ಕೆರೆಗಳ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ: ಡಾ. ಜಿ.ಆರ್. ಸೋನೆರ
ಲೋಕದರ್ಶನ ವರದಿ
ಬೆಳಗಾವಿ 10: “ನಮ್ಮ ಊರು ನಮ್ಮ ಕೆರೆ” ಅಭಿಯಾನದಡಿ ಕೆರೆಯ ಹೂಳೆತ್ತುವ ಕಾರ್ಯ ಕೈಗೊಂಡು, ಕೆರೆಯನ್ನು ಅಭಿವೃದ್ಧಿಪಡಿಸುವ ಮೂಲಕ ಜಲಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ ಎಂದು ಜನಜಾಗೃತಿ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಜಿ.ಆರ್. ಸೋನೆರ ಹೇಳಿದರು. ಬುಧವಾರ ಜರುಗಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ “ನಮ್ಮ ಊರು ನಮ್ಮ ಕೆರೆ” ಕಾರ್ಯಕ್ರಮದಡಿ 978ನೇ ಕೆರೆಯನ್ನಾಗಿ ಹೂಳೆತ್ತಿ ಅಭಿವೃದ್ಧಿ ಪಡಿಸಲಾದ ಪಟ್ಟಣದ ತುಂಬುಕೆರೆ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೆರೆಗಳ ಅಭಿವೃದ್ಧಿಯಿಂದ ನೀರು ಸಂಗ್ರಹಣೆಯ ಸಾಮರ್ಥ್ಯ ಹೆಚ್ಚಿಸಲಿದೆ.
ಪ್ರತಿಯೊಂದು ಗ್ರಾಮದಲ್ಲೂ ಕೆರೆ, ಕಟ್ಟೆ ಹಾಗೂ ಜಲಮೂಲಗಳ ಸಂರಕ್ಷಣೆಗೆ ಸಾರ್ವಜನಿಕರು ಮುಂದಾಗಬೇಕು. ನೀರಿನ ಸಂರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಆಗಿದೆ. “ನಮ್ಮ ಊರು ನಮ್ಮ ಕೆರೆ” ಎಂಬ ಆಶಯದೊಂದಿಗೆ ಸ್ಥಳೀಯರು ಒಗ್ಗಟ್ಟಾಗಿ ಕೆರೆಗಳ ಅಭಿವೃದ್ಧಿ ಹಾಗೂ ಸ್ವಚ್ಛತೆಗೆ ಕೈಜೋಡಿಸಬೇಕು ಎಂದು ಡಾ. ಸೋನೆರ ಕರೆ ನೀಡಿದರು. ಹೂಳೆತ್ತಿ ಅಭಿವೃದ್ಧಿಗೊಳಿಸಲಾದ ಎಂ.ಕೆ.ಹುಬ್ಬಳ್ಳಿ ತುಂಬುಕೆರೆ ಸೌಂದರ್ಯಿಕರಣಕ್ಕೆ ಈಗಾಗಲೇ ಅಗತ್ಯ ಯೋಜನೆ ರೂಪಿಸಲಾಗಿದ್ದು, ಶೀಘ್ರದಲ್ಲೇ ಕೆರೆ ಪಕ್ಕದಲ್ಲಿ ಅರಣ್ಯ ಇಲಾಖೆಯಡಿ ಟ್ರೀಪಾರ್ಕ್ ನಿರ್ಮಾಣಗೊಳ್ಳಲಿದೆ ಎಂದರು.