ಕುಲ ಜಾತಿ ಮೆಟ್ಟಿನಿಂತ ಮಹಾ ಮಾನವತವಾದಿ ಅಂಕಲಿಮಠದ ನಿರುಪಾಧೀಶ್ವರರು: ಬೆಟ್ಟಪ್ಪ
ಹಂಪಿ 1: ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಅಂಕಲಿಮಠದ ನಿರುಪಾಧೀಶ್ವರರನ್ನು ಕುರಿತು ಕನ್ನಡ ವಿಶ್ವವಿದ್ಯಾಲಯದಲ್ಲಿ ಜಾನಪದ ಅಧ್ಯಯನ ವಿಭಾಗದ ದೇಶಿ ಮಾತು-8 ಸಂವಾದ ಕಾರ್ಯಕ್ರಮದಲ್ಲಿ ಅಂಕಲಿಮಠದ ನಿರುಪಾಧೀಶ್ವರರ ಸಮಕಾಲಿನ ಸ್ಥಿತಿಗಳು (ಕ್ರಿ, ಶ 1797-1877)” ಕುರಿತು ಪಿಎಚ್.ಡಿ. ಸಂಶೋಧನಾರ್ಥಿ ಬೆಟ್ಟಪ್ಪ ಪ್ರಬಂಧವನ್ನು ಮಂಡಿಸಿದರು. ಬ್ರಿಟಿಷ್ ಈಸ್ಟ್ಟ್ ಇಂಡಿಯಾ ಸರ್ಕಾರದ ಕಾಲದಿಂದಲೂ ಮೈಸೂರು ಸಂಸ್ಥಾನ, ಹೈದರಾಬಾದ್ ನಿಜಾಮ ಸಂಸ್ಥಾನಗಳಲ್ಲಿ ತಳ ಸಮುದಾಯಗಳ ಜನ ಜೀವನದ ದಿನನಿತ್ಯದ ಬದುಕಿನ ಚಹರೆಗಳನ್ನು ಎಳೆ-ಎಳೆಯಾಗಿ ಕಟ್ಟಿಕೊಟ್ಟರು. ಜೊತೆಗೆ ಅಂದಿನ ಕಾಲದ ರಾಜಕೀಯ ಸ್ಥಿತಿ-ಗತಿಗಳನ್ನು ಸಮೀಕರಿಸಿಕೊಂಡು ಅನ್ಯ ಶಿಸ್ತು ಜ್ಞಾನದಿಂದ ಉದಾರಿಸಿದರು.
ನಿರುಪಾಧೀಶ್ವರರ ಶಿಷ್ಯ ಪರಂಪರೆಯಲ್ಲಿನ ನವಲುಗುಂದ ನಾಗಲಿಂಗ ಅವಧೂತರು, ಬನಹಟ್ಟಿ ರುದ್ರದೇವರು, ಗದಗಿನ ಶಿವನಂದಪ್ಪನವರು, ಇಂಚಲದ ಶಿವಯೋಗಿಗಳು, ಇಟಗಿ ಭೀಮಾಂಬಿಕೆಯವರು ಇನ್ನೂ ಮುಂತಾದವರ ಜೀವನ ಚರಿತ್ರೆಯನ್ನು ಸಂಶೋಧನಾರ್ಥಿ ಬೆಟ್ಟಪ್ಪನವರು ಕಟ್ಟಿಕೊಟ್ಟರು ಮತ್ತು ಸಂವಾದದಲ್ಲಿ ಸಂಶೋಧನಾರ್ಥಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಸಹೃದಯದಿಂದ ಉತ್ತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೀರೇದ್ರಕುಮಾರ ಎಂ, ಪಿಎಚ್.ಡಿ ಸಂಶೋಧನಾರ್ಥಿ ಯಾವುದೇ ಕಾಲದ ಬಿಕ್ಕಟ್ಟಿನ ಚಹರೆಗಳು ಜೀವಂತಿಕೆಯಿಂದ ಇದ್ದರೆ ಪ್ರತಿರೋಧಗಳನ್ನು ಹುಟ್ಟು ಹಾಕುತ್ತಿರುತ್ತದೆ ಎಂದು ಅಂದಿನ ಕಾಲದ ಕೆಲವು ಸಂಪ್ರದಾಯವಾದಿಗಳು, ನಿಜಾಮ ಸಂಸ್ಥಾನದ ಕೆಲವು ಪಾಳೆಪಟ್ಟುಗಳು ಹಾಗೂ ಜನ ಹೋರಾಟಗಳನ್ನು ಸಾಕ್ಷೀಕರಿಸಿದರು. ಜೊತೆಗೆ ಶಿರಸಂಗಿ ಸಂಸ್ಥಾನದ ಜಾಯಗೊಂಡ ದೇಸಾಯಿಯ ಇಂದಿನ ಕಾಲದ ಶೈಕ್ಷಣಿಕ ಕ್ಷೇತ್ರಕ್ಕೆ ಭೂದಾನವನ್ನು ಮಾಡಿರುವುದನ್ನು ಕೂಡ ನೆನೆದರು.
ಸಂಶೋಧನಾರ್ಥಿ ಹನುಮಂತ ಡಿ. ನಿರೂಪಣೆ ಮಾಡಿದರು. ಪರಿವೀನ್ ಬೇಗಮ್ ಪ್ರಾರ್ಥನೆ ಮಾಡಿದರು. ಮಲ್ಲಪ್ಪ ಭೀಮರಾಯ ಸ್ವಾಗತಿಸಿದರು. ಸತೀಶ್ ಕುಮಾರ ತಿಮ್ಮಣ್ಣ ವಂದನಾರ್ಪಣೆ ಮಾಡಿದರು. ಪಾಲಯ್ಯ ಪಿ. ವರದಿ ಮಾಡಿದರು ಮತ್ತು ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರು ಉಪಸ್ಥಿತರಿದ್ದರು.