ವಿಜಯಪುರ ಜಿಲ್ಲೆಗೆ 371ಜೆ ಮೀಸಲಾತಿ ಕಲ್ಪಿಸಲು ಒತ್ತಾಯ
ಮುದ್ದೇಬಿಹಾಳ 14 : ವಿಜಯಪುರ ಜಿಲ್ಲೆಯನ್ನು ಕಲ್ಯಾಣ ಕರ್ನಾಟಕ 371ಜೆ ಮೀಸಲಾತಿಗೆ ಸೇರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ವಿಕಲಚೇತನರ ವಿವಿಧೋದ್ದೇಶ , ಗ್ರಾಮೀಣ ಪುನರ್ವಸತಿ , ನಗರ ಪುನರ್ವಸತಿ ರಾಜ್ಯ ಒಕ್ಕೂಟ ಹಾಗೂ ತಾಲೂಕು ವಿಕಲಚೇತನರ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಜಾಥಾ ನಡೆಯಿತು.
ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಡಾ. ಡಿ.ಎಂ. ನಂಜುಂಡಪ್ಪ ವರದಿ ಆಧಾರದ ಮೇಲೆ ರಾಜ್ಯದ ಹಿಂದುಳಿದ ಜಿಲ್ಲೆಗಳಿಗೆ 371 ಜೆ ಮೀಸಲಾತಿ ಕಲ್ಪಿಸಲಾಗಿದ್ದು, ಅತ್ಯಂತ ಹಿಂದುಳಿದ ವಿಜಯಪುರ ಜಿಲ್ಲೆಯನ್ನು ಇದರಿಂದ ಹೊರಗಿಟ್ಟಿರುವುದು ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಪದವೀಧರ ಒಕ್ಕೂಟದ ಮುಖಂಡ ಚಂದ್ರಶೇಖರ ಹೊಸಮನಿ ಮಾತನಾಡಿ, ವಿಜಯಪುರ ಜಿಲ್ಲೆಯನ್ನು ಕೂಡಲೇ 371ಜೆ ಮೀಸಲಾತಿ ವ್ಯಾಪ್ತಿಗೆ ಸೇರಿಸಿ ಜಿಲ್ಲೆಯ ಜನರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು. ಸಂಘಟನೆಯ ಮುಖಂಡರು ಹಾಗೂ ನೂರಾರು ಪ್ರತಿಭಟನಾಕಾರರು ಜಾಥಾದಲ್ಲಿ ಭಾಗವಹಿಸಿದ್ದರು.