ಅನ್ಯಭಾಷೆಯ ನಾಮಫಲಕ ತೆರವಿಗೆ ಆಗ್ರಹ
ಬಾಡಗಿ, 25: ಪಟ್ಟಣ ಹಾಗೂ ತಾಲ್ಲೂಕಿನ ವಿವಿಧೆಡೆ ಅಳವಡಿಸಿರುವ ಅನ್ಯಭಾಷೆಯ ನಾಮಫಲಕಗಳನ್ನು ತೆರವುಗೊಳಿಸಿ, ಕನ್ನಡ ಭಾಷೆಗೆ ಆದ್ಯತೆ ನೀಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ತಹಶೀಲ್ದಾರ್ ಹಾಗೂ ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಗೀರೀಶ್ ಭಾರ್ಗಿ, ಕನ್ನಡಕ್ಕೆ ನಾಮಫಲಕಗಳಲ್ಲಿ ಆದ್ಯತೆ ನೀಡುವಂತೆ ಸರ್ಕಾರದ ಆದೇಶವಿದ್ದರೂ, ಪೆಟ್ರೋಲ್ ಬಂಕ್ಗಳು, ಕೈಗಾರಿಕಾ ಪ್ರದೇಶಗಳು, ಸಾರ್ವಜನಿಕ ಸ್ಥಳಗಳು, ಅಂಗಡಿ-ಮುಂಗಟ್ಟುಗಳು ಹಾಗೂ ವಾಣಿಜ್ಯ ಸಂಸ್ಥೆಗಳ ನಾಮಫಲಕಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಸರ್ಕಾರದ ಆದೇಶವನ್ನು ಪಾಲಿಸದ ವ್ಯಾಪಾರ ಮಳಿಗೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯಿತಿಗಳಿಗೆ ಸೂಕ್ತ ಸೂಚನೆ ನೀಡಿ, ನಾಮಫಲಕಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡುವಂತೆ ಕ್ರಮ ವಹಿಸಬೇಕು ಎಂದು ಅವರು ಒತ್ತಾಯಿಸಿದರು.
ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯ ಬಳಕೆ ಹಾಗೂ ಗೌರವವನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಕನ್ನಡಕ್ಕೆ ಗೌರವ ನೀಡದೆ ಅಳವಡಿಸಿರುವ ಅನ್ಯಭಾಷೆಯ ನಾಮಫಲಕಗಳನ್ನು ತೆರವುಗೊಳಿಸಬೇಕು. ಮುಂದಿನ ದಿನಗಳಲ್ಲಿ ಅನ್ಯಭಾಷೆಯ ನಾಮಫಲಕಗಳನ್ನು ಅಳವಡಿಸಿದರೆ ಅಂತಹ ನಾಮಫಲಕಗಳನ್ನು ತೆರವುಗೊಳಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ತಾಲ್ಲೂಕು ಅಧ್ಯಕ್ಷ ನಾಗೇಶ ಪೂಜಾರ ಮಾತನಾಡಿ, ಅನ್ಯಭಾಷೆಯಲ್ಲಿ ಅಳವಡಿಸಿರುವ ನಾಮಫಲಕಗಳನ್ನು ಪರೀಶೀಲಿಸಿ, ನಿಯಮಾನುಸಾರ ಕ್ರಮ ಕೈಗೊಂಡು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು. ಕನ್ನಡ ಭಾಷೆಯ ಬಳಕೆಗೆ ಸಂಬಂಧಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಉಲ್ಲಂಘಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಬಾಡಗಿ ಕುಮಾರ ಕುಪ್ಪೆಲೂರು ಉಪಾಧ್ಯಕ್ಷರು, ಪ್ರವೀಣ್ ಕುಮಾರ್ ಛತ್ರ ಗ್ರಾಮ ಘಟಕ ಅಧ್ಯಕ್ಷರು, ಯಲ್ಲಪ್ಪ ಪೊಟೇರ್, ಸಾಮಾಜಿಕ ಜಾಲತಾಣ ಸಂಚಾಲಕರಾದ ಈರಮ್ಮ ಕಡಶಾಲೆ, ಮಾದೇವ್, ಸತ್ಯವತಿ ಬಿ. ಹೆಚ್. ಬಣಕಾರ್, ರೂಪ ತಾಳೂರು ಸೇರಿದಂತೆ ಹಲವರು ಭಾಗವಹಿಸಿದ್ದರು.