ದೆಹಲಿ ಹಿಂಸಾಚಾರ; ಮೃತರ ಸಂಖ್ಯೆ 20ಕ್ಕೇರಿಕೆ, ಸೇನೆ ನಿಯೋಜನೆಗೆ ಕೇಜ್ರೀವಾಲ್ ಮನವಿ
ನವದಹೆಲಿ, ಫೆ 26 : ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರ ತಾರಕಕ್ಕೇರಿದ್ದು, ಮೃತಪಟ್ಟವರ ಸಂಖ್ಯೆ 20ಕ್ಕೇರಿಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ ಸಿಎಎ ವಿರೋಧಿಗಳು ಮತ್ತು ಪರವಾಗಿರುವ ಜನರ ನಡುವೆ ನಡೆದ ಗಲಭೆಯಲ್ಲಿ 189 ನಾಗರಿಕರು ಮತ್ತು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಏತನ್ಮಧ್ಯೆ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರು ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಸೇನೆಯನ್ನು ನಿಯೋಜಿಸುವಂತೆ ಮನವಿ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಇಡೀ ರಾತ್ರಿ ನಾನು ಬೃಹತ್ ಸಂಖ್ಯೆಯ ಜನರೊಂದಿಗೆ ಸಂಪರ್ಕದಲ್ಲಿದ್ದೆ. ಪರಿಸ್ಥಿತಿ ಗಂಭೀರವಾಗಿದೆ. ಪೊಲೀಸರು ತಮ್ಮೆಲ್ಲಾ ಪರಿಶ್ರಮದ ನಡುವೆಯೂ ಪರಿಸ್ಥಿತಿಯನ್ನು ನಿಯಂತ್ರಿಸಲು ವಿಫಲರಾಗುತ್ತಿದ್ದಾರೆ. ಆದ್ದರಿಂದ ಪರಿಸ್ಥಿತಿ ನಿಯಂತ್ರಿಸಲು ಸೇನೆಯನ್ನು ನಿಯೋಜಿಸಬೇಕು. ಈ ಕುರಿತು ಗೃಹ ಸಚಿವರಿಗೆ ಪತ್ರ ಬರೆದಿದ್ದೇನೆ ಎಂದಿದ್ದಾರೆ.
ಈಶಾನ್ಯ ದೆಹಲಿ ಚಾಂದ್ ಭಾಗ್ ಪ್ರದೇಶದಲ್ಲಿ ಹೊಸ ಕಲಹ ಹಾಗೂ ಕಲ್ಲು ತೂರಾಟ ಪ್ರಕರಣಗಳು ವರದಿಯಾಗಿವೆ.
ಇಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ನಿರೀಕ್ಷೆಯಿದೆ.