ಕನ್ನಿಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ
ಕಂದಾಯ ಸೇರಿದಂತೆ ವಿವಿಧ ಇಲಾಖೆಯ 45 ಅರ್ಜಿಗಳು ಸ್ವೀಕೃತ
ಹಗರಿಬೊಮ್ಮನಹಳ್ಳಿ 18: ತಾಲೂಕಿನ ಕನ್ನಿಹಳ್ಳಿ ಗ್ರಾಮದಲ್ಲಿ ಶನಿವಾರ ತಹಶಿಲ್ದಾರ್ ಶರಣಮ್ಮ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ತಹಾಸಿಲ್ದಾರ್ ಅವರು ಮಾತನಾಡಿ ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಿಳಿಸುವುದರ ಜೊತೆ ಗ್ರಾಮೀಣ ಭಾಗಗಳ ಸಾರ್ವಜನಿಕ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸುವುದರಲ್ಲಿ ಕಾರ್ಯಕ್ರಮ ಪ್ರಮುಖ ಪಾತ್ರ ವಹಿಸುತ್ತದೆ, ಸಾರ್ವಜನಿಕರು ತಮ್ಮ ಸರ್ಕಾರಿ ಕೆಲಸಗಳಿಗೆ ಕೆಲಸ ಕಾರ್ಯಗಳನ್ನು ಬಿಟ್ಟು ಕಚೇರಿ ಅಲೆದಾಟ ತಪ್ಪಿಸುವುದು, ಅದಕ್ಕೆ ತಗಲುವ ವೆಚ್ಚಕ್ಕೂ ಕಡಿವಾಣ ಹಾಕುವಲ್ಲಿ ಕಾರ್ಯಕ್ರಮ ಮುಂದಾಗಿದೆ.ಕನ್ನಿಹಳ್ಳಿ ಗ್ರಾಮದಲ್ಲಿ ಮಕ್ಕಳ ಶೈಕ್ಷಣಿಕ ಸಾಧನೆ ಅಭೂತಪೂರ್ವವಾಗಿದೆ ಜೊತೆಗೆ ಕಳೆದ ಕೆಲ ದಿನಗಳ ಹಿಂದೆ ಇಡೀ ಜಗತ್ತನ್ನೆ ಬೆಚ್ಚಿ ಬೀಳಿಸಿದ ಕೊರೊನಾ ಮಹಾಮಾರಿಗೆ ತಡೆಯೊಡ್ಡಲು ಹಾಕಿಸಬೇಕಾದ ಲಸಿಕೆಯನ್ನು ಈ ಗ್ರಾಮದ ಸಾರ್ವಜನಿಕರು ಸಾರ್ವತ್ರಿಕವಾಗಿ ಲಸಿಕೆ ಹಾಕಿಸಿಕೊಂಡಿದ್ದು ಶ್ಲಾಘನೀಯವಾಗಿದೆ, ಒಟ್ಟಾರೆಯಾಗಿ ತಾಲೂಕು ಮಟ್ಟದ ಎಲ್ಲಾ ಇಲಾಖೆಗಳಲ್ಲಿನ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿನ ಸೌಲಭ್ಯಗಳನ್ನು ಈ ವೇದಿಕೆಯಲ್ಲಿ ಪ್ರಸ್ತಾಪಿಸಿದ್ದಾರೆ, ಸೌಲಭ್ಯಕ್ಕೆ ತಕ್ಕಂತೆ ಅರ್ಹ ಫಲಾನುಭವಿಗಳು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಂದಾಯ 10, ಸರ್ವೇ 03, ಪಂಚಾಯತ್ ರಾಜ್ 23, ಜೆಸ್ಕಾಂ 03, ಮಹಿಳಾ ಮತ್ತು ಮಕ್ಕಳ ಕಲ್ಯಾಣ 02, ಶಿಕ್ಷಣ 02, ಇತರೆ ಇಲಾಖೆಗಳಿಗೆ 02 ಸೇರಿದಂತೆ ಒಟ್ಟು 45 ಅರ್ಜಿಗಳು ಸ್ವೀಕೃತವಾಗಿವೆ. ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯಿಂದ ಕೋವಿಡ್ ಎರಡನೆ ಲಸಿಕೆಯನ್ನು ಹಾಕಿಸಿಕೊಳ್ಳುವವರಿಗೆ ವ್ಯೆವಸ್ಥೆಯನ್ನು ಮಾಡಲಾಗಿತ್ತು.ಇಲಾಖಾವಾರು ಅಧಿಕಾರಿಗಳು ಅರ್ಜಿಗಳನ್ನು ಸ್ವೀಕರಿಸಲು ಪ್ರತ್ಯೇಕ ಸ್ಟಾಲ್ ವ್ಯವಸ್ಥೆ ಮಾಡಿಕೊಂಡು ಅರ್ಜಿಗಳನ್ನು ಸ್ವೀಕರಿಸಿದರು.
ಪ್ರಾಸ್ತಾವಿಕವಾಗಿ ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಪರಮೇಶ್ವರ ಮಾತನಾಡಿದರು, ಟಿಹೆಚ್ಒ ಶಿವರಾಜ್ ,ಇಟ್ಟಿಗಿ ಪಿಎಸ್ಐ ವೀರೇಶ್ ಯಳಕಟ್ಟಿ, ಬಿಇಒ ಎಂ.ಸಿ.ಆನಂದ್, ನರೇಗಾ ಸಹಾಯಕ ನಿರ್ದೇಶಕ ಉಮೇಶ್ ಗೌಡ ಮಾತನಾಡಿದರು.
ಈ ಸಂಧರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದಿನೇಶ್, ಸಿಡಿಪಿಒ ಚನ್ನಪ್ಪ, ಕೃಷಿ ಇಲಾಖೆ ನಿರ್ದೇಶಕ ಜೀವನ್ ಸಾಬ್, ಲೋಕೋಪಯೋಗಿ ಇಲಾಖೆ ಎಇಇ ಪುರುಷೋತ್ತಮ, ದೈಹಿಕ ಪರೀವೀಕ್ಷಕ ಕೊಟ್ರೇಶ್, ಬಿಸಿಎಂ ವಿಸ್ತರಣಾಧಿಕಾರಿ ರಮೇಶ್, ಗ್ರಾಮಲೆಕ್ಕಾದಿಕಾರಿ ಮಂಜುನಾಥ್ ರೆಡ್ಡಿ, ಗ್ರಾಮ ಪಂಚಾಯತಿ ಸದಸ್ಯರು ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.ಗ್ರಾಮ ಲೆಕ್ಕಾಧಿಕಾರಿ ಯಂಕಾರೆಡ್ಡಿ ನಿರೂಪಿಸಿದರೆ, ಗ್ರಾಮ ಪಂಚಾಯತಿ ಅಭಿವೃಧ್ಧಿ ಅಧಿಕಾರಿ ಲಕ್ಷಣ ಸ್ವಾಗತಿಸಿದರು.