ಕರೋನಾ ವೈರಸ್ ; ಕೇಂದ್ರ ಕ್ಯಾಬಿನೆಟ್ ಕಾರ್ಯದರ್ಶಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ
ನವದೆಹಲಿ, ಫೆ ೩: ನೊವಲ್ ಕರೋನಾ ವೈರಸ್ ಸೋಂಕು ಹಬ್ಬುವುದನ್ನು ತಡೆಗಟ್ಟಲು ದೇಶದಲ್ಲಿ ಕೈಗೊಳ್ಳಲಾಗಿರುವ ಸಿದ್ಧತೆಗಳ ಬಗ್ಗೆ ಕೇಂದ್ರ ಕ್ಯಾಬಿನೆಟ್ ಕಾರ್ಯದರ್ಶಿ ಸೋಮವಾರ ಅತ್ಯುನ್ನತ ಮಟ್ಟದ ಸಭೆ ನಡೆಸಿದರು.
ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಿದೇಶಾಂಗ ವ್ಯವಹಾರ, ಗೃಹ ವ್ಯವಹಾರ, ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿಗಳು, ಆರೋಗ್ಯ ಸಂಶೋಧನಾ ವಿಭಾಗದ ಕಾರ್ಯದರ್ಶಿ, ಐಟಿಬಿಪಿ, ಎಎಫ್ಎಂಎಸ್ ಮತ್ತು ಎಸ್ಡಿಎಂಎ ಪ್ರತಿನಿಧಿಗಳು ಭಾಗವಹಿಸಿದ್ದರು.
ಕೇಂದ್ರ ಸಂಪುಟ ಕಾರ್ಯದರ್ಶಿ, ಕೊರೋನಾ ವೈರಸ್ ಸಂಬಂಧಿಸಿದಂತೆ ಈವರೆಗೆ ಆರು ಪರಿಶೀಲನಾ ಸಭೆಗಳನ್ನು ನಡೆಸಿದ್ದಾರೆ. ಸೋಮವಾರದ ಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಚೀನಾ ದೇಶಕ್ಕೆ ತರಳುವುದನ್ನು ನಿರ್ಬಂಧಿಸುವಂತೆ ಹೊಸ ಪ್ರಯಾಣ ಸಲಹೆ ನೀಡಲಾಗಿದೆ. ಚೀನಾದಿಂದ ಹಿಂದಿರುಗಿದ ಪ್ರಯಾಣಿಕರನ್ನು ನಿರ್ಬಂಧದಲ್ಲಿರಿಸಲು ನಿರ್ಧರಿಸಲಾಗಿದೆ. ಜನವರಿ ೧೫, ೨೦೨೦ ರಿಂದ ಚೀನಾಕ್ಕೆ ತೆರಳಿರುವ ಅಥವಾ ಅಲ್ಲಿಗೆ ಹೋಗಿ ಬರುವ ಎಲ್ಲರನ್ನು ತಾತ್ಕಲಿಕವಾಗಿ ಪ್ರತ್ಯೇಕಿಸಿ ನಿರ್ಬಂಧಿಸಲು ನಿರ್ಧರಿಸಲಾಗಿದೆ.
ಈವರೆಗೆ ಭಾರತಕ್ಕೆ ಬಂದಿರುವ ೪೪೫ ವಿಮಾನಗಳ ೫೮,೬೫೮ ಪ್ರಯಾಣಿಕರನ್ನು ವಿಮಾನ ನಿಲ್ದಾಣಗಳಲ್ಲಿ ತಪಾಸಣೆಗೊಳಪಡಿಸಲಾಗಿದೆ. ಒಟ್ಟು ೧೪೨ ಮಂದಿಯಲ್ಲಿ ಶಂಕಿತ ಅಸ್ವಸ್ಥತೆ ಕಂಡುಬಂದಿದ್ದು ಅವರನ್ನು ಪ್ರತ್ಯೇಕಿಸಿ ನಿರ್ಬಂಧಿಸಿಲು ಸೂಚಿಸಲಾಗಿದೆ. ಪರೀಕ್ಷಿಸಿದ ೧೩೦ ಮಾದರಿಗಳಲ್ಲಿ ೧೨೮ ಪ್ರಕರಣಗಳಲ್ಲಿ ನಕಾರಾತ್ಮಕ ಎಂದು ಕಂಡುಬಂದಿದೆ. ಕೇರಳದಲ್ಲಿ ಎರಡು ಸಕಾರಾತ್ಮಕ ಪ್ರಕರಣಗಳ ಮೇಲೆ ನಿಗಾ ಇಡಲಾಗಿದೆ. ವುಹಾನ್ನಿಂದ ಭಾನುವಾರ ೩೩೦ ಪ್ರಯಾಣಿಕರ ಎರಡನೇ ಬ್ಯಾಚ್ ಭಾರತಕ್ಕೆ ಆಗಮಿಸಿದ್ದು. ಈ ಪೈಕಿ ೩೦೦ ಮಂದಿಯನ್ನು ದೆಹಲಿಯ ಐಟಿಬಿಪಿ ಚಾವ್ಲಾ ಶಿಬಿರದಲ್ಲಿ ಇರಿಸಲಾಗಿದೆ. ಈ ಪೈಕಿ ೩೦ ಮಂದಿಯನ್ನು ಮನೇಸರ್ ಶಿಬಿರದಲ್ಲಿ ಇರಿಸಲಾಗಿದ್ದು, ಅವರು ಆರೋಗ್ಯ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.