ಮಕ್ಕಳಲ್ಲಿ ಮಾನವೀಯ ಮೌಲ್ಯಗಳ ಜೊತೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಬೆಳೆಸಬೇಕು: ಸಿದ್ಧರಾಮ ಶ್ರೀ
ಮಹಾಲಿಂಗಪುರ, 26: ಮಕ್ಕಳಲ್ಲಿ ಪಾಲಕರು ಮಾನವೀಯ ಮೌಲ್ಯಗಳ ಜೊತೆಯಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಬೆಳೆಸಿದಲ್ಲಿ, ಅವರು ಭವಿಷ್ಯದ ಉತ್ತಮ ನಾಗರಿಕರಾಗುತ್ತಾರೆ ಎಂದು ಬೆಳಗಲಿಯ ಸಿದ್ಧರಾಮ ಶ್ರೀಗಳು ಹೇಳಿದರು.
ಸ್ಥಳೀಯ ವಾಸವಿ ಕಲ್ಯಾಣ ಮಂಟಪದಲ್ಲಿ ಜರುಗಿದ ಎಸ್ಸಿಪಿ ಪ್ರೌಢ ಶಾಲೆಯ 1987-88ನೇ ಸಾಲಿನ ವಿದ್ಯಾರ್ಥಿಗಳ ಅಪೂರ್ವ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಮ್ಮ ಬೆಳವಣಿಗೆಯಲ್ಲಿ ತಂದೆ ತಾಯಿ ಗಳ ತ್ಯಾಗ ಸ್ಮರಿಸಿ ಅವರನ್ನು ಆದರದಿಂದ ಕಾಣಬೇಕು ಎಂದು ಹೇಳುತ್ತ ಅಪೂರ್ವ ಸಂಗಮ ಕಾರ್ಯಕ್ರಮದಲ್ಲಿ 37 ವರ್ಷಗಳ ನಂತರ ಮತ್ತೊಮ್ಮೆ ತಾವೆಲ್ಲ ಸೇರಿರುವುದು ಗೆಳೆತನದ ಸುಮಧುರ ಬಾಂಧವ್ಯ ಎಂತಹದ್ದು ಎಂದು ತೋರಿಸುತ್ತದೆ ಗೆಳೆತನದ ಮಹತ್ವ ತಿಳಿಸಿದರು.
ಮುಖ್ಯ ಅತಿಥಿ ಕೆಜಿಎಫ್ ಖ್ಯಾತಿಯ ಗೋವಿಂದೇಗೌಡ (ಜೀಜೀ) ಅವರು ಮಾತನಾಡಿ, ಜೀವನದ ಪ್ರತೀ ಹೆಜ್ಜೆಯಲ್ಲೂ ಸಿಗುವ ಅವಕಾಶಗಳನ್ನು ಯಶಸ್ಸಿನ ಮೆಟ್ಟಿಲಾಗಿಸಿಕೊಳ್ಳುವ ಸೂಕ್ಷ??ತೆ, ಸೃಜನಶೀಲತೆ, ಬುಧ್ಧಿಂತಿಕೆ ಶ್ರಮ, ಹೃದಯವಂತಿಕೆ, ವಿನಯ ಹಾಗೂ ಹಮ್ಮುಬಿಮ್ಮಿಲ್ಲದ ಸರಳ ಜೀವನ, ಕಲಾ ಪ್ರೋತ್ಸಾಹ, ಆಧ್ಯಾತ್ಮ ಮತ್ತು ಧಾರ್ಮಿಕ ಚಿಂತನೆಗಳು ಮನುಷ್ಯನ ಉತ್ತಮ ಸಾಧನೆಗೆ ಮೈಲುಗಲ್ಲುಗಳಾಗಿವೆ ಎಂದರು. ಬಾಲ್ಯದ ಗೆಳೆಯರು ಒಂದೆಡೆ ಕಲೆತಾಗ ಚಿರ ಯೌವ್ವನದ ಮಧುರ ಕ್ಷಣಗಳು ನೆನಪಿಸುತ್ತದೆ. ಈ ಕಾರಣದಿಂದ ತಾವೆಲ್ಲರೂ ಇಲ್ಲಿ ಸೇರಿ ವಿಧ್ಯಾರ್ಥಿಗಳಂತೆ ವರ್ತಿಸಿ ಗತ ಇತಿಹಾಸವನ್ನು ಆನಂದಿಸುತ್ತಿದ್ದಿರಿ ಎಂದರು.
ಕಾಮಿಡಿ ಖಿಲಾಡಿ, ಚಲನಚಿತ್ರ ನಟಿ ದಿವ್ಯಶ್ರೀ ಮಾತನಾಡಿ, ಉತ್ತರ ಕರ್ನಾಟಕದ ಭಾಷೆ ಭಿನ್ನವಾದರೂ ಭಾವ ಮಾತ್ರ ಶುದ್ಧ. ಇಲ್ಲಿ ಎಲ್ಲರೂ ಮನಸ್ಸು ಬಿಚ್ಚಿ ಮಾತನಾಡುತ್ತಾರೆ.ಈ ಭಾಗದ ಮಹಿಳೆಯರು ಸೃಜನಶೀಲರು, ಧೈರ್ಯವಂತರು. ಒಂದುಗೂಡಿ ಬಾಳುವ ಗುಣದವರು ಇಂದು ಸಮಾಜದ ವಿವಿಧ ಸ್ಥಾನಮಾನಗಳಲ್ಲಿರುವ 37 ವರ್ಷಗಳ ಹಿಂದಿನ ವಿದ್ಯಾರ್ಥಿಗಳು ಅಪೂರ್ವ ಸಂಗಮದ ಹೆಸರಿನಲ್ಲಿ ಮತ್ತೆ ಒಂದಾಗಿ ಬಾಲ್ಯದ ನೆನಪುಗಳ ಮಡಿಲು ಸೇರಿ ಇಂದಿನ ಮಕ್ಕಳಿಗೆ ಸ್ಫೂರ್ತಿಯಾಗುವ ಕಾರ್ಯಕ್ರಮ ಶ್ಲಾಘನೀಯ ಎಂದರು.
ಭಾನುವಾರ ಮುಂಜಾನೆಯಿಂದಲೇ ಸ್ಥಳೀಯ ಮತ್ತು ದೂರ ದೂರುಗಳಿಂದ ಸಹಪಾಠಿಗಳು ಬಹಳ ಉತ್ಸುಕತೆಯಿಂದ, ವೇದಿಕೆ ಭಾಷನ, ರೂಪಕ, ಅನಿಸಿಕೆಗಳು, ಮನೋರಂಜನೆ ಮತ್ತು ಸಾಮೂಹಿಕ ನೃತ್ಯಗಳಲ್ಲಿ ಪಾಲ್ಗೊಂಡು ಹಳೆ ನೆನಪುಗಳ ಲಹರಿಯಲ್ಲಿ ಕಾಲ ಕಳೆದರು. ಎಲ್ಲರೂ ಸೇರಿ ಮುಂಜಾನೆ ಉಪಹಾರ, ಮಧ್ಯಾಹ್ನ ಭೋಜನ, ಮಧ್ಯೆ ಆಯಿಸ್ಕ್ರಿಂ ಸವಿದು ಬಹಳ ದಿನಗಳ ನಂತರ ಭೇಟಿಯಾಗಿ ಶಾಲಾ ದಿನಗಳನ್ನು ನೆನಪಿಸಿಕ್ಕೊಂಡು ಸಿಕ್ಕ ಅವಕಾಶವನ್ನು ಆನಂದಿಸಿದರು. ಸಂಧ್ಯಾಕಾಲ ಸೂರ್ಯ ತನ್ನೊಡಲಲ್ಲಿ ಸೇರುವ ಸಮಯ ಮತ್ತೊಮ್ಮೆ ತಮ್ಮ ತಮ್ಮ ಮನೆ ಕಡೆಗೆ ಭಾರವಾದ ಹೃದಯ ಹೊತ್ತು ಒಬ್ಬರನ್ನೊಬ್ಬರು ಮುಖ ನೋಡುತ್ತ ಕಣ್ಣಂಚಿನಲ್ಲಿ ನೀರು ಜಿನುಗಿದರೂ ಸಹಪಾಠಿಗಳಿಗೆ ಅಗಲಿಕೆ ಮಾತ್ರ ಮತ್ತೊಮ್ಮೆ ಅನಿವಾರ್ಯವಾಗಿ ಧನ್ಯತಾ ಭಾವದಿಂದ ನಿರ್ಗಮಿಸಿದರು.
ಈ ಹಳೆ ವಿದ್ಯಾರ್ಥಿಗಳಿಂದ 2022ರಲ್ಲಿ ಗುರುವಂದನ, 2023 ರಲ್ಲಿ ಸ್ನೇಹ ಸಂಗಮ ಮತ್ತು 2024 ಅಪೂರ್ವ ಸಂಗಮ ಹೀಗೆ ಮೂರು ಕಾರ್ಯಕ್ರಮಗಳು ನಡೆದವು.ಕಾರ್ಯಕ್ರಮ ಪಪೂ ಸಿದ್ಧರಾಮ ಶ್ರೀಗಳನ್ನು, ಪುರಸಭಾ ನೂತನ ಅಧ್ಯಕ್ಷ ಯಲ್ಲನಗೌಡ ಪಾಟೀಲ ನಟರಾದ ಗೋವಿಂದೇಗೌಡ ಮತ್ತು ದಿವ್ಯಶ್ರೀ ಅವರನ್ನು ಸನ್ಮಾನಿಸಲಾಯಿತು.ಕಾನಿಪ ಅಧ್ಯಕ್ಷ ಮಹೇಶ ಮಹೇಶ ಮನ್ನಯ್ಯನವರಮಠ, ಪತ್ರಕರ್ತ ಜಯರಾಮ ಶೆಟ್ಟಿ ಮಾತನಾಡಿದರು. ಸಹಪಾಠಿ ಪಂಡಿತ ಪೂಜಾರಿ ಅಧ್ಯಕ್ಷತೆ ವಹಿಸಿ, ಶಿಕ್ಷಕಿ ಸರಸ್ವತಿ ಚನಪನ್ನವರ ಪ್ರಾರ್ಥಿಸಿ, ಮೀನಾಕ್ಷಿ ಹಿಟ್ಟಿನಮಠ ಸ್ವಾಗತಿಸಿ, ಪತ್ರಕರ್ತ ನಾರನಗೌಡ ಉತ್ತಂಗಿ ನಿರೂಪಿಸಿದರು. ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.