ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರಿಗೆ ಸಚಿವ ಸ್ಥಾನ ನೀಡಲು ಒತ್ತಾಯ
ಲೋಕದರ್ಶನ ವರದಿ
ಕಂಪ್ಲಿ, 10: ಕ್ಷೇತ್ರ ಸೇರಿದಂತೆ ರಾಜ್ಯದ ಜನರ ನಾಡಿಮಿಡಿತ ಅರಿತಿರುವ ಶಾಸಕ ಜೆ.ಎನ್. ಗಣೇಶ್ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಜನಸೇವೆಗೆ ಮತ್ತಷ್ಟು ಅವಕಾಶ ಕಲ್ಪಿಸಬೇಕು ಎಂದು ರಾಮಸಾಗರ ಗ್ರಾಮದ ಗಂಗಾಮತ ಸಮಾಜದ ಅಧ್ಯಕ್ಷ ಬಿ. ಮಂಜುನಾಥ ಒತ್ತಾಯಿಸಿದರು. ಅವರು ತಾಲೂಕಿನ ರಾಮಸಾಗರ ಗ್ರಾಮದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿ, ಶಾಸಕ ಜೆ.ಎನ್. ಗಣೇಶ್ ಅವರು ಶಾಸಕರಾದ ಬಳಿಕ ಕಳೆದ ಎಂಟು ವರ್ಷಗಳಲ್ಲಿ ಸಾಕಷ್ಟು ಅನುದಾನಗಳನ್ನು ತಂದು ಗ್ರಾಮ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಜನತೆಗೆ ಅಗತ್ಯವಾದ ಮೂಲಸೌಕರ್ಯ ಹಾಗೂ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.
ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಅವುಗಳ ಪರಿಹಾರಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ ಶಾಸಕರ ಕಾರ್ಯ ಶ್ಲಾಘನೀಯವಾಗಿದೆ. ಸಚಿವ ಸ್ಥಾನ ದೊರೆತರೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದರ ಜೊತೆಗೆ ರಾಜ್ಯದ ಜನರ ಸಂಕಷ್ಟಗಳಿಗೆ ಸಮಯೋಚಿತವಾಗಿ ಸ್ಪಂದಿಸಲು ಸಾಧ್ಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್, ರಾಜ್ಯದ ಹಿರಿಯ ನಾಯಕರು ಹಾಗೂ ಮುಖ್ಯಮಂತ್ರಿ ಅವರು ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡಬೇಕು ಎಂದು ಬಿ. ಮಂಜುನಾಥ ಆಗ್ರಹಿಸಿದರು.