ಶಿಗ್ಗಾವ್

ಶೌಚಾಲಯ ಸ್ವಚ್ಚತೆಯ 60 ವರ್ಷದ ಸೇವೆ ಪರಿಗಣಿಸಿ: ಬಾಬಕ್ಕ ಬಳ್ಳಾರಿ

ಶೌಚಾಲಯ ಸ್ವಚ್ಚತೆಯ  60 ವರ್ಷದ ಸೇವೆ ಪರಿಗಣಿಸಿ:  ಬಾಬಕ್ಕ ಬಳ್ಳಾರಿ

ಶಿಗ್ಗಾವಿ 26: ಪಟ್ಟಣದ ಹಳೆ ಬಸ್ಟ್ಯಾಂಡಿನ ಶೌಚಾಲಯದಲ್ಲಿ ನಮ್ಮ ತಾಯಿಯವರ ಕಾಲದಿಂದ ಸುಮಾರು 60 ವರ್ಷಗಳಿಂದ ತಮ್ಮ ಕುಟುಂಬ ಮಲ ಸ್ವಚ್ಚತಾ ಕಾರ್ಯ ಮತ್ತು ನಿರ್ವಹಣೆ ಮಾಡುತ್ತಾ ಬಂದಿದ್ದು, ತಾನು ಕೂಡಾ ಈ ಕಾರ್ಯವನ್ನೇ ನಂಬಿ ಜೀವನ ಮಾಡುತ್ತಿದ್ದು, ಹೊಸದಾಗಿ ನಿರ್ಮಿಸುತ್ತಿರುವ ಶೌಚಾಲಯದ ನಿರ್ವಹಣೆಯನ್ನು ನನಗೆ ನೀಡಿ ಎಂದು ಬಾಬಕ್ಕಾ ಬಳ್ಳಾರಿ ಅಧಿಕಾರಿಗಳಲ್ಲಿ ಮೊರೆಯಿಡುತ್ತಿದ್ದಾರೆ. 

ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿರುವ ಶೌಚಾಲಯವು ಶೀತಿಲಾವಸ್ಥೆಗೆ ಬಂದಿದ್ದು ಕರ್ನಾಟಕ ಸಾರಿಗೆ ಇಲಾಖೆಯ ಶಿಗ್ಗಾವಿ ವಿಭಾಗದ ಅಧಿಕಾರಿಗಳು ಅದನ್ನು ತೆರವು ಗೊಳಿಸಲು ಪುರಸಭೆಗೆ ಮನವಿ ಮಾಡಿಕೊಂಡಿದ್ದು, ಅದಕ್ಕೆ ಪುರಸಭೆ ಅಸ್ತು ಎಂದಿದೆ. ಆದರೆ ಶಿಗ್ಗಾವಿಯ ಹಿಂದುಳಿದ ವರ್ಗದ ಬಡ ಕುಟುಂಬದ ಸದಸ್ಯರು ಒಂದು ಬೀದಿಗೆ ಬೀಳುವ ಆತಂಕದಲ್ಲಿದೆ.  

ಶೌಚಾಲಯ ನಿರ್ಮಾಣ ಆದಾಗಿನಿಂದಲೂ ಅಂದರೆ ಸುಮಾರ 60 ವರ್ಷಗಳಿಂದ ಶೌಚಾಲಯದ ನಿರ್ವಹಣೆ ಮಾಡುತ್ತಾ ಬರುವ ಅಲ್ಪ ಸ್ವಲ್ಪ ಹಣದಲ್ಲಿ ಜೀವನ ಸಾಗಿಸುತ್ತಿದ್ದು, ಕುಟುಂಬ ಈಗ ದಿಕ್ಕು ಕಾಣದಂತಾಗಿ ವರದಿಗಾರ ಮಿತ್ರರಲ್ಲಿ ತಮ್ಮ ಆತಂಕ ತೋಡಿಕೊಂಡಿದೆ. 

ಈಗ ಚಾಲತಿ ಇರುವ ಕಾನೂನು ಮತ್ತು ನಿಯಮಗಳ ಚೌಕಟ್ಟಿನಲ್ಲಿ ಕೆಲಸ ಮಾಡಬೇಕಾದ ಅಧಿಕಾರಿಗಳು, ಕಾನೂನು ಪ್ರಕಾರ ಟೆಂಡರ್ ಪ್ರಕ್ರಿಯೆ ಮೂಲಕ ಪಡೆದುಕೊಳ್ಳುವಂತೆ ಸೂಚಿಸಿದ್ದು, ಅವು ಯಾವುದೂ ತಿಳಿಯದ ನಮಗೆ ಇದು ಕಷ್ಟ, ನಮ್ಮ ಕುಟುಂಬದ 60 ವರ್ಷದ ನಿರಂತರ ಸೇವೆಯನ್ನು ಪರಿಗಣಿಸಿ ನೂತನವಾಗಿ ನಿರ್ಮಾಣವಾಗುತ್ತಿರುವ ಶೌಚಾಲಯದ ನಿರ್ವಹಣೆಯ ಕೆಲಸವನ್ನು ನಮಗೆ ನೀಡಬೇಕು ಎಂದು ಕಂಡ ಕಂಡವರಲ್ಲಿ ಮೊರೆ ಇಡುತ್ತಿದ್ದಾರೆ. 


ಸುದ್ದಿ ಓದಿ