1978ಕ್ಕೂ ಮುನ್ನ ಅರಣ್ಯ ಭೂಮಿ ಸಾಗುವಳಿ ಮಾಡಿದ ರೈತರಿಗೆ ಹಕ್ಕುಪತ್ರಕ್ಕೆ ಆಗ್ರಹ
ಕಾರವಾರ 17 : ಉತ್ತರ ಕನ್ನಡ ಜಿಲ್ಲೆಯಲ್ಲಿ 1978ಕ್ಕೂ ಮುನ್ನ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಅರ್ಹ ರೈತರಿಗೆ ತಕ್ಷಣ ಹಕ್ಕುಪತ್ರ ಹಾಗೂ ಪಹಣಿ ನೀಡಬೇಕು ಎಂದು ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
1969ರ ಸರ್ಕಾರಿ ಆದೇಶದಂತೆ ಬಾಕಿ ಉಳಿದಿರುವ ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡಿ, ಅರ್ಹ ರೈತರಿಗೆ ಹಕ್ಕುಪತ್ರ ವಿತರಿಸಬೇಕು ಎಂದು ಮುಖಂಡರು ಒತ್ತಾಯಿಸಿದರು. ಹಕ್ಕುಪತ್ರದ ಕೊರತೆಯಿಂದ ರೈತರು ಕೃಷಿ ಸಾಲ, ಮಕ್ಕಳ ಶಿಕ್ಷಣ ಸಾಲ ಹಾಗೂ ಬೆಳೆ ವಿಮೆ ಸೇರಿದಂತೆ ವಿವಿಧ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಜಿಪಿಎಸ್ ಸರ್ವೇ ಪೂರ್ಣಗೊಂಡಿರುವ ಅರಣ್ಯ ಸಾಗುವಳಿ ಜಮೀನುಗಳಿಗೆ ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಕಂದಾಯ ದಾಖಲೆಗಳ 11ನೇ ಕಾಲಂನಲ್ಲಿರುವ ರೈತರ ಹೆಸರುಗಳನ್ನು 9ನೇ ಕಾಲಂಗೆ ವರ್ಗಾಯಿಸುವ ಪ್ರಕ್ರಿಯೆಯನ್ನೂ ತ್ವರಿತಗೊಳಿಸಬೇಕು ಎಂದು ಆಗ್ರಹಿಸಲಾಯಿತು.
ಮಳೆಹಾನಿ ಹಾಗೂ ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಪ್ರತಿ ಎಕರೆಗೆ ಕನಿಷ್ಠ ?25 ಸಾವಿರ ಪರಿಹಾರ ನೀಡಬೇಕು ಮತ್ತು ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಲಾಯಿತು.
ಬೇಡಿಕೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸದಿದ್ದರೆ ಮುಂಡಗೋಡು ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಿ, ಬಳಿಕ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸುವುದಾಗಿ ರಾಜ್ಯಾಧ್ಯಕ್ಷ ಚಿದಾನಂದ ಎಚ್. ಹರಿಜನ ಎಚ್ಚರಿಸಿದರು. ಉಪಾಧ್ಯಕ್ಷ ಭೀಮಸಿ ವಾಲ್ಮೀಕಿ, ಜಿಲ್ಲಾಧ್ಯಕ್ಷ ರಾಮಚಂದ್ರ ಹರಿಜನ, ಸೋಮಲಿಂಗ ಬೆಣ್ಣೆ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.