ಬ್ಯಾಡ್ಗಿ

ಹೈನುಗಾರಿಕೆ ಗ್ರಾಮೀಣ ಆರ್ಥಿಕತೆಗೆ ಬೆನ್ನೆಲುಬು: ಜಿ. ಪ್ರಕಾಶ್

ಹೈನುಗಾರಿಕೆ ಗ್ರಾಮೀಣ ಆರ್ಥಿಕತೆಗೆ ಬೆನ್ನೆಲುಬು: ಜಿ. ಪ್ರಕಾಶ್

ಬ್ಯಾಡಗಿ 19: ಹೈನುಗಾರಿಕೆ ಕೃಷಿಯೊಂದಿಗೆ ನಿಕಟ ಸಂಬಂಧ ಹೊಂದಿರುವ ಅತ್ಯಂತ ಲಾಭದಾಯಕ ಉದ್ಯಮವಾಗಿದ್ದು, ಹಸು-ಎಮ್ಮೆಗಳನ್ನು ಸಾಕುವ ಮೂಲಕ ರೈತರು ನಿರಂತರ ಆದಾಯ ಗಳಿಸಬಹುದು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಮೇಲ್ವಿಚಾರಕ ಜಿ. ಪ್ರಕಾಶ್ ಹೇಳಿದರು.  

ತಾಲೂಕಿನ ಮಲೂರು ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಆಯೋಜಿಸಿದ್ದ ಲಾಭದಾಯಕ ಹೈನುಗಾರಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಹೈನುಗಾರಿಕೆಯನ್ನು ಬಲಪಡಿಸುವುದು ಕೃಷಿ ಅವಲಂಬಿತ ರೈತರ ಜವಾಬ್ದಾರಿಯಾಗಿದೆ. ವೈಜ್ಞಾನಿಕ ವಿಧಾನದಲ್ಲಿ ಹೈನುಗಾರಿಕೆ ನಡೆಸಿದರೆ ಹೆಚ್ಚಿನ ಲಾಭ ಪಡೆಯಬಹುದು. ಹಲವು ಕುಟುಂಬಗಳು ಹೈನುಗಾರಿಕೆಯನ್ನು ಉಪ ಕಸುಬಾಗಿ ಅಳವಡಿಸಿಕೊಂಡು ಆರ್ಥಿಕವಾಗಿ ಸಬಲವಾಗಿವೆ ಎಂದು ತಿಳಿಸಿದರು.  

ಹಾಲು ಉತ್ಪಾದಕರು ಸಹಕಾರ ಸಂಘಗಳೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಹೈನುಗಾರಿಕೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಬೇಕು. ಹಾಲು ಉತ್ಪನ್ನಗಳು ಮಾರುಕಟ್ಟೆಯಲ್ಲಿ ಸಾಮಾನ್ಯ ಜನರಿಗೆ ತಲುಪುವಲ್ಲಿ ಉತ್ಪಾದಕರ ಪಾತ್ರ ಪ್ರಮುಖವಾಗಿದೆ ಎಂದರು.  

ಪಶುವೈದ್ಯಾಧಿಕಾರಿ ಡಿ.ಬಿ. ಹೊಸಮನಿ ಮಾತನಾಡಿ, ಹಾಲು ಉತ್ಪಾದನೆಯಲ್ಲಿ ತೊಡಗಿರುವ ರೈತರು ಆರ್ಥಿಕವಾಗಿ ಪ್ರಗತಿ ಸಾಧಿಸುತ್ತಿದ್ದಾರೆ. ಜಿಲ್ಲೆ ಹಾಗೂ ರಾಜ್ಯದಲ್ಲಿ ಹಾಲಿನ ಗುಣಮಟ್ಟ ಹೆಚ್ಚಿಸಲು ಪಶುಸಂಗೋಪನಾ ಇಲಾಖೆ ಅಗತ್ಯ ಸೇವೆಗಳನ್ನು ಒದಗಿಸುತ್ತಿದೆ ಎಂದು ಹೇಳಿದರು.  

ಹಾಲಿನ ಬೇಡಿಕೆಯನ್ನು ಪೂರೈಸಲು ಹಾಲು ಉತ್ಪಾದಕರ ಶ್ರಮ ಮಹತ್ವದ್ದಾಗಿದೆ. ರೈತರು ಹಾಗೂ ರೈತ ಮಹಿಳೆಯರು ಹಸುಗಳನ್ನು ಸಾಕುವ ಮೂಲಕ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳಬೇಕು ಎಂದು ಕರೆ ನೀಡಿದರು.  ಕಾರ್ಯಕ್ರಮದಲ್ಲಿ ಗ್ರಾಮದ ಗಣ್ಯರು, ಒಕ್ಕೂಟದ ಪದಾಧಿಕಾರಿಗಳು, ಸಂಘದ ಸದಸ್ಯರು ಹಾಗೂ ಸೇವಾ ಪ್ರತಿನಿಧಿ ರೇಖಾ ಅಂಬಿಕಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. 


ಸುದ್ದಿ ಓದಿ