ಮುದ್ದೆಬಿಹಾಲ್

ಮಾಜಿ ಶಾಸಕ ನಾಡಗೌಡರ ಟೀಕೆಗೆ ತಕ್ಕ ಉತ್ತರ ನೀಡಿದ ಹಾಲಿ ಶಾಸಕ ನಡಹಳ್ಳಿ

ಮಾಜಿ ಶಾಸಕ ನಾಡಗೌಡರ ಟೀಕೆಗೆ ತಕ್ಕ ಉತ್ತರ ನೀಡಿದ ಹಾಲಿ ಶಾಸಕ ನಡಹಳ್ಳಿ

ಮುದ್ದೇಬಿಹಾಳ: ಪತ್ರಿಕಾಗೋಷ್ಠಿಯಲ್ಲಿ ದಾಖಲೆ ಇಲ್ಲದೆ ಹತಾಶರಾಗಿ ನನ್ನ ವಿರುದ್ಧ ಮಾತನಾಡಿರುವ ಮಾಜಿ ಶಾಸಕರೇ (ಸಿ.ಎಸ್‌.ನಾಡಗೌಡ) 25 ವರ್ಷ ನೀವು ಏನು ಮಾಡಿದ್ದೀರಿ, ಮೂರುವರೆ ವರ್ಷ ನಾನು ಏನು ಮಾಡಿದ್ದೇನೆ ಅನ್ನೋದು ಜನರಿಗೆ ಗೊತ್ತಿದೆ. ಮುಂಬರುವ ಚುನಾವಣೆಯಲ್ಲಿ ಜನರ ಬಳಿಗೆ ಹೋಗೋಣ. ಜನರೇ ತಕ್ಕ ಉತ್ತರ ಕೊಡುತ್ತಾರೆ ಎಂದು ಶಾಸಕ, ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಎ.ಎಸ್‌.ಪಾಟೀಲ ನಡಹಳ್ಳಿ ಹೆಳಿದರು. 

ಇಲ್ಲಿನ ಗೃಹ ಕಚೇರಿ ದಾಸೋಹ ನಿಲಯದಲ್ಲಿ ಗ್ರಾಪಂ ವಸತಿ ಯೋಜನೆಗಳ ಫಲಾನುಭವಿಗಳ ಸಭೆಯಲ್ಲಿ ಮಾತನಾಡುತ್ತಲೇ ನಾಡಗೌಡರ ಪತ್ರಿಕಾಗೋಷ್ಠಿಯಲ್ಲಿನ ಆರೋಪಗಳಿಗೆ ಸಭೆಯಿಂದಲೇ ಬಹಿರಂಗವಾಗಿ ಉತ್ತರಿಸಿದ ಅವರು, ಇವತ್ತು ಕೆಲವರು ನನಗೆ ನೀತಿ ಪಾಠ ಹೇಳಲು ಬಂದಿದ್ದಾರೆ. ಅವರ ಕಾಲದಲ್ಲಿ ಏನೇನು ಮಾಡಿದ್ದಾರೆ, 25 ವರ್ಷ ಇಲ್ಲಿ ಏನು ನಡೆದಿದೆ ಅನ್ನೋದೂ ನನಗೆ ಗೊತ್ತಿದೆ ಎಂದು ಜರಿದರು. 

ನಮ್ಮ ಜನ 25 ವರ್ಷದ ರಾಜಕಾರಣವನ್ನೂ ನೋಡಿದ್ದಾರೆ, ಮೂರುವರೆ ವರ್ಷದ ರಾಜಕಾರಣವನ್ನೂ ನೋಡಿದ್ದಾರೆ. ನೀವು ಹತಾಶರಾಗಿ ಏನೇನೋ ಮಾತಾಡೋಕೆ ಹೋಗ್ಬೇಡಿ. ಇನ್ನು ಒಂದು ವರ್ಷದಲ್ಲಿ ಚುನಾವಣೆ ಬರುತ್ತದೆ. ಜನರ ಬಳಿ ಹೋಗೋಣ. ನಾನು ಒಳ್ಳೇ ಕೆಲಸ ಮಾಡಿದ್ದರೆ ನನ್ನನ್ನು ಆಶಿರ್ವದಿಸಲಿ, ತಪ್ಪು ಕೆಲಸ ಮಾಡಿದ್ದರೆ ಶಿಕ್ಷೆ ಕೊಡಲಿ. ಅದನ್ನು ಬಿಟ್ಟು ನಾವು ಮಾಡ್ತಿರೋ ಕೆಲಸಗಳಿಗೆ ಹತಾಶರಾಗಿ ಅಥವಾ ಹೆಣ್ಮಕ್ಕಳಿಗೆ ಸೀರೆ ಕೊಡುವುದನ್ನು ಟೀಕಿಸಬೇಡಿ. ತಮ್ಮ ಸೇವೆ ಸಲ್ಲಿಸಲಿ ಎಂದೇ ಜನ ನನ್ನನ್ನು ಚುನಾಯಿಸಿದ್ದಾರೆ. ಅವರನ್ನು ನನ್ನ ಗೃಹ ಕಚೇರಿಗೆ ಕರೆಯುವ ಅಧಿಕಾರ ನನಗಿದೆ. ನಿಮಗೆ ಗೃಹ ಕಚೇರಿ ಇಲ್ಲ. ಅದಕ್ಕೆ ನೀವು ಐಬಿಗೆ ಕರೆದು ಮಾತಾಡ್ತೀರಿ. ನೀವು ಇಷ್ಟು ದಿನ ಐಬಿಯಲ್ಲಿ ಇರ್ತಿದ್ರಿ. ಈಗ ಬೇರೆ ಕಡೆ ಇದ್ದೀರಿ. ಆದರೆ ಗೃಹ ಕಚೇರಿಯಲ್ಲಿ ಕರೆದು ಮಾತಾಡಬೇಕು, ಮಾತಾಡಬಾರದು ಅನ್ನೋ ಕಾನೂನು ಇಲ್ಲಿಲ್ವಲ್ಲ. ಐಬಿನಲ್ಲಿ ಕರೆದು ಮಾತಾಡೋಕೆ, ಪ್ರೆಸ್ ಮೀಟ್ ಮಾಡೋಕೆ ನಿಮಗೆ ಅಧಿಕಾರ ಇದೆಯಾ. ಇನ್ನೊಬ್ಬರ ಬಗ್ಗೆ ಮಾತಾಡೋ ಸಂದರ್ಭ ನೀವು ಏನ್ ಮಾತಾಡ್ತಿದ್ದೀರಿ ಅನ್ನೋ ಪ್ರಜ್ಞೆ ಇರಬೇಕು ಎಂದು ಸೌಮ್ಯವಾಗಿಯೇ ಚಾಟಿ ಬೀಸಿದರು. 

ನಾನು ದಬ್ಬಾಳಿಕೆ ರಾಜಕಾರಣ ಮಾಡ್ತೇನೆ ಎಂದು ಒಬ್ಬನೇ ಒಬ್ಬ ಜನ ಸಾಮಾನ್ಯ ಹೇಳಿದರೆ ಸಾಕು ನಾನು ಬಹಿರಂಗವಾಗಿ ಅವನ ಕಾಲು ಹಿಡಕೊಂಡು ಕ್ಷಮೆ ಕೇಳ್ತೀನಿ. ಇಲ್ಲಿ ಕ್ಲಬ್ ನಡೆಸೋದಕ್ಕಾಗಲಿ, ಅನೈತಿಕ ಚಟುವಟಿಕೆ ಮಾಡೋದಕ್ಕಾಗಲಿ ನಾನು ಯಾವತ್ತೂ ಅವಕಾಶ ಕೊಟ್ಟಿಲ್ಲ. ಜನರಿಗೆ, ಜನಸಾಮಾನ್ಯರಿಗೆ ಅನ್ಯಾಯ ಆಗಲು ಬಿಟ್ಟಿಲ್ಲ. ನನ್ನ ಕುಟುಂಬದಲ್ಲಿ ನಾನೊಬ್ಬನೇ ರಾಜಕಾರಣ ಮಾಡ್ತೇನೆ. ಅಧಿಕಾರಿಗಳಿಗೆ ಫೋನ್ ಮಾಡಿ ಹೆದರಿಸಲೂ ಅವಕಾಶ ಕೊಟ್ಟಿಲ್ಲ. ನನ್ನ ಕುಟುಂಬವರೇ ತಪ್ಪು ಮಾಡಿದರೂ ಅವರ ಮೇಲೆ ಕಾನೂನು ಕ್ರಮ ಆಗಬೆಕು ಎಂದು ಡಿಫೆಂಡ್ ಮಾಡಿಕೊಂಡಂತಹ ವ್ಯಕ್ತಿ ಎಂದರು. 

ಹಿಂದೆ ಮನೆ ಹಂಚಿಕೆ ವ್ಯವಸ್ಥೆ ಹೇಗಿತ್ತು ಅನ್ನೋದು ನಿಮಗೆಲ್ಲ ಗೊತ್ತಿದೆ. ಹಿಂದಿನ ಸರ್ಕಾರಗಳು ಕೊಟ್ಟ ಮನೆಗಳ ನಿಜವಾದ ಅರ್ಹರಿಗೆ ಮುಟ್ಟುತ್ತಿರಲಿಲ್ಲ. ಗ್ರಾಮಸಭೆಯಲ್ಲೇ ಮನೆಗಳನ್ನು ಆಯ್ಕೆ ಮಾಡಬೇಕೆನ್ನುವ ಸ್ಪಷ್ಟ ನಿರ್ದೇಶನ ಇದ್ದರೂ ಹಿಂದಿನ ಆಡಳಿತದ ಅವಧಿಯಲ್ಲಿ ಅವು ಹಿಂಬಾಲಕರು, ಬಲಾಢ್ಯರ ಪಾಲಾಗುತ್ತಿದ್ದವು. ಇದು ಎಲ್ಲರಿಗೂ ಗೊತ್ತಿದೆ, ಅದಕ್ಕೆ ಸಂಬಂಧಿಸಿದ ದಾಖಲೆಗಳೂ ಇವೆ. ಆದರೆ ನನ್ನ ಅವಧಿಯಲ್ಲಿ ಅದೆಲ್ಲ ನಿಯಂತ್ರಿಸಿ ನಿಜವಾದ ಫಲಾನುಭವಿಗಳೇ ಮನೆ ಕೊಡುತ್ತಿದ್ದೇನೆ ಎಂದರು. 

ಅನೇಕ ಹಳ್ಳಿಗಳಲ್ಲಿ ಇವತ್ತು ಕಾಂಕ್ರಿಟ್ ರಸ್ತೆ ಮಾಡಿದ್ದೇವೆ. ಹಿಂದೆನೂ ಮಾಡಿದ್ದಾರೆ. ಅವರೇನು ಮಾಡಿದ್ದಾರೆ, ನಾವೇನು ಮಾಡಿದ್ದೇವೆ ಅನ್ನೋದರ ಬಗ್ಗೆ ಜನ ವ್ಯತ್ಯಾಸ ನೋಡಿದ್ದಾರೆ. ಮಾಜಿ ಶಾಸಕರು ನನಗೆ ಪ್ರಶ್ನೆ ಮಾಡಿ ಎಲ್ಲಾ ಊರಾಗ ಬರೆ ಕಾಂಕ್ರಿಟ್ ರೋಡ್ ಮಾಡ್ತಾರೆ ಅಂತ ದೂರಿದ್ದಾರೆ. ನಾನ್ಯಾಕೆ ಕಾಂಕ್ರಿಟ್ ರೋಡ್ ಮಾಡಬೇಕಾಯ್ತು ಅಂದ್ರೆ ನೀವು (ಜನ) 25 ವರ್ಷ ಓಟ್ ಹಾಕಿ ಗೆಲ್ಲಿಸಿದ್ದಿರಲ್ಲ ಅವರು (ನಾಡಗೌಡರು) ರಸ್ತೆಯನ್ನೇ ಮಾಡಿರಲಿಲ್ಲ. ಅದಕ್ಕಾಗಿ ನಾನು ಕಾಂಕ್ರಿಟ್ ರಸ್ತೆಗಳನ್ನೇ ಮಾಡಬೇಕಾಯ್ತು. ಅವರು ರಸ್ತೆ ಮಾಡಿದ್ದರೆ ನಾನು ಬೇರೆ ಕೆಲಸ ಮಾಡುತ್ತಿದ್ದೆ. ಅವರು ರಸ್ತೆ ಮಾಡದೆ ಇದ್ದುದಕ್ಕೆ 250-300 ಕೋಟಿ ರೂಗಳನ್ನು ರಸ್ತೆ, ಮೂಲಭೂತ ಸೌಕರ್ಯ ಒದಗಿಸಲು ಬಳಸಲಾಗಿದೆ ಎಂದರು. 

ಮಾಜಿ ಶಾಸಕರು ನಾನು ರಸ್ತೆ ಮಧ್ಯೆ ಹಾಕಿಸುತ್ತಿರುವ ಎಲ್‌ಇಡಿ ಲೈಟ್ ಕಂಬಗಳ ಬಗ್ಗೆ ಟೀಕಿಸುತ್ತಾರೆ. ಯಾಕೆ ಹಾಕಿರಿ ಇಂಥ ಲೈಟು, ನಾವು ಕತ್ತಲದಾಗ ಇದ್ದೆವಲ್ಲ, ಬೆಳಕಿನಾಗ್ಯಾಕ ತಂದ್ರಿ ಅಂತಿದ್ದಾರೆ ಎಂದು ಲೇವಡಿ ಮಾಡಿದ ಶಾಸಕರು, ಇವತ್ತು ಮುದ್ದೇಬಿಹಾಳಕ್ಕೆ ನೀವೆಲ್ಲ ಬಂದಿದ್ದೀರಿ. ಮುದ್ದೇಬಿಹಾಳ ಹಿಂದೆ ಹೇಗಿತ್ತು, ಈಗ ಹೇಗಾಗಿದೆ ಎಂದು ಫಲಾನುಭವಿಗಳನ್ನು ಪ್ರಶ್ನಿಸಿ ಅವರಿಂದಲೇ ಬಹಳಷ್ಟು ಬದಲಾವಣೆ ಆಗಿ ಅಭಿವೃದ್ಧಿ ಆಗಿದೆ ಅನ್ನೋ ಉತ್ತರವನ್ನು ಟೀಕಾಕಾರರಿಗೆ ಕೊಡಿಸಿದರು. 

ನಾನು ಯಾವತ್ತೂ ದೇಸಗಿರಿ ಮನೆತನದವನು, ಪಾಳೇಗಾರಿಕೆ ಮನೆತನದವನು ಎಂದು ಹೇಳಿಲ್ಲ. ನಾನು ಬಡವನ ಮಗ. ಸಿದ್ದಗಂಗಾ ಮಠದ ದಾಸೋಹದಲ್ಲಿ ಉಂಡು ಬೆಳೆದವನು. ಈ ದೇಹ ಸಿದ್ದಗಂಗಾ ಮಠ, ಮುರುಘಾಮಠ, ಮಹಾಂತಪ್ಪಗಳ ಮಠ, ಶಿವಕುಮಾರ ಸ್ವಾಮಿಗಳ ಮಠದ ದಾಸೋಹದಿಂದಲೇ ಬೆಳೆದದ್ದು. ಇದು ಸಮಾಜದ ಋಣ ಹೊತ್ತಿರುವ ದೇಹವಾಗಿದೆ. ಸಮಾಜದಿಂದಲೇ ನಾನು ಬೆಳೆದಿದ್ದರಿಂದ ಸಮಾಜಕ್ಕಾಗಿಯೇ ಕೆಲಸ ಮಾಡುತ್ತಿದ್ದೇನೆ. ಬಡವರನ್ನು ದೇವರಂತೆ, ಹೃದಯದಿಂದ ಪೂಜಿಸುತ್ತೇನೆ. ನನ್ನೆದುರಿಗೆ ಕುಳಿತಿರುವ ಬಡವರೇ ನನ್ನ ಪಾಲಿನ ನಿಜವಾದ ದೇವರು. ಅವರ ಸೇವೆಯೇ ನನ್ನ ಬಾಳಿನ ಪರಮ ಗುರಿ ಎಂದರು. 

ನಾನು ಮಹಿಳೆಯರಿಗೆ ಸೀರೆ ಕೊಡುವುದನ್ನು ನಾಡಗೌಡರು ಟೀಕಿಸಿದ್ದಾರೆ. ನಮ್ಮ ಮನೆಗೆ ಯಾರೇ ಹೆಣ್ಣು ಮಕ್ಕಳು ಬಂದರೂ ಅವರನ್ನು ಸೌಭಾಗ್ಯಲಕ್ಷ್ಮಿಯರು ಎಂದು ತಿಳಿದುಕೊಂಡಿದ್ದೇನೆ. ನಮ್ಮ ಸಂಸ್ಕಾರ, ಸಂಸ್ಕೃತಿಯಲ್ಲಿ ಮನೆಗೆ ಬರುವ ಹೆಣ್ಣು ಮಕ್ಕಳನ್ನು ಹಾಗೆಯೇ ಕಳಿಸುವುದಿಲ್ಲ. ಅರಿಷಿಣ, ಕುಂಕುಮ, ಜಂಪರ್, ಸೀರೆ ಕೊಟ್ಟು ಕಳಿಸ್ತೇವೆ. ದೇವರು ಸೀರೆ ಕೊಡುವ ಶಕ್ತಿ ಕೊಟ್ಟಿದ್ದಾನೆ. ಎಲ್ಲ ಮಹಿಳೆಯರಿಗೂ ಸೀರೆ ಕೊಟ್ಟು ಅವರ ಆಶಿರ್ವಾದ ಪಡೆದುಕೊಳ್ಳುತ್ತಿದ್ದೇನೆ. ನಾನು ಮಾಡುವ ಈ ಕಾರ್ಯ ತಪ್ಪಾ, ಸರಿಯಾ ಅನ್ನೋದನ್ನು ನೀವೇ ತೀರ್ಮಾನ ಮಾಡಿ. ಈಗೇನು ಚುನಾವಣೆ ಇದೆಯಾ ಸೀರೆ ಕೊಟ್ಟು ಆಮೀಷ ಒಡ್ಡಲು. ಹಿಂದೆ ಗ್ರಾಪಂ ಚುನಾವಣೆಯ ನಂತರವೂ ನಾನು ಎಲ್ಲ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರನ್ನು ದಾಸೋಹ ನಿಲಯಕ್ಕೆ ಕರೆದು ಉಡುಗೊರೆ ಕೊಟ್ಟು ಗೌರವಯುತವಾಗಿ ಸನ್ಮಾನಿಸಿ ಆಶಿರ್ವಾದ ಕೇಳಿದ್ದೇನೆ. ಅದು ಮಾಡೋದು ತಪ್ಪಾ. ಅದನ್ನೂ ನಾಡಗೌಡರು ತಪ್ಪು ಅಂತಾರೆ. ನಮ್ಮ ದೇಶದ ಸಂಸ್ಕೃತಿಯನ್ನು ಸಂಸ್ಕಾರವನ್ನು ಗೌರವಿಸದವರು ಬೇರೆ ಯಾರನ್ನು ಗೌರವಿಸ್ತಾರೆ ಅನ್ನೋದನ್ನು ನೀವೆ ತಿಳಿದುಕೊಳ್ಳಿ ಎಂದು ಟಾಂಗ್ ನೀಡಿದರು. 

ಕೊರೊನಾದಲ್ಲಿನ ತಮ್ಮ ಚಟುವಟಿಕೆ, ವಿದ್ಯಾರ್ಥಿಗಳಿಗೋಸ್ಕರ ಮಾಡುತ್ತಿರುವ ಸೇವೆ, ಬಡಜನರಿಗೆ ನೀಡುತ್ತಿರುವ ನೆರವು ಮುಂತಾದವುಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟ ಶಾಸಕರು ಕಷ್ಟ ಕಾಲದಲ್ಲಿ ಸಹಾಯ ಮಾಡುವುದು ಮನುಷ್ಯ ಧರ್ಮ. ಅದನ್ನು ನಾನು ಮಾಡುತ್ತಿದ್ದೇನೆ. ಮುಂದೆಯೂ ಮಾಡುವೇ. ಇದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದರು. 

ನಾಡಗೌಡರು ಚಿಕ್ಕವರಲ್ಲ. ಹಿರಿಯ ರಾಜರಾಕಣಿಗಳು. ವಯಸ್ಸಿನಲ್ಲಿ, ರಾಜಕಾರಣದಲ್ಲಿ ನನಗಿಂದ ದೊಡ್ಡವರು, ಅನುಭವಸ್ಥರು. ಇದು ಚುನಾವಣಾ ವರ್ಷ. ಏನಾದರೂ ಆರೋಪಿಸುವುದಿದ್ದರೆ ದಾಖಲಾತಿ ಇಟ್ಟುಕೊಂಡು ಆರೋಪಿಸಿ. ಸುಮ್ಮನೆ ಜನರಲ್ ಆಗಿ ಮಾತಾಡಬೇಡಿ. ಪತ್ರಿಕಾಗೋಷ್ಠಿ ನಡೆಸಿ ಮಾತಾಡಿದಾಗ ಮಾಧ್ಯಮದವರಿಗ ಏನಾದರೂ ದಾಖಲಾತಿ ಕೊಟ್ಟಿದ್ದೀರಾ. ನಾವಿಬ್ಬರೂ ಬಹಿರಂಗವಾಗಿ ಚರ್ಚೆ ಮಾಡೋಣ. ಸುಮ್ಮಸುಮ್ಮನೆ ಹಿಟ್ಟ ಆಂಡ್ ರನ್ ಕೇಸ್‌ನಂತಾಗಬಾರದು. ನಿಮ್ಮ, ನಿಮ್ಮ ಕುಟುಂಬದ ವಿಷಯದಲ್ಲಿ ನಾನು ಯಾವತ್ತಿಗೂ ವೈಯುಕ್ತಿಕವಾಗಿ, ಹಗುರವಾಗಿ ಮಾತನಾಡಿಲ್ಲ. ನೀವು ಬೇನಾಮಿ ಆಸ್ತಿ ಮಾಡಿದ್ದಾಗಿಯೂ ಹೇಳಿಲ್ಲ. ಹಾಗೆ ಹೇಳಿದ್ದರೆ ದಾಖಲೆ ಕೊಡಿ. ನಾನು ವೈಯುಕ್ತಿಕವಾಗಿ ವಿರೋಧ ಮಾಡಿಕೊಂಡು ರಾಜಕಾರಣ ಮಾಡೊಲ್ಲ. ಏನೇ ಮಾಡಿದರೂ ಜನರಿಗೆ ಒಳ್ಳೇಯದಾಗಲಿ ಎಂದು ರಾಜಕಾರಣ ಮಾಡ್ತೇನೆ ಎಂದರು. 

ಮಾತಿನ ಮಧ್ಯೆ ಶಾಸಕರು ಬಾವೂರ, ಕುಂಟೋಜಿ ಗ್ರಾಮದ ಫಲಾನುಭವಿಗಳಿಂದಲೇ ತಮ್ಮೂರಲ್ಲಿ ನಡೆಯುತ್ತಿರುವ ಶಾಲೆ ಕಟ್ಟಡದ ಗುಣಮಟ್ಟ ಕುರಿತು ಸದಭಿಪ್ರಾಯ ಹೊರ ಹಾಕಿಸಿ, ಆಲಮಟ್ಟಿ ರಸ್ತೆ ದುರಸ್ತಿ ಕಾಮಗಾರಿ ಕುರಿತು ಆ ಕೆಲಸ ಆಗಲೇಬೇಕಾಗಿತ್ತು ಎಂದು ಹೇಳಿಸೀಟೀಕಿಸುವವರಿಗೆ ಇದೇ ಉತ್ತರವಾಗಿದೆ ಎಂದು ಜನರ ಬಾಯಿಂದಲೇ ನಾಡಗೌಡರಿಗೆ ಉತ್ತರ ಕೊಡಿಸಿದರು. ಪಿಡಿಓ ಮತ್ತು ತಾಪಂ ಇಓಗಳಿಂದಲೇ ಸರ್ಕಾರದ ನಿರ್ದೇಶನ ಮತ್ತು ಮನೆ ಹಂಚಿಕೆ ವಿಷಯದಲ್ಲಿ ಪಾರದರ್ಶಕತೆ ಕಾಯ್ದುಕೊಂಡಿರುವ ಕುರಿತು ಅವರ ಬಾಯಿಂದಲೇ ನೈಜ ಸಂಗತಿ ಹೇಳಿಸಿದರು. 

ಹಿಂದೆ ನಾಡಗೌಡ್ರು, ನಾನು ಒಂದೇ ಪಕ್ಷದಲ್ಲಿದ್ದೆವು. ಈಗ ವಿರೋಧ ಪಕ್ಷದಲ್ಲಿದ್ದೇವೆ. ಇವತ್ತು ಜೊತೆಗಿದ್ದೋರು ನಾಳೆ ವಿರೋಧ ಪಕ್ಷದಲ್ಲಿರ್ತೇವೆ, ವಿರೋಧ ಪಕ್ಷದಲ್ಲಿದ್ದೋರು ನಾಳೆ ಜೊತೆಗಿರ್ತೆವೆ. ಮುಂದಿನ ರಾಜಕಾರಣ ಒಂದೇ ರೀತಿ ಇರೊಲ್ಲ. ಅದಕ್ಕೋಸ್ಕರ ಇನ್ನು ಮುಂದೆ ನನ್ನ ವಿರುದ್ಧ ಮಾತಾಡೋದಾದರೆ ದಾಖಲೆ ಇಟ್ಟುಕೊಂಡು ಮಾತಾಡೋದು ಒಳ್ಳೇಯದು ಎಂದು ವಿನಂತಿಸುತ್ತೇನೆ. 

-ಎ.ಎಸ್‌.ಪಾಟೀಲ ನಡಹಳ್ಳಿ, ಶಾಸಕರು. 


ಸುದ್ದಿ ಓದಿ