ಬಳ್ಳಾರಿ

ತಂಬಾಕು ಉತ್ಪನ್ನಗಳಿಂದಾಗುವ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸಿ: ಎಡಿಸಿ ಮಹಮ್ಮದ್‌.ಎನ್ ಝುಬೇರ್

ತಂಬಾಕು ಉತ್ಪನ್ನಗಳಿಂದಾಗುವ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸಿ: ಎಡಿಸಿ ಮಹಮ್ಮದ್‌.ಎನ್ ಝುಬೇರ್

ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಮಟ್ಟದ ಸಮನ್ವಯ ಸಭೆ 

ಬಳ್ಳಾರಿ 01; ತಂಬಾಕು ಸೇವನೆಯಿಂದ ಯುವ ಸಮುದಾಯ ಮತ್ತು ಸಾರ್ವಜನಿಕರ ಆರೋಗ್ಯಕ್ಕೆ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಈ ಕುರಿತು ಅರಿವು ಮೂಡಿಸಲು ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಮಹಮ್ಮದ್‌.ಎನ್ ಝುಬೇರ್ ಅವರು ಹೇಳಿದರು. 

ನಗರದ ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸೋಮವಾರ ಏರಿ​‍್ಡಸಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಮಟ್ಟದ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ತಂಬಾಕು ಸೇವನೆ ಹಾಗೂ ಧೂಮಪಾನ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಇದರ ಕುರಿತು ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್ ಅಂಟಿಸುವ ಮೂಲಕ ವ್ಯಾಪಕ ಪ್ರಚಾರ ಕೈಗೊಂಡು ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ತಿಳಿಸಿದರು. 

ಶಾಲಾ-ಕಾಲೇಜು ಆವರಣದ 100ಮೀ. ಅಂತರದೊಳಗೆ ಧೂಮಪಾನ ಮಾರಾಟ ಮತ್ತು ತಂಬಾಕು ಸೇವನೆ ಸಂಪೂರ್ಣ ನಿಷೇಧಿಸಲಾಗಿದ್ದು, ಮಾರಾಟ ಹಾಗೂ ಬಳಕೆ ಕಂಡುಬಂದಲ್ಲಿ ಕಾನೂನು ಕ್ರಮ ಜರುಗಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. 

ಶಾಲಾ ಕಾಲೇಜು, ಅಂಗಡಿಗಳು, ರೆಸ್ಟೋರೆಂಟ್, ಚಿತ್ರ ಮಂದಿರ, ಸಾರ್ವಜನಿಕ ಸ್ಥಳ ಸೇರಿದಂತೆ ವಿವಿಧೆಡೆ ಅನೀರಿಕ್ಷಿತ ಭೇಟಿ ನಡೆಸಬೇಕು. ಧೂಮಪಾನ ವಲಯಗಳಲ್ಲಿ ಪೋಸ್ಟರ್ ಅಳವಡಿಸದೇ ಇರುವ ಹಾಗೂ ತಂಬಾಕು ನಿಯಂತ್ರಣ ಕೋಶದ ನಿಯಾಮವಳಿಗಳನ್ನು ಪಾಲಿಸದೇ ಇದ್ದಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದರು. 

ಸಾರ್ವಜನಿಕರು ಹೆಚ್ಚಾಗಿ ಬಸ್ ಪ್ರಯಾಣ ಅವಲಂಬಿಸಿದ್ದು, ತಂಬಾಕು ಸೇವನೆ, ಧೂಮಪಾನದ ದುಷ್ಪರಿಣಾಮ ಕುರಿತು ಬಸ್‌ಗಳಲ್ಲಿ ಮತ್ತು ಬಸ್ ನಿಲ್ದಾಣದಲ್ಲಿ ಪೋಸ್ಟರ್ ಅಂಟಿಸುವ ಮೂಲಕ ಅರಿವು ಮೂಡಿಸಲು ಕೈ ಜೋಡಿಸಿ ಎಂದು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಹೇಳಿದರು. 

ಜಿಲ್ಲೆಯಾದ್ಯಂತ ಏಕ ಕಾಲದಲ್ಲಿ ಶಾಲಾ-ಕಾಲೇಜು, ವಿಶ್ವವಿದ್ಯಾಲಯ ಸೇರಿದಂತೆ ಶೈಕ್ಷಣಿಕ ಸಂಸ್ಥೆಗಳಲ್ಲಿ ತಂಬಾಕು ಸೇವನೆ ಮತ್ತು ಧೂಮಪಾನದ ದುಷ್ಪರಿಣಾಮ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ವಿನೂತನ ಪ್ರಯೋಗ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು. 

ಇದೇ ವೇಳೆ ತಂಬಾಕು ನಿಯಂತ್ರಣ ಕುರಿತ ಪೋಸ್ಟರ್‌ಗಳನ್ನು ಪ್ರದರ್ಶಿಸಲಾಯಿತು. 

ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಬಸರೆಡ್ಡಿ.ಎನ್‌., ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಮತ್ತಿತರು ಉಪಸ್ಥಿತರಿದ್ದರು. 


ಸುದ್ದಿ ಓದಿ