ತೊಡೆ ತಟ್ಟಿರುವ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಸ್ಪರ್ಧಿಸುವ ಯಮಕನಮರಡಿ ಮತಕ್ಷೇತ್ರದಲ್ಲಿ ಇಂತಹದೊಂದು ಸನ್ನಿವೇಶ ನಡೆಯುತ್ತಿರುವದು ವಿಶೇಷವಾಗಿದೆ.

    ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ ಭೀಮನಗರದಲ್ಲಿ ಇಂತಹದೊಂದು ದೆವ್ವದ ಕಾಟದ ಸನ್ನಿವೇಶ ನಡೆಯುತ್ತಿದ್ದು, ಸದ್ಯ ಭೀಮನಗರದಲ್ಲಿ 7 ದಿನಗಳಲ್ಲಿ (ಒಂದೇ ವಾರದಲ್ಲಿ) 6 ಜನ ಮೃತಪಟ್ಟಿದ್ದಾರೆ. ಅಲ್ಲದೆ  ಈ ಭೀಮನಗರಕ್ಕೆ ದೆವ್ವದ ಕಾಟ ಶುರುವಾಗಿದೆ. ದೆವ್ವ ಆತ್ಮ ನಮ್ಮ ಗಲ್ಲಿಯಲ್ಲಿ ಅಲೇದಾಡುತಿದೆ ಎನ್ನುವ ಕಾರಣಕ್ಕಾಗಿ ದೈವದ ಮೊರೆ ಹೋಗಿರುವ ಜನರಿಗೆ 15 ದಿನಗಳವರೆಗೆ ಯಾವ ಕುಟುಂಬದವರು ಮಾಂಸವನ್ನು ಗಲ್ಲಿಗೆ ತರುವದು ಹಾಗೂ ತಿನ್ನುವದನ್ನು ನಿಷೇಧ ಮಾಡಲಾಗಿದೆ.

    ಅಲ್ಲದೆ ದೈವ ಹೇಳಿದ ಪ್ರಕಾರ ಯಮಕನಮರಡಿಯ ಭೀಮ ನಗರದಲ್ಲಿ ದಿನನಿತ್ಯ ಸಂಜೆ 7 ಗಂಟೆಗೆಯಾದರೇ ಸಾಕು ಗಲ್ಲಿಯಲ್ಲಿರುವ ದುರ್ಗಾದೇವಿಯ ಮಂದಿರಲ್ಲಿ ಹಾಗೂ ತಮ್ಮ ತಮ್ಮ ಮನೆ ಅಂಗಳದಲ್ಲಿ ದೀಪಗಳನ್ನು ಹಚ್ಚಿ ಬಾಗಿಲುಗಳನ್ನು ಬಂದ ಮಾಡಿಕೊಂಡು ಭಯದಲ್ಲಿ ಮನೆಯೊಳಗೆ ಕಾಲ ಕಳೆಯುತ್ತಿದ್ದಾರೆ.

   ಆದರೆ ಕೆಲವರು ಹೇಳುವ ಪ್ರಕಾರ ಭೀಮನಗರದ ಬಳಿ ಒಂದು ದೇವಿಯ ದೇವಸ್ಥಾನ ಇತ್ತು. ಆ ದೇವರ ಹೆಸರಿನಲ್ಲಿ ಇದ್ದ ಬೇವಿನ ಮರವನ್ನು ಕಡಿದು ಹಾಕಲಾಗಿದ್ದು ಅದರಿಂದ ಎಲ್ಲ ಜನರಿಗೆ ದೈವದಿಂದ ತೊದರೆ ಉಂಟಾಗುತ್ತಿದೆ ಎಂದು ಕೆಲವರು ಹೇಳುತ್ತಿದ್ದರೆ ಇನ್ನೂ ಕೆಲವರು ಈ ಪ್ರದೇಶ ದೆವ್ವ, ಪ್ರೆತಗಳು ಅಲೇದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಈ ಭೀಮನಗರದಲ್ಲಿ 11 ದಿನಗಳವರೆಗೆ ಯಾವ ಕುಟುಂಬದವರೂ ಕೂಡ ಗಲ್ಲಿ ಒಳಗೆ ಮಾಂಸ ತರುವದಾಗಲಿ ಅಥವಾ ತಿನ್ನುವದಾಗಲಿ ನಿಷೇಧ ಮಾಡಲಾಗಿದೆ.

    ಅಲ್ಲದೆ ಭೀಮನಗರದಲ್ಲಿ ಒಂದೇ ವಾರ (7ದಿನಗಳಲ್ಲಿ)ದಲ್ಲಿ 6 ಜನರು ತೀರಿಕೊಂಡಿರುವದು ಅಲ್ಲಿನ ಜನರನ್ನು ಭಯಭೀತರನ್ನಾಗಿ ಮಾಡಿದೆ. ಅಲ್ಲದೆ ನಿದ್ದೆಗೇಡು ಆಗುವಂತೆ ಮಾಡಿದೆ. ಈ ವಿಷಯವು ಗ್ರಾಮದಲ್ಲಿ ಚರ್ಚೆಗೆ ಗ್ರಾಸ್‌ವಾಗಿದೆ. 

ಸುದ್ದಿ ಓದಿ