ನಕಲಿ ದಾಖಲೆ ಸೃಷ್ಟಿ: ಪ್ರಕರಣ ದಾಖಲು
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ. 14 : ಪಟ್ಟಣದ ತಾಲೂಕು ಪಂಚಾಯತಿ ನರೇಗಾ ಗ್ರಾಮೀಣ ಸಹಾಯಕ ನಿರ್ದೇಶಕ ಉಮೇಶ್ ಗೌಡ ಬಡ್ತಿಗಾಗಿ ನಕಲಿ ದಾಖಲೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಪಟ್ಟಣದ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಪರವಾಗಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಶೈಲಾ ಎಸ್. ಕುಲಕರ್ಣಿ ಅವರು ನೀಡಿದ ದೂರಿನನ್ವಯ ದೂರು ದಾಖಲಾಗಿದ್ದು ಈ ಹಿಂದೆ ಉಮೇಶ್ ಗೌಡ ವೆಂಕನಗೌಡರ್ ಹಗರಿಬೊಮ್ಮನಹಳ್ಳಿ ತಾಲೂಕು ಪಚಾಯತಿಯಲ್ಲಿ ಸಹಾಯಕ ಸಾಂಖ್ಯಿಕ ಅಧಿಕಾರಿಯಾಗಿದ್ದಾಗ ಉದ್ಯೋಗದಲ್ಲಿ ಮುಂಬಡ್ತಿ ಪಡೆಯುವ ದುರುದ್ದೇಶದಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರು ಮುಕ್ತ ಗಂಗೋತ್ರಿ ಹೆಸರಲ್ಲಿ 2007,2008 ಮತ್ತು 2009 ನೇ ಸಾಲಿನ ಬಿ.ಎ. ಪದವಿಯ ನಕಲಿ ಅಂಕಪಟ್ಟಿ, ಪಾಸಿಂಗ್ ಸರ್ಟಿಫಿಕೇಟ್ ಮೈಗ್ರೇಶನ್ ಸೃಷ್ಟಿ ಮಾಡಿಕೊಂಡು ತಾಲೂಕು ಪಂಚಾಯತಿ ಇಒ ಅವರಿಂದ ದೃಢಿಕರಿಸಿಕೊಂಡು ಮುಂಬಡ್ತಿ ಪಡೆದುಕೊಂಡು ಹಗರಿಬೊಮ್ಮನಹಳ್ಳಿ ತಾಲೂಕು ಪಂಚಾಯತಿಯಲ್ಲಿ ಕಾನೂನುಬಾಹಿರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆಂದು ಆರೋಪಿಸಿ ಉಮೇಶ್ ಗೌಡರನ್ನು ಬಂಧಿಸಲಾಗಿದೆ.