ವಿಜಯಪುರ

ಜಿ ಯೋಜನೆ ಕಾಮಗಾರಿ ಸ್ಥಳಕ್ಕೆ ಉಪ ಕಾರ್ಯದರ್ಶಿ ಭೇಟಿ

ಜಿ ಯೋಜನೆ ಕಾಮಗಾರಿ ಸ್ಥಳಕ್ಕೆ ಉಪ ಕಾರ್ಯದರ್ಶಿ ಭೇಟಿ

ದೇವರಹಿಪ್ಪರಗಿ 14 : ವಿಜಯಪುರ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಅವರು ಸಾತಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೈರವಾಡಗಿ ಗ್ರಾಮದ ಸೋನಾಬಾಯಿ ಹಳ್ಳದಲ್ಲಿ ನಡೆಯುತ್ತಿರುವ ಹೂಳೆತ್ತುವ  ಜಿ ಯೋಜನೆಯ ಕಾಮಗಾರಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಕಾಮಗಾರಿ ಪ್ರಗತಿ ಹಾಗೂ ಕೂಲಿಕಾರರ ಹಾಜರಾತಿ ಪರೀಶೀಲಿಸಿದರು. ಎನ್‌ಎಂಎಂಎಸ್ ಆ್ಯಪ್ ಮೂಲಕ ಪರೀಶೀಲಿಸಿದಾಗ 81 ಕೂಲಿಕಾರರ ಎನ್‌ಎಂಆರ್ ಸೃಜನೆಯಾಗಿದ್ದು, 44 ಮಂದಿ ಮಾತ್ರ ಹಾಜರಿರುವುದು ಕಂಡುಬಂದಿತು. ಗೈರುಹಾಜರಾತಿಗೆ ಕಾರಣ ತಿಳಿದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಪ್ರತಿದಿನ ಕಡ್ಡಾಯವಾಗಿ ಎನ್‌ಎಂಎಂಎಸ್ ಮೂಲಕ ಹಾಜರಾತಿ ದಾಖಲಿಸುವಂತೆ ನಿರ್ದೇಶಿಸಿದರು. 

ಹೆಚ್ಚಿನ ಕೂಲಿಕಾರರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಕ್ರಿಯಾ ಯೋಜನೆಯಲ್ಲಿ ಕೂಲಿ ಆಧಾರಿತ ಕಾಮಗಾರಿಗಳನ್ನು ಹೆಚ್ಚಿಸುವಂತೆ ಪಿಡಿಒ ಅವರಿಗೆ ಸೂಚಿಸಿದ ಅವರು, ಗ್ರಾಮದಲ್ಲಿ ಸುಮಾರು 400 ಕೂಲಿಕಾರರಿಗೆ ಉದ್ಯೋಗ ಒದಗಿಸುವ ಗುರಿ ನೀಡಿದರು. ಕಾಮಗಾರಿ ಸ್ಥಳದಲ್ಲಿ ಕುಡಿಯುವ ನೀರು, ನೆರಳು ಹಾಗೂ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಕಡ್ಡಾಯವಾಗಿ ಲಭ್ಯವಿರುವಂತೆ ಸೂಚಿಸಿದರು.  ಕೂಲಿಕಾರರೊಂದಿಗೆ ಸಂವಾದ ನಡೆಸಿದ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ, ಯೋಜನೆಯಡಿ 125 ದಿನಗಳವರೆಗೆ ಉದ್ಯೋಗಾವಕಾಶವಿದ್ದು, ವೇತನ ಪಾವತಿಯಲ್ಲಿ ಆರಂಭಿಕ ಹಂತದಲ್ಲಿ ವಿಳಂಬವಾಗಬಹುದಾದರೂ ಕೆಲಸ ಮುಂದುವರಿಸುವಂತೆ ಮನವರಿಕೆ ಮಾಡಿದರು.

ಮಕ್ಕಳ ಶಿಕ್ಷಣದ ಮಹತ್ವದ ಕುರಿತು ಕೂಡ ತಿಳಿಸಿದರು. ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ ಚಲುವಯ್ಯ ಅವರು   ಕೆಲಸದ ಬೇಡಿಕೆ ಸಲ್ಲಿಸುವ ಪ್ರತಿಯೊಬ್ಬರಿಗೂ ಉದ್ಯೋಗ ಕಲ್ಪಿಸುವುದಾಗಿ ಭರವಸೆ ನೀಡಿದರು. ಈ ವೇಳೆ ಕೂಲಿಕಾರರು ಲಂಬಾಣಿ ಭಾಷೆಯಲ್ಲಿ ಹಾಡು ಹಾಡಿದ್ದು, ಉಪ ಕಾರ್ಯದರ್ಶಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಅಧಿಕಾರಿಗಳಾದ ಶಾಂತಗೌಡ ನ್ಯಾಮಣ್ಣವರ, ಶಿವಾನಂದ ಮೂಲಿಮನಿ, ಶರಣಗೌಡ ಪಾಟೀಲ, ಸಿದ್ದು ಕಾಂಬಳೆ ಸೇರಿದಂತೆ ತಾ.ಪಂ ಸಿಬ್ಬಂದಿ ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು. 


ಸುದ್ದಿ ಓದಿ