ಹಗರಿಬೊಮ್ಮನಹಳ್ಳಿ

ಕಾಮಗಾರಿ ಪರೀಶೀಲಿಸಿದ ಲೋಕೊಪಯೋಗಿ ಇಲಾಖೆ ಎಕ್ಸಿಕ್ಯೋಟಿವ್ ಇಂಜೀನೀಯರ್

ಕಾಮಗಾರಿ ಪರೀಶೀಲಿಸಿದ ಲೋಕೊಪಯೋಗಿ ಇಲಾಖೆ ಎಕ್ಸಿಕ್ಯೋಟಿವ್ ಇಂಜೀನೀಯರ್

ಹಗರಿಬೊಮ್ಮನಹಳ್ಳಿ 16: ಪಟ್ಟಣದ ಬಸ್ ನಿಲ್ದಾಣದ ಬಳಿ ನಡೆಯುತ್ತಿರುವ ಚರಂಡಿ ಕಾಮಗಾರಿಯಲ್ಲಿ ಕಳಪೆಯಾಗಿದೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ, ಸಂಬಂಧಿಸಿದ ಹೂವಿನ ಹಡಗಲಿ ಪಿಡಬ್ಲುಡಿ ಉಪ ವಿಭಾಗದ ಇಇ ಕೆ.ಎಸ್‌.ಶ್ರೀನಿವಾಸ ಸೋಮವಾರ ಸಂಜೆ ಭೇಟಿ ನೀಡಿ ಪರೀಶೀಲಿಸಿದರು. 

ಪ್ರಸ್ತುತ ಕಾಮಗಾರಿಯು 4ಕೋಟಿ ರೂ.ಗಳದ್ದಾಗಿದ್ದು, ಇದರಲ್ಲಿ ಚರಂಡಿ ಕಾಮಗಾರಿ ನಿರ್ಮಾಣ ಸಂಪೂರ್ಣ ಕಳಪೆಯಾಗಿದ್ದು, ಮಳೆಗೆ ಚರಂಡಿಯ ಗೋಡೆಗಳು ಒಂದರ ಮೇಲೆ ಒಂದು ಒರಗಿಕೊಂಡಿದ್ದವು.ಕಳಪೆ ಕಾಮಗಾರಿಯ ವಿರುಧ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದನ್ನು ಪತ್ರಿಕೆಯು ನ.07ರಂದು ಸುದ್ದಿಯನ್ನು ಬಿತ್ತರಿಸಿತ್ತು ಹಾಗೂ ನ.08ರಂದು ಪುರಸಭೆ ಮಾಜಿ ಸದಸ್ಯರಾದ ಜೋಗಿ ಹನುಮಂತಪ್ಪ, ತಳವಾರ ರಾಘವೇಂದ್ರ, ವಿ.ಕನಕಪ್ಪ, ಮುಖಂಡ ಬಲ್ಲಾಹುಣಸಿ ರಾಮಣ್ಣ ಸೇರಿದಂತೆ ಅನೇಕರು ಆರೋಪಿಸಿದ್ದರು. ನ.8ರಂದು ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು. ಕಳಪೆಯಾಗಿರುವ ಕಾಮಗಾರಿಯನ್ನು ಕೆ.ಎಸ್‌.ಶ್ರೀನಿವಾಸ ಮತ್ತು ಇಲ್ಲಿಯ ಪ್ರಬಾರಿ ಎಇಇ ಗಣಪತಿನಾಯ್ಕ್‌ ಸಿಬ್ಬಂದಿವರ್ಗ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸಿದರು. 

ಈ ವೇಳೆ ಮುಖಂಡ ಬಲ್ಲಾಹುಣಸಿ ರಾಮಣ್ಣ ಅಧಿಕಾರಿಗಳಿಗೆ ಮಾಹಿತಿ ನೀಡುವ ಮೂಲಕ ಸರ್ಕಾರದ ಇಲಾಖೆಯ ನಿರ್ದೇಶದಂತೆ ಅಳತೆ ಎಲ್ಲಿಂದ ಎಲ್ಲಿಗೆ ಇದೆ, ಕಾಮಗಾರಿ ಗುಣಮಟ್ಟ ಎಷ್ಟರ ಮಟ್ಟಿಗೆ ಇದೆ, ಇದು ಮುಂದಿನ ಹತ್ತಾರು ವರ್ಷಗಳ ಕಾಲ ದೃಢವಾಗಿರಬೇಕು. ಅದು ಬಿಟ್ಟು ಮೂರೇದಿನಕ್ಕೆ ಕುಸಿದರೆ ಮುಂದಿನ ಪರಿಸ್ಥಿತಿ ನೀರೀಕ್ಷೆಮಾಡಲು ಸಾಧ್ಯನಾ ಎಂದು ಪ್ರಶ್ನಿಸಿದರು.  

ಈ ಬಗ್ಗೆ ಕೆ.ಎಸ್‌.ಶ್ರೀನಿವಾಸ ಕಾಮಗಾರಿ ಬಗ್ಗೆ ಪ್ರತಿಕ್ರಿಯಿಸಿ ಕಾಮಗಾರಿ ಪರೀಶೀಲಿಸಲಾಗಿ, ನಮ್ಮ ಇಲಾಖೆಯ ಅಳತೆ ಮತ್ತು ಗುಣಮಟ್ಟವನ್ನು ಮತ್ತೊಮ್ಮೆ ಪರೀಶೀಲಿಸಿ, ಮುಂದಿನ ಕ್ರಮ ಕೈಗೊಂಡು ಕಾಮಗಾರಿ  ಸಂಪೂರ್ಣ ಸರಿಪಡಿಸುವ ಜೊತೆಗೆ ಕ್ರಮ ಕೈಗೋಳ್ಳುತ್ತೇವೆ. ಎಂದು ತಿಳಿಸಿದರು. 

ಚರಂಡಿ ಕಾಮಗಾರಿ ಮನಬಂದಂತೆ ನಿರ್ಮಾಣವಾಗಿದೆ, ಇದನ್ನು ಇಲಾಖೆಯ ಅಧಿಕಾರಿಗಳು ಸರಿಯಾಗಿ ಪರೀಶೀಲಿಸಿ ಕ್ರಮ ಕೈಗೊಳ್ಳಬೇಕು. ಕಳಪೆ ಕಾಮಗಾರಿಗೆ ಅವಕಾಶ ನೀಡದೆ ಗುಣಮಟ್ಟದ ಕಾಮಗಾರಿ ನಿರ್ಮಾಣ ಮಾಡುವಂತೆ ಕ್ರಮ ಕೈಗೊಳ್ಳಬೇಕು. ಗುತ್ತಿಗೆದಾರರ ಮೇಲೆ ಕ್ರಮ ಜರುಗಿದಬೇಕು ಎಂದು ಜೋಗಿ ಹನುಮಂತಪ್ಪ, ತಳವಾರ ರಾಘವೇಂದ್ರ, ವಿ.ಕನಕಪ್ಪ ಪುರಸಭೆ ಮಾಜಿ ಸದಸ್ಯರು ಆಗ್ರಹಿಸಿದರು. 

ಇಲಾಖೆಯ ನಿರ್ದೇಶನದಂತೆ ಮಧ್ಯರಸ್ತೆಯಿಂದ 60ಅಡಿಗಳ ಕಾಮಗಾರಿ ನಡೆಯುತ್ತಿದ್ದು, ಅದರಲ್ಲಿ ಚರಂಡಿಯ ಹೊರಭಾಗವು ಸೇರಿದೆ, ಚರಂಡಿ ಕಾಮಗಾರಿಯ ಸ್ಥಳಕ್ಕೆ ಮೇಲಾಧಿಕಾರಿಗಳು ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ, 15ರಿಂದ 20 ದಿನಗಳಲ್ಲಿ ಕಾಮಗಾರಿಯನ್ನು ಅಂದಾಜು ಪಟ್ಟಿಯಂತೆ ರೂಪಿಸಲಾಗುವುದು ಎಂದು ಹಗರಿಬೊಮ್ಮನಹಳ್ಳಿಯ ಲೋಕೋಪಯೋಗಿಯ ಪ್ರಭಾರಿ ಎಇಇ ಗಣಪತಿನಾಯ್ಕ್‌ ತಿಳಿಸಿದರು. 


ಸುದ್ದಿ ಓದಿ