ಡಿಸಿ ಸಂಧಾನ ಸಭೆ ಸಫಲ : ಚುನಾವಣೆ ಬಹಿಷ್ಕಾರ ಹಿಂದಕ್ಕೆ
ಮಹಾಲಿಂಗಪುರ 13: ಬುಧವಾರ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ನಡೆದ ಮಹಾಲಿಂಗಪುರ ತಾಲೂಕು ಹೋರಾಟಗಾರರ ಸಭೆಯು ಸಫಲವಾಗಿ, ಮಹಾಲಿಂಗಪುರ ತಾಲೂಕು ಹೋರಾಟಗಾರು ಲೋಕಸಭೆ ಚುನಾವಣೆಯ ಬಹಿಷ್ಕಾರವನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ.
ಮಹಾಲಿಂಗಪುರ ತಾಲೂಕು ಹೋರಾಟ 725 ಪೂರೈಸಿದರೂ ಸಹ ತಾಲೂಕು ಘೋಷಣೆಯಾಗದ ಹಿನ್ನಲೆಯಲ್ಲಿ ತಾಲೂಕು ಹೋರಾಟ ವೇದಿಕೆ ಅಧ್ಯಕ್ಷ ಸಂಗಪ್ಪ ಹಲ್ಲಿ ಅವರು ಕಳೆದ ವಾರ ಮಹಾಲಿಂಗಪುರ ಹಾಗೂ ಸುತ್ತಮುತ್ತಲಿನ 14 ಗ್ರಾಮಗಳು ಒಳಗೊಂಡಂತೆ ಲೋಕಸಭಾ ಚುನಾವಣೆ ಬಹಿಷ್ಕರಿಸುವದಾಗಿ ಘೋಷಿಸಿದ್ದರು.
ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಅವರು ತಮ್ಮ ಕಛೇರಿಯಲ್ಲಿ ತಾಲೂಕು ಹೋರಾಟಗಾರರ ಸಭೆ ನಡೆಸಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನಕ್ಕೆ ಮಹತ್ವವಿದೆ. ದಯವಿಷ್ಟು ಚುನಾವಣೆಯ ಬಹಿಷ್ಕಾರ ಹಿಂದಕ್ಕೆ ಪಡೆಯಿರಿ. ಚುನಾವಣೆ ಮುಗಿದ ಬಳಿಕ ಮಹಾಲಿಂಗಪುರ ಪಟ್ಟಣವನ್ನು ಹೊಬಳಿ ಮತ್ತು ತಾಲೂಕು ಮಾಡುವದಕ್ಕಾಗಿ ಜಮಖಂಡಿ ಎಸಿ, ರಬಕವಿ-ಬನಹಟ್ಟಿ ತಹಶಿಲ್ದಾರರೊಂದಿಗೆ ಚರ್ಚಿಸಿ, ಸರ್ಕಾರಕ್ಕೆ ಸಮಗ್ರ ಪ್ರಸ್ತಾವನೆ ಸಲ್ಲಿಸುತ್ತೇವೆ. ನಿಮ್ಮ ಹೋರಾಟ ಶಾಂತಿಯುತವಾಗಿರಲಿ. ಲೋಕಸಭೆ ಚುನಾವಣೆಗೆ ಯಾವುದೇ ತೊಂದರೆಯಾಗದಂತೆ ಮತ್ತು ಮಹಾಲಿಂಗಪುರ ಭಾಗದಲ್ಲಿ ಹೆಚ್ಚಿನ ಮತದಾನವಾಗುವಂತೆ ಸಹಕಾರ ನೀಡಿ, ನಿಮ್ಮ ಹಕ್ಕು ಚಲಾಯಿಸಿ ನಂತರ ಹಕ್ಕಿನಿಂದ ಕೇಳಿ ಎಂದು ಹೇಳಿ ಮನವೊಲಿಸುವಲ್ಲಿ ಯಶಸ್ವಿಯಾದರು.
ಅವರ ಮಾತಿಗೆ ಒಪ್ಪಿದ ಹೋರಾಟಗಾರರು ಬಹಿಷ್ಕಾರ ಹಿಂಪಡೆದು ಮತದಾನ ಮಾಡುವುದಾಗಿ ತಿಳಿಸಿದರು.
ರಬಕವಿ-ಬನಹಟ್ಟಿ ತಹಶೀಲ್ದಾರ ಗೀರೀಶ ಸ್ವಾದಿ, ಮಹಾಲಿಂಗಪುರ ತಾಲೂಕು ಹೋರಾಟ ವೇದಿಕೆ ಅಧ್ಯಕ್ಷ ಸಂಗಪ್ಪ ಹಲ್ಲಿ, ಕಾರ್ಯಾಧ್ಯಕ್ಷ ಧರೆಪ್ಪ ಸಾಂಗ್ಲಿಕರ, ಮುಖಂಡರಾದ ರಫೀಕ ಮಾಲದಾರ, ಮಹಾದೇವ ಮಾರಾಪೂರ, ಸಿದ್ದು ಶಿರೋಳ, ಶಿವಲಿಂಗ ಟಿರ್ಕಿ, ವಿರೇಶ ಆಸಂಗಿ, ಜಯರಾಮಶೆಟ್ಟಿ, ಜಿಪಂ ಸಿಇಓ, ಎಸ್ಪಿ ಇತರರಿದ್ದರು.