ಸಂಕೇಶ್ವರ ತಾಲೂಕಾ ಕೇಂದ್ರವನ್ನಾಗಿ ಘೋಷಣೆ ಮಾಡಿ : ಸರಕಾರಕ್ಕೆ ಕನ್ನಡ ಚಳುವಳಿಗಾರರ, ನಾಗರಿಕರ ಒತ್ತಾಯ

ಸಂಕೇಶ್ವರ ತಾಲೂಕಾ ಕೇಂದ್ರವನ್ನಾಗಿ ಘೋಷಣೆ ಮಾಡಿ : ಸರಕಾರಕ್ಕೆ ಕನ್ನಡ ಚಳುವಳಿಗಾರರ, ನಾಗರಿಕರ ಒತ್ತಾಯ

ಸಂಕೇಶ್ವರ : ಸಂಕೇಶ್ವರ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡುವಂತೆ ಸಂಕೇಶ್ವರದ ಕನ್ನಡ ಚಳುವಳಿಗಾರರ ಸಂಘಟನೆ ಹಾಗೂ ನಾಗರಿಕರು ಸರಕಾರವನ್ನು ಒತ್ತಾಯಿಸಿದ್ದಾರೆ.

     ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಕುರಿತು ಪತ್ರದ ಮೂಲಕ ಮನವಿ ಮಾಡಿರುವ ಕನ್ನಡ ಚಳುವಳಿಗಾರರು, ಸಂಕೇಶ್ವರ ನಗರವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಲು ಕಳೆದ 40 ವರ್ಷದಿಂದ ಒತ್ತಾಯ ಮಾಡುತ್ತಾ ಬಂದಿದ್ದೇವೆ. ನಮ್ಮ ಸಂಘದಿಂದ ಹಲವಾರು ಸಾರಿ ಹಿಂದಿನ ಸರ್ಕಾರಗಳಿಗೂ ವಿನಂತಿಸುತ್ತ  ಮನವಿ ಸಲ್ಲಿಸಿದ್ದೇವೆ. ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣ 60,000 ಜನಸಂಖ್ಯೆ ಹೊಂದಿದ್ದು, ಇದರ ಸುತ್ತಮುತ್ತ 60 ಹಳ್ಳಿಗಳು ಸೇರಿಕೊಂಡಿವೆ. ಈ ಮೊದಲು ಸಂಕೇಶ್ವರ ವಿಧಾನ ವಿಧಾನಸಭಾ ಮತ ಕ್ಷೇತ್ರವಾಗಿತ್ತು. ನಾಲ್ಕು ಜಿಲ್ಲಾ ಪರತಿಷ ಸ್ಥಾನಗಳು 12 ತಾಲೂಕ ಪಂಚಾಯತ್‌ ಸ್ಥಾನಗಳು 22 ಗ್ರಾಮ ಪಂಚಾಯತಿ ಸ್ಥಾನಗಳು ಇವೆ.

   ಸಹಕಾರಿ ರಂಗದಲ್ಲಿ ಪ್ರಸಿದ್ಧಿ ಪಡೆದಿರುವಂತಹ ಸಂಕೇಶ್ವರವು, ಕೃಷಿ ಉತ್ಪನ್ನ ಮಾರುಕಟ್ಟೆ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ, ಕೃಷಿ ಸಂಶೋಧನಾ ಕೇಂದ್ರ, ಪ್ರಾಥಮಿಕ ಕೃಷಿ ಸಹಕಾರ ಸಂಘಗಳು ಅಲ್ಲದೆ ನೂರಕ್ಕೂ ಹೆಚ್ಚುಸಹಕಾರಿ ಸಂಘಟನೆ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ದಿವಾನಿ ನ್ಯಾಯಾಲಯ ಮೂರು ಶ್ರೇಣಿಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಸರ್ಕಾರಿ ಖಜಾನೆ ಕಚೇರಿ, ಉಪನೋಂದಣಿ ಕಛೇರಿ, ಭೂ ಮಾಪನ ಕಾರ್ಯಾಲಯ, ನಾಡಕಚೇರಿ, ಸಮುದಾಯ ಭವನಗಳು, ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ಕಚೇರಿಗಳಿವೆ.

    ಪೊಲೀಸ್ ಠಾಣೆ ವಲಯ, ಆರಕ್ಷಕ ನಿರೀಕ್ಷಕರ ಕಚೇರಿ, ಮೂವರು ಪೊಲೀಸ್ ನಿರೀಕ್ಷಕರ ಕಚೇರಿ ಇದ್ದು ,ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯ ವ್ಯಾಜ್ಯಗಳು ಸಂಕೇಶ್ವರದ ನ್ಯಾಯಾಲಯಕ್ಕೆ ಬರುತ್ತವೆ. ಆರೋಗ್ಯ ಕ್ಷೇತ್ರದಲ್ಲಿಯೂ ಹಲವಾರು ಆಸ್ಪತ್ರೆಗಳಿದ್ದು, ಇಲ್ಲಿಯ ಸರ್ಕಾರಿ ಆಸ್ಪತ್ರೆ ಎರಡನೂರು ಹಾಸಿಗೆಗಳನ್ನು ಹೊಂದಿದೆ.ನಾಲ್ಕು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇಲ್ಲಿ ಕಾರ್ಯನಿರ್ವಹಿಸುತ್ತವೆ. ಪೂನಾ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸಂಕೇಶ್ವರ ಮತ್ತು ನಿಪ್ಪಾಣಿ ನಡುವೆಕೇಂದ್ರ ಸರ್ಕಾರದ ಉದ್ದಿಮಿಗಳಾದ ಎಚ್.ಎಲ್.ಎಲ್, ಲೈಫ್ ಕೇರ್, ಇಂಡಿಯನ್ ಆಯಿಲ್ ಕಾರ್ಪೊರೇಷ ನ್ಸ್ಟ್ಯಾಂಟ್ ಅಲ್ಲದೆ ಕರ್ನಾಟಕ ಸರ್ಕಾರದಿಂದ ಕಣಗಲಾದಲ್ಲಿ 1500 ಎಕರೆ ಜಾಗದಲ್ಲಿ ಕೈಗಾರಿಕಾ ಅಭಿವೃದ್ಧಿ ವಲಯ ಸ್ಥಾಪನೆಯಾಗಿದೆ. ಅಲ್ಲಿ ಈಗಾಗಲೇ ಹಲವಾರು ಕಾರ್ಖಾನೆಗಳು ಕಾರ್ಯಾರಂಭವಾಗಿ ಉದ್ಯೋಗ ಸೃಷ್ಟಿಯಾಗಿದೆ. 

    ಹಲವಾರು ದಶಕಗಳಿಂದ ಪ್ರಸಿದ್ಧಿ ಪಡೆದಿರುವ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ, ಮತ್ತು ಕ.ರಾ.ಸಾ.ಸಂಸ್ಥೆಯ ಬಸ್ ಡಿಪೊ ಇವೆ.  ಅಲ್ಲದೆ ಅನೇಕ ಶಿಕ್ಷಣ ಸಂಸ್ಥೆಯ ಕಾಲೇಜು ಪ್ರೌಢ ಶಾಲೆಗಳು ಸಿ.ಬಿ.ಎಸ್.ಸಿ ಶಾಲೆಗಳು ಶೈಕ್ಷಣಿಕ ಪ್ರಗತಿಗೆ ಪೂರಕವಾಗಿವೆ. ಮಹಾರಾಷ್ಟ್ರದ ಗಡಿಭಾಗಕ್ಕೆ ಹೊಂದಿಕೊಂಡಿರುವ ಸಂಕೇಶ್ವರ ನಗರವನ್ನು ತಾಲೂಕ ಕೇಂದ್ರ ಮಾಡುವುದರಿಂದ ಕರ್ನಾಟಕದ ಗಡಿ ಗಟ್ಟಿಯಾಗಿ, ಕರ್ನಾಟಕಕ್ಕೆ ಲಾಭವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

   ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಕರ್ನಾಟಕದ ಹಲವಾರು ಹಳ್ಳಿಗಳು ಹುಕ್ಕೇರಿಯಿಂದ 30-40 ಕಿ.ಮಿ.ಅಂತರದಲ್ಲಿವೆ. ಆ ಹಳ್ಳಿಗಳ ರೈತರು,ವಿದ್ಯಾರ್ಥಿಗಳು, ವಯೋವೃದ್ಧರು, ಅಶಕ್ತರು ತಮ್ಮ ಕೆಲಸ ಕಾರ್ಯಗಳಿಗೆ ಹುಕ್ಕೇರಿಯ ತಾಲೂಕ ಕಚೇರಿಗಳಿಗೆ ಹೋಗಿಬರಲು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.ಈ ಎಲ್ಲಾ ಪ್ರಮುಖ ಅಂಶಗಳನ್ನು ಪರಿಗಣಿಸಿ ಈ ನಗರ ತಾಲೂಕು ಕೇಂದ್ರ ಮಾಡಲು ಯೋಗ್ಯವಾಗಿದೆ. ಆದ್ದರಿಂದ ತಾವು ತಮ್ಮ ಸಂಪುಟ ಸಭೆಯಲ್ಲಿ ಸಂಕೇಶ್ವರ ನಗರವನ್ನು ತಾಲೂಕಕೇಂದ್ರವಾಗಿ ಘೋಷಣೆ ಮಾಡಬೇಕಾಗಿ ಸರಕಾರಕ್ಕೆ ಬರೆಯಲಾದ ಪತ್ರದಲ್ಲಿ ವಿವರಿಸಿದ್ದಾರೆ.

ಸುದ್ದಿ ಓದಿ