ಸಂವಿಧಾನದ ಜಾಗೃತಿ ಜಾಥಾ: ಸಂವಿಧಾನದ ಪ್ರಸ್ತಾವನೆಯ ಪ್ರತಿಜ್ಞಾ ವಿಧಿ ಸ್ವೀಕಾರ

ಸಂವಿಧಾನದ ಜಾಗೃತಿ ಜಾಥಾ: ಸಂವಿಧಾನದ ಪ್ರಸ್ತಾವನೆಯ ಪ್ರತಿಜ್ಞಾ ವಿಧಿ ಸ್ವೀಕಾರ

ಲೋಕದರ್ಶನ ವರದಿ 

ಬಳ್ಳಾರಿ 06: ಸಂವಿಧಾನದ ಜಾಗೃತಿ ಜಾಥಾವನ್ನು ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಡಾ.ಬಿ.ಆರ್‌.ಅಂಬೇಡ್ಕರ್ ರವರ ಪ್ರತಿಮೆಗೆ ಭಕ್ತಿಪೂರ್ವಕವಾಗಿ ಪೂಜಿಸುವುದರೊಂದಿಗೆ ಜಾಥಾಕ್ಕೆ ಸ್ವಾಗತ ಕೋರಿ ಭಾರತದ ಸಂವಿಧಾನದ ಪ್ರಸ್ತಾವನೆಯ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ಸಂವಿಧಾನ ಜಾಗೃತಿಯನ್ನು ಸಿರುಗುಪ್ಪ ತಾಲ್ಲೂಕಿನ ಬೀರಹಳ್ಳಿ, ಹಚ್ಚೊಳ್ಳಿ, ಕುಡದರಹಾಳ್, ಬಾಗೇವಾಡಿ ಹಾಗೂ ದೇಶನೂರು ಗ್ರಾಮ ಪಂಚಾಯಿತಿಗಳ  ವ್ಯಾಪ್ತಿಯಲ್ಲಿ ಸಂಚರಿಸುವ ಮೂಲಕ ಬಾಗೇವಾಡಿ ಗ್ರಾಮದಲ್ಲಿ ಶಾಸಕ ಬಿ.ಎಂ.ನಾಗರಾಜ ಅವರು ಸಂವಿಧಾನ ಜಾಗೃತಿ ಜಾಥಾವನ್ನು ಅದ್ದೂರಿಯಾಗಿ ಸ್ವಾಗತಿಸಿಕೊಂಡರು. ಬಾಗೇವಾಡಿ ಗ್ರಾಮದಲ್ಲಿ ದಾರಿಯುದ್ದಕ್ಕೂ ಜಾಥಾದ ಜೊತೆಗೆ ಹೆಜ್ಜೆ ಹಾಕಿ ಗ್ರಾಮಸ್ಥರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದರು. 

ಹಚ್ಚೊಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಮಹೇಶ್ ಮಾತನಾಡಿ, ಡಾ.ಬಿ.ಆರ್‌. ಅಂಬೇಡ್ಕರ್ ರವರ ಸಂವಿಧಾನವು ನಮ್ಮ ಜೀವನದಲ್ಲಿ ಒಂದು ಭಾಗವಾಗಿದ್ದು, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ತತ್ವವನ್ನು ನಮಗೆಲ್ಲರಿಗೂ ನೀಡಿದೆ. ಜಾತ್ಯಾತೀತ, ಸಮಾಜವಾದಿ ರಾಷ್ಟ್ರ ನಮ್ಮದು ಇದು ನಮ್ಮೆಲ್ಲರ ಜೀವನದ ಸ್ಪೂರ್ತಿಯಾಗಿದೆ ಎಂದು ಸ್ಮರಿಸಿದರು. 

ಬೀರಳ್ಳಿ ಗ್ರಾಮದ ಗ್ರಾಮಸ್ಥ ಮುದ್ದಪ್ಪ ಮಾತನಾಡಿ, ರಾಜ್ಯ ಸರ್ಕಾರವು ಸಾರ್ವಜನಿಕರಲ್ಲಿ ಸಂವಿಧಾನದ ಬಗ್ಗೆ ಅರಿವು ಮೂಡಿಸಲು ಈ ಉತ್ತಮವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸಂವಿಧಾನವು ನಮಗೆ ಸ್ವಾತಂತ್ರ್ಯ, ಸಮಾನತೆ ಹಾಗೂ ಹಕ್ಕುಗಳನ್ನು ನೀಡಿದ್ದು, ನಾವು ದೇಶದ ಅಭಿವೃದ್ಧಿಗೆ  

ನಮ್ಮದೇ ಕೊಡುಗೆ ನೀಡಬೇಕು ಎಂದು ತಿಳಿಸಿದರು. 

ಕಳಶ ಹಿಡಿದ ಮತ್ತು ಪೂರ್ಣ ಕುಂಭ ಹೊತ್ತ ಮಹಿಳೆಯರು, ಡೊಳ್ಳು ಕಲಾವಿದರು, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ಗ್ರಾಮದ ಜನಪ್ರತಿನಿಧಿಗಳು, ಊರಿನ ಮುಖಂಡರು ಹಾಗೂ ಸಾರ್ವಜನಿಕರು ಪಾಲ್ಗೊಂಡು ಜಾಥಾಗೆ ಮೆರಗು ನೀಡಿದರು. 

*ಹಚ್ಚೊಳ್ಳಿ ಹಾಗೂ ಕುಡದರಹಾಳ್ ಗ್ರಾಮಗಳಲ್ಲಿ ಅದ್ದೂರಿ ಮೆರವಣಿಗೆ:* 

ಹಚ್ಚೊಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ವಿವಿಧ ನಾಯಕರ ವೇಷ ಭೂಷಣಗಳೊಂದಿಗೆ ಭಾಗವಹಿಸಿ, ವಿದ್ಯಾರ್ಥಿಗಳಿಂದ ಪ್ರಸ್ತಾವನೆಯನ್ನು ಓದಿಸಿ,  ಒಂದು ಕಿ.ಮೀ ವರೆಗೆ ಪಥ ಸಂಚಲನ ಮಾಡುವ ಮೂಲಕ ಜಾಥಾದಲ್ಲಿ ಪಾಲ್ಗೊಂಡಿದ್ದು ಉತ್ಸಾಹ ಇಮ್ಮಡಿಸಿತು. ಹಚ್ಚೊಳ್ಳಿ ಗ್ರಾಮದ ವಿವಿಧ ಶಾಲೆಗಳ 25-30 ವಿದ್ಯಾರ್ಥಿಗಳು ವಿವಿಧ ವೇಷ ಭೂಷಣಗಳನ್ನು ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. 

ವಸತಿ ಶಾಲೆಯ ಪ್ರಾಂಶುಪಾಲ ಕೆ.ವಿ.ಕೋಟೇಶ್ವರ ಹಾಗೂ ಶಿಕ್ಷಕರಾದ ಮಲ್ಲಿಕಾರ್ಜುನ.ಎ, ನಾರಾಯಣ.ಇ, ಬಿಂಗಿ ತಿಪ್ಪೇಶ, ರಾಜು ಪಾಲ್ಗೊಂಡಿದ್ದರು.   

ಜಾಥಾದಲ್ಲಿ ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು  ಕುರಿತು ಸಾರ್ವಜನಿಕರಲ್ಲಿ  ಜಾಗೃತಿಯನ್ನು ಮೂಡಿಸಿ, ಸಂವಿಧಾನ ರಚನಾ ಸಭೆ ಹಾಗೂ ಸಂವಿಧಾನದ ಕುರಿತ ವೀಡಿಯೋ ತುಣುಕುಗಳನ್ನು ಸಾರ್ವಜನಿಕರಿಗೆ ಪ್ರದರ್ಶಿಸಿದರು. ಸಂವಿಧಾನ ಪ್ರಸ್ತಾವನೆಯ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿ ಜಾಥಾದ ಉದ್ದಕ್ಕೂ ಸಂವಿಧಾನ ಪ್ರಸ್ತಾವನೆಯ ಪ್ರತಿಗಳನ್ನು ಹಂಚಿಕೆ ಮಾಡಲಾಯಿತು. 

ಜಾಥಾ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ವರ್ಗದವರು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ವಿವಿಧ ಇಲಾಖೆಗಳ ಸಿಬ್ಬಂದಿ ವರ್ಗದವರು ಗ್ರಾಮ ಪಂಚಾಯಿತಿಗಳ ಜನಪ್ರತಿನಿಧಿಗಳು ಹಾಗೂ ಇನ್ನೀತರರು ಭಾಗವಹಿಸಿದ್ದರು. 



ಸುದ್ದಿ ಓದಿ