ಬೆಳಗಾವಿ ಪಾಲಿಗೆ ಕರಾಳ ಶುಕ್ರವಾರ : 2 ಪ್ರತ್ಯೇಕ ಅಪಘಾತದಲ್ಲಿ 9 ಜನ ಸಾವು

ಬೆಳಗಾವಿ ಪಾಲಿಗೆ ಕರಾಳ ಶುಕ್ರವಾರ : 2 ಪ್ರತ್ಯೇಕ ಅಪಘಾತದಲ್ಲಿ 9 ಜನ ಸಾವು

ಬೆಳಗಾವಿ ಜಿಲ್ಲೆಯ ಪಾಲಿಗೆ ನಿನ್ನೆಯ ದಿನ ಕರಾಳ ಶುಕ್ರವಾರ ವಾಗಿ ಪರಿಣಮಿಸಿದ್ದು, ಜಿಲ್ಲೆಯಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತದಲ್ಲಿ ಒಟ್ಟು 9 ಜನರು ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ನಡೆದಿವೆ. 


    ಮುಗಳಖೋಡ ಹತ್ತಿರದ ಜತ್ತ ಜಾಂಬೋಟಿ ರಸ್ತೆಯಲ್ಲಿ  ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನಗಳಿಗೆ ಗುದ್ದಿ ಪಲ್ಟಿಯಾಗಿ  ಬಳಿಕ ಮರವೊಂದಕ್ಕೆ ರಭಸದಿಂದ ಗುದ್ದಿದೆ. ಈ ಅಪಘಾತದಲ್ಲಿ ಒಟ್ಟು 6 ಜನರು ಮೃತಪಟ್ಟಿದ್ದಾರೆ. 

  ಈ ಘಟನೆಯಲ್ಲಿ ಗುರ್ಲಾಪುರ ಗ್ರಾಮದ ಲಕ್ಷ್ಮಿ ರಾಮಪ್ಪ ಮರಾಠೆ(19) ಮಲ್ಲಿಕಾರ್ಜುನ ರಾಮಪ್ಪ ಮರಾಠೆ(16) ಆಕಾಶ ರಾಮಪ್ಪ ಮರಾಠೆ(14) ಸಿಫ್ಟ್ ಕಾರ್ಡಿಯ ಡ್ರೈವರ್ ಏಕನಾಥ ಭೀಮಪ್ಪ ಪಡತರೆ(22)  ಮುಗಳಖೋಡ ಪಟ್ಟಣದ ಎಕ್ಸೆಲ್ ಸೂಪರ್ ಬೈಕ್ ಸವಾರ ನಾಗಪ್ಪ ಲಕ್ಷ್ಮಣ ಯಡವಣ್ಣವರ(48) ಗೋಕಾಕ ತಾಲೂಕಿನ ದುರದುಂಡಿ ಗ್ರಾಮದ ಶಿಕ್ಷಕ  ಹಣಮಂತ ಮಾಳಪ್ಪ ಮಳ್ಯಾಗೋಳ(42) ಬಾಲನಂದ ಪರಸಪ್ಪ ಮಾಳಗಿ(37) ಮೃತಪಟ್ಟ ದುರ್ಧೈವಿಗಳಾಗಿದ್ದಾರೆ.

     ಮೂಡಲಗಿ ತಾಲೂಕು ಗುರ್ಲಾಪುರದಿಂದ ಹಾರೂಗೇರಿ ಪಟ್ಟಣಕ್ಕೆ ಹೊರಟಿದ್ದ ಶಿಫ್ಟ್ ಕಾರ್ KA.03, AF 1009, ಹೋಂಡಾ ಶೈನ್ ಬೈಕ್ KA -48, X.9158, ಹಾಗೂ ಎಕ್ಸಲ್ ಸೂಪರ್ ಬೈಕ್  KA-49, X.9636 ಇವುಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. ಸಿಫ್ಟ್ ಕಾರ್ ಚಾಲಕನ ನಿಯಂತ್ರಣ ತಪ್ಪಿದ ಕಾರಣ ಬೈಕ್ ಗಳಿಗೆ ಗುದ್ದಿಕೊಂಡು ಕಾರ್ ಪಲ್ಟಿಯಾಗಿ ಮರಕ್ಕೆ ರಬಸವಾಗಿ ಗುದ್ದಿದರಿಂದ ಈ ಅಪಘಾತ ಸಂಭವಿಸಿದೆ.

  ವಿಷಯ ಅರಿತು ಘಟನಾ ಸ್ಥಳಕ್ಕೆ ಆಗಮಿಸಿದ ಬೆಳಗಾವಿ ಹೆಚ್ಚುವರಿ ಎಸ್ಪಿ ರಾಮಗೊಂಡ ಬಸರಗಿ, ಅಥಣಿ ಡಿವೈಎಸ್ಪಿ ಶ್ರೀಪಾದ ಜಲ್ದೆ, ಹಾರೋಗೇರಿ ಸಿಪಿಐ ರವಿಚಂದ್ರನ್ ಬಡಪಕಿರಪ್ಪನವರ, ಅಥಣಿ ಸಿಪಿಐ ರವೀಂದ್ರ ನಾಯಕವಾಡಿ, ಹಾರೂಗೇರಿ ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ, ಎಎಸ್ಐ ಎಸ್.ಎಲ್.ಬಾಡಕರ, ಅಶೋಕ ಶಾಂಡಗೆ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದು ಈ ಕುರಿತು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಯರಗಟ್ಟಿ ಬಳಿ ಕಾರುಗಳು ಮುಖಾಮುಖಿ ಡಿಕ್ಕಿ ; ಸ್ಥಳದಲ್ಲೇ ಮೂವರ ಸಾವು ; 


ಸ್ವಿಫ್ಟ್‌ ಮತ್ತು ಅಲ್ಟೋ ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓರ್ವ ಮಹಿಳೆ, ಮಗು ಸೇರಿ ಮೂವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಯರಗಟ್ಟಿ ತಾಲೂಕಿನ ಕುರಬಗಟ್ಟಿ ಕ್ರಾಸ್ ಬಳಿ ಶುಕ್ರವಾರ ನಡೆದಿದೆ. 

  ಈ ಅಪಘಾತದಲ್ಲಿ ಮೂಡಲಗಿ ತಾಲೂಕಿನ ಪಟಗುಂದಿ ಗ್ರಾಮದ ಮುತ್ತು ನಾಯಕ(8), ಗೋಪಾಲ್ ನಾಯಕ(45) ಹಾಗೂ ಧಾರವಾಡ ಮೂಲಕ ಅನ್ನಪೂರ್ಣ(53) ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

   ಈ ಅಪಘಾತದಲ್ಲಿ ಕಾರಿನಲ್ಲಿದ್ದಂತ ಮತ್ತಿಬ್ಬರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮುರಗೋಡ ಠಾಣೆಯ ಪೊಲೀಸರು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.



   


ಸುದ್ದಿ ಓದಿ