ಸರ್ಕಾರಿ ಪ್ರೌಢಶಾಲೆಯ ಕುಂದುಕೊರತೆ ಆಲಿಸಿ, ಪರಿಹಾರಕ್ಕೆ ಪ್ರಯತ್ನ: ಡಿಡಿಪಿಐ
ಮಹಾಲಿಂಗಪುರ 21: ಸ್ಥಳೀಯ ಸರ್ಕಾರಿ ಪ್ರೌಢಶಾಲೆಯ ಮೂಲಭೂತ ಸೌಲಭ್ಯಗಳು, ಕೊಠಡಿಗಳ ಸಮಸ್ಯೆಗಳು ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಆಲಿಸಿ, ಇನ್ನೂ ಅನೇಕ ಕುಂದುಕೊರತೆಗಳ ಬಗ್ಗೆ ಬಾಗಲಕೋಟೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೆಶಕ ಶ್ರೀಶೈಲ್ ಬಿರಾದಾರ್ ಪರೀಶೀಲನೆ ನಡೆಸಿ ಪರಿಹಾರದ ಭರವಸೆ ನೀಡಿದರು.
ಶಾಲೆಯಲ್ಲಿ ಕೊಠಡಿಗಳ ಸಮಸ್ಯೆಗಳಿಂದಾಗಿ ಈಗಿರುವ 2(ಎಬಿ) ಮತ್ತು 3 (ಎಬಿಸಿ) ವಿಭಾಗಗಳನ್ನಾಗಿ ವಿಂಗಡಿಸಿ ಬೋಧನೆ ಮಾಡಲು, ಪ್ರೌಢಶಾಲೆ ಪಕ್ಕದ ಸರ್ಕಾರಿ ಪಿಯು ಕಾಲೇಜಿನ 3 ಕೊಠಡಿಗಳನ್ನು ಕಾಲೇಜು ಅವಧಿ ನಂತರ (ಮಧ್ಯಾಹ್ನ) 10ನೇ ತರಗತಿಯ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಕ್ಲಾಸ್ಗಳನ್ನು ತೆಗೆದುಕೊಳ್ಳಲು ಆದೇಶಿಸಿದರು.
10ನೇ ತರಗತಿಯ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ನಿತ್ಯ ಹೆಚ್ಚುವರಿ ಕ್ಲಾಸ್ಗಳನ್ನು ತೆಗೆದುಕೊಂಡು, ವಿಷಯಾಧಾರಿತ ಚರ್ಚೆಗಳ ಮೂಲಕ, ಪಾಠ ಯೋಜನೆಯೊಂದಿಗೆ ವಾರದಲ್ಲೊಂದು ಕಿರುಪರೀಕ್ಷೆ ನಡೆಸಬೇಕು. ವಾರ್ಷಿಕ ಪರೀಕ್ಷೆಯಲ್ಲಿ ಅವರು ಪ್ರತಿಶತ 100 ಅಂಕಗಳನ್ನು ಪಡೆಯಲು ಪ್ರತಿ ಶಿಕ್ಷಕರ ಶ್ರಮ ಅವಶ್ಯ ಎಂದರು.
ಪುರಸಭೆಯಿಂದ ಕಂಪೌಂಡ ನಿರ್ಮಿಸಲು ಮನವಿ : ಮಹಾಲಿಂಗಪುರ ಸರ್ಕಾರಿ ಪಿಯು ಕಾಲೇಜು ಮತ್ತು ಪ್ರೌಢಶಾಲೆ ಸೇರಿದಂತೆ 12 ನೂರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವ ಈ ಶಾಲೆಗೆ, ಪುರಸಭೆಯಿಂದ ಸುಸಜ್ಜಿತ ರಕ್ಷಣಾ ಗೋಡೆ ನಿರ್ಮಿಸಲು ಡಿಡಿಪಿಐ ಅವರು ಪುರಸಭೆ ಮುಖ್ಯಾಧಿಕಾರಿಗಳಿಗೆ ಕೇಳಿದಾಗ, ಸ್ಥಳೀಯ ಶಾಸಕರು ಹಾಗೂ ಪುರಸಭೆಯ ಆಡಳಿತದ ಗಮನಕ್ಕೆ ತರುತ್ತೇನೆ ಎಂದು ಮುಖ್ಯಾಧಿಕಾರಿ ಎಚ್.ಎಸ್. ಚಿತ್ತರಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಧೋಳ ಕ್ಷೇತ್ರಸಮನ್ವಯಾಧಿಕಾರಿ ಮಹಾಂತೇಶ ನರಸನಗೌಡರ, ಸಿಆರ್ಪಿ ಎಸ್.ಎನ್.ಬ್ಯಾಳಿ, ಎಸ್ಡಿಎಂಸಿ ಅಧ್ಯಕ್ಷೆ ಚಂದ್ರವ್ವ ಗೌಡರ, ಮುಖ್ಯಶಿಕ್ಷಕ ಸಮೀರ ಚಿಪ್ಪಾಡಿ ಮತ್ತು ಪತ್ರಕರ್ತ ಎಸ್. ಎಸ್. ಈಶ್ವರ್ಪಗೋಳ ಸೇರಿದಂತೆ ಶಿಕ್ಷಕರು, ಎಸ್ಡಿಎಂಸಿ ಸದಸ್ಯರು ಇದ್ದರು.
ಬಾಗಲಕೋಟೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೆಶಕ.
ಮಹಾಲಿಂಗಪುರ ಸರ್ಕಾರಿ ಪ್ರೌಢಶಾಲೆಗೆ ಎರಡು ಕೊಠಡಿಗಳು ಮಂಜೂರಾಗಿ, ಒಂದು ಕೊಠಡಿ ನಿರ್ಮಾಣವಾಗುತ್ತಿದೆ, ಮಕ್ಕಳ ಸಂಖ್ಯೆಯಾಧರಿಸಿ ಶಾಲೆಗೆ ಅಗತ್ಯವಿರುವ ಹೆಚ್ಚುವರಿ 3 ಕೊಠಡಿಗಳು, ವಿಜ್ಞಾನ ವಿಷಯದ ಅತಿಥಿ ಶಿಕ್ಷಕರ ನೇಮಕ, ಕಂಪೌಂಡ ನಿರ್ಮಾಣ, ಅಡುಗೆಮನೆ, ರೇಷನ್ ದಾಸ್ತಾನು ಕೊಠಡಿ, ಮಹಿಳಾ ಮತ್ತು ಪುರುಷರ ಶೌಚಾಲಯಗಳ ನಿರ್ಮಾಣ, ಶಾಲೆಗೆ ಮುಖ್ಯಶಿಕ್ಷಕ ಮತ್ತು ಕ್ಲರ್ಕ ಹುದ್ದೆಗಳ ಮಂಜೂರಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
-ಶ್ರೀಶೈಲ್ ಬಿರಾದಾರ್