ರಾಯಬಾಗದಲ್ಲಿ ಡಿ. ದೇವರಾಜ ಅರಸು 111ನೇ ಜನ್ಮದಿನ ಆಚರಣೆ; ಆದರ್ಶ ಜೀವನ ಯುವಜನತೆಗೆ ದಾರೀದೀಪ: ತಹಶೀಲ್ದಾರ್
ರಾಯಬಾಗ 20 : ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಆದರ್ಶ ಜೀವನ ಹಾಗೂ ತತ್ವ ಚಿಂತನೆಗಳು ಇಂದಿನ ಯುವಜನಾಂಗಕ್ಕೆ ದಾರೀದೀಪವಾಗಿವೆ ಎಂದು ತಹಶೀಲ್ದಾರ್ ಮಹಾದೇವ ಸನಮುರಿ ಹೇಳಿದರು. ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆದ ಡಿ. ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅರಸು ಅವರು ತಮ್ಮ ಅಧಿಕಾರಾವಧಿಯಲ್ಲಿ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿದ ಧೀಮಂತ ನಾಯಕರು ಎಂದು ಹೇಳಿದರು. ಉಪನ್ಯಾಸಕ ಶಿವಾನಂದ ಹುಲಗಬಾಳಿ ಮಾತನಾಡಿ, ಅರಸು ಅವರ ಆಡಳಿತಾವಧಿ ಸುವರ್ಣಯುಗವಾಗಿತ್ತು. ಅನಿಷ್ಟ ಪದ್ಧತಿಗಳನ್ನು ರದ್ದುಪಡಿಸಿ ರೈತರು, ದೀನದಲಿತರು ಹಾಗೂ ಹಿಂದುಳಿದ ವರ್ಗಗಳ ಏಳಿಗೆಗಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು. ‘ಉಳುವವನೇ ಭೂಮಿಯ ಒಡೆಯ’ ಎಂಬ ಭೂ ಸುಧಾರಣೆ ಕಾಯ್ದೆ ಜಾರಿಗೊಳಿಸುವ ಮೂಲಕ ಶೋಷಿತರ ಆಶಾಕಿರಣವಾಗಿದ್ದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ವಸತಿ ಶಾಲೆಗಳಲ್ಲಿ ಅಧ್ಯಯನ ಮಾಡಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಗಣ್ಯರು ಡಿ. ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿದರು. ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅರ್ಜುನ ಬಂಡಗಾರ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕಲ್ಪನಾ ಕಾಂಬಳೆ, ತಾ.ಪಂ. ಇಒ ಅರುಣ ಮಾಚಕನೂರ ಸೇರಿದಂತೆ ಅಧಿಕಾರಿಗಳು, ಮುಖಂಡರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.