ಕರಾಟೆ ತರಬೇತಿಗೆ ಗೌರವಧನ ಹೆಚ್ಚಿಸಲು ಆಗ್ರಹ
ಮುದ್ದೇಬಿಹಾಳ 27 : ಸರ್ಕಾರಿ ಪ್ರೌಢಶಾಲೆ, ಪಿಎಂಶ್ರೀ ಹಾಗೂ ವಸತಿ ಶಾಲೆಗಳ ವಿದ್ಯಾರ್ಥಿಗಳ ಆತ್ಮರಕ್ಷಣೆಗೆ ಕರಾಟೆ ತರಬೇತಿ ನೀಡಲು ಸಮಗ್ರ ಶಿಕ್ಷಣ ಇಲಾಖೆ ಮುಂದಾಗಿರುವುದು ಸ್ವಾಗತಾರ್ಹ. ಆದರೆ ತರಬೇತುದಾರರಿಗೆ ನೀಡುತ್ತಿರುವ ಗೌರವಧನ ಅತ್ಯಂತ ಕಡಿಮೆಯಾಗಿದ್ದು, ಇದರಿಂದ ತರಬೇತಿ ನೀಡಲು ಅಸಾಧ್ಯವಾಗುತ್ತಿದೆ ಎಂದು ರಾಜ್ಯ ಕರಾಟೆ ಶಿಕ್ಷಕರ ಸಂಘ ಆಕ್ಷೇಪಿಸಿದೆ.
ಸೆಪ್ಟೆಂಬರ್ನಿಂದ ಕರಾಟೆ ತರಬೇತಿ ಆರಂಭಿಸಿ ನವೆಂಬರ್ ಒಳಗೆ ಪೂರ್ಣಗೊಳಿಸುವಂತೆ ಇಲಾಖೆ ಸೂಚಿಸಿದೆ. ವಾರಕ್ಕೆ ಮೂರು ತರಗತಿಗಳಂತೆ ತಿಂಗಳಿಗೆ 12 ಹಾಗೂ ಮೂರು ತಿಂಗಳಲ್ಲಿ 36 ತರಗತಿಗಳನ್ನು ನಡೆಸಬೇಕಿದೆ. ಇದಕ್ಕಾಗಿ ತರಬೇತುದಾರರಿಗೆ ಕೇವಲ 9,000 ಗೌರವಧನ ನಿಗದಿಪಡಿಸಲಾಗಿದ್ದು, ಒಂದು ತರಗತಿಗೆ 250 ಮಾತ್ರ ದೊರೆಯುತ್ತದೆ.
ಇದರ ಜೊತೆಗೆ ಒಂದು ಶಾಲೆಯಿಂದ ಮತ್ತೊಂದು ಶಾಲೆಗೆ ತೆರಳಲು ಕನಿಷ್ಠ 100 ಪ್ರಯಾಣ ವೆಚ್ಚವಾಗುತ್ತದೆ. ಹೀಗಾಗಿ ತರಬೇತುದಾರರಿಗೆ ನಿಗದಿಪಡಿಸಿರುವ ಗೌರವಧನ ಸಮರ್ಕವಾಗಿಲ್ಲ ಎಂದು ಸಂಘ ತಿಳಿಸಿದೆ.
ಈ ಕುರಿತು ಕಳೆದ ತಿಂಗಳೇ ಸಮಗ್ರ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಕೇಂದ್ರ ಕಚೇರಿಗೂ ಮನವಿ ರವಾನಿಸಲಾಗಿತ್ತು. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಂಘ ಆರೋಪಿಸಿದೆ. ವಿದ್ಯಾರ್ಥಿಗಳ ಆತ್ಮರಕ್ಷಣೆಗೆ ಮಹತ್ವದ ತರಬೇತಿ ನೀಡುತ್ತಿರುವ ಕರಾಟೆ ತರಬೇತುದಾರರಿಗೆ ಸೂಕ್ತ ಗೌರವಧನ ಹಾಗೂ ಪ್ರಯಾಣ ಭತ್ಯೆ ನೀಡಬೇಕು ಎಂದು ಸಂಘ ಆಗ್ರಹಿಸಿದೆ.
ಕೊಟ : ಕರಾಟೆ ತರಬೇತಿ ನೀಡಲು ಮುಂದಾಗಿರುವ ರಾಜ್ಯ ಸರಕಾರವು ಇಂದಿನ ದಿನಮಾನದ ವೆಚ್ಚದಲ್ಲಿ ಒಬ್ಬ ತರಬೇತುದಾರನಿಗೆ 500 ರೂಪಾಯಿ ತರಬೇತಿ ಒಂದು ಕ್ಲಾಸ್ಗೆ ಹಾಗೂ 200 ರೂಪಾಯಿ ಪ್ರಯಾಣ ಭತ್ಯೆಯನ್ನು ಒದಗಿಸಿದರೆ ತರಬೇತುದಾರರಿಗೆ ಹಾಗೂ ಮಕ್ಕಳಿಗೂ ಹೆಚ್ಚಿನ ಅನುಕೂಲವಾಗುತ್ತದೆ.
ಇದರ ಬಗ್ಗೆ ಈಗಾಗಲೇ ಸರಕಾರ ಮಟ್ಟದ ಅಧಿಕಾರಿಗಳಿಗೆ ಹಾಗೂ ನಮ್ಮ ಸಿಎಂ ಡಿ.ಕೆ.ಶಿವಕುಮಾರ ಅವರಿಗೂ ಮನವಿ ಪತ್ರ ನೀಡಿಲಾಗಿದೆ. ಇದನ್ನು ಅವಲೋಕನ ಮಾಡಬೇಕಾಗಿದೆ. ಸರಕಾರದ ಈ ಅವೈಜ್ಞಾನಿಕತೆಯಿಂದ ಯೋಜನೆಯೂ ಸಂಪೂರ್ಣವಾಗುವುದಿಲ್ಲ. ಅಲ್ಲದೇ ಈ ಯೋಜನೆಯ ಅನುದಾನವೂ ಸಮರ್ಕ ಬಳಕೆಯಾಗುವುದಿಲ್ಲ."-ಶಿವಕುಮಾರ ಶಾರದಳ್ಳಿ, ರಾಜ್ಯ ವಕ್ತಾರರು, ಕರಾಟೆ ಶಿಕ್ಷಕರ ಸಂಘ, ಮುದ್ದೇಬಿಹಾಳ.