ಮುದ್ದೇಬಿಹಾಳದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ಆರಂಭಕ್ಕೆ ಒತ್ತಾಯ
ಮುದ್ದೇಬಿಹಾಳದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ಆರಂಭಕ್ಕೆ ಒತ್ತಾಯ
ಮುದ್ದೇಬಿಹಾಳ 16: ಕಳೆದ ಬಜೆಟ್ನಲ್ಲಿ ಮಂಜೂರಾಗಿರುವ ಮುದ್ದೇಬಿಹಾಳ ಗ್ರಾಮಾಂತರ ಪೊಲೀಸ್ ಠಾಣೆಯನ್ನು ಶೀಘ್ರವೇ ಕಾರ್ಯಾರಂಭಗೊಳಿಸುವಂತೆ ಮುದ್ದೇಬಿಹಾಳ ಜನಸೇವಾ ಸಂಸ್ಥೆಯ ಪದಾಧಿಕಾರಿಗಳು ಬೆಳಗಾವಿ ಐಜಿಪಿ ಸಂದೀಪ್ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಬಸರಕೋಡ ಗ್ರಾಮದ ಪವಾಡ ಬಸವೇಶ್ವರ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿದ ವೇಳೆ ಐಜಿಪಿ ಅವರನ್ನು ಭೇಟಿಯಾದ ಸಂಸ್ಥೆಯ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜನಸೇವಾ ಸಂಸ್ಥೆಯ ಅಧ್ಯಕ್ಷ ಶಂಕರ ಇ. ಹೆಬ್ಬಾಳ, "ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಮಂಡಿಸಲಾದ ಬಜೆಟ್ನಲ್ಲಿ ಮುದ್ದೇಬಿಹಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ಮಂಜೂರಾತಿ ನೀಡಲಾಗಿತ್ತು. ಶಾಸಕರಾದ ಸಿ.ಎಸ್. ನಾಡಗೌಡ ಅವರು ಬಸ್ ನಿಲ್ದಾಣದ ಸಮೀಪ ಠಾಣೆ ಆರಂಭಿಸಲು ಸ್ಥಳಾವಕಾಶ ಗುರುತಿಸಿ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆಯನ್ನೂ ನಡೆಸಿದ್ದರು. ಆದರೂ ಇದುವರೆಗೆ ಠಾಣೆ ಕಾರ್ಯಾರಂಭವಾಗಿಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಐಜಿಪಿ ಸಂದೀಪ್ ಪಾಟೀಲ, ಈ ವಿಷಯ ಸರ್ಕಾರದ ಮಟ್ಟದಲ್ಲಿದ್ದು, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮನವಿ ವೇಳೆ ಮುದ್ದೇಬಿಹಾಳ ಬಸವೇಶ್ವರ ವೃತ್ತದಲ್ಲಿ ಪ್ರತಿದಿನ ಬೆಳಗ್ಗೆ 8ರಿಂದ 11 ಗಂಟೆಯವರೆಗೆ ಉಂಟಾಗುತ್ತಿರುವ ತೀವ್ರ ಸಂಚಾರ ದಟ್ಟಣೆ ಸಮಸ್ಯೆಯನ್ನೂ ಪ್ರಸ್ತಾಪಿಸಲಾಯಿತು. ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಚಾರಕ್ಕೆ ತೊಂದರೆ ಅನುಭವಿಸುತ್ತಿದ್ದು, ಸೂಕ್ತ ಸಂಚಾರ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಐಜಿಪಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿ, ಸ್ಥಳೀಯ ಪೊಲೀಸ್ ಅಧಿಕಾರಿಗಳ ಮೂಲಕ ಸಂಚಾರ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಡಿವೈಎಸ್ಪಿ ಚಂದ್ರಕಾಂತ ನಂದರಡ್ಡಿ, ಸಿಪಿಐ ಮೊಹಮ್ಮದ್ ಫಸೀವುದ್ದೀನ್, ಜನಸೇವಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಿ.ವೈ. ದಫೇದಾರ, ಖಜಾಂಚಿ ಹನುಮಂತ ನಲವಡೆ, ಪತ್ರಕರ್ತ ಅನೀಲಕುಮಾರ ತೇಲಂಗಿ, ಶ್ರೀಶೈಲ ಮೇಟಿ, ಅಪ್ಪು ನಾಡಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.