ಮಹಿಳಾ ರಾಜಕೀಯ ಪ್ರಾತಿನಿಧ್ಯಕ್ಕೆ ಅಡ್ಡಿಯಾದ ಕಾಂಗ್ರೆಸ್: ಶಶಿಕಲಾ ಜೊಲ್ಲೆ
ಚಿಕ್ಕೋಡಿ 23 : ದೇಶದ ಮಹಿಳೆಯರ ಪ್ರಗತಿ ಮತ್ತು ಅವರ ರಾಜಕೀಯ ಪ್ರಾತಿನಿಧ್ಯತೆಗೆ ಅಡ್ಡಿಯಾಗಿರುವ ಕಾಂಗ್ರೆಸ್ ಮೈತ್ರಿಕೂಟದ ನಿಲುವು ತೀವ್ರ ಖಂಡನೀಯ ಎಂದು ಮಾಜಿ ಸಚಿವೆ ಹಾಗೂ ಹಾಲಿ ಶಾಸಕಿ ಶಶಿಕಲಾ ಜೊಲ್ಲೆ ಕಿಡಿಕಾರಿದರು.ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಮಹಿಳೆಯರಿಗೆ ಶೇ.33 ರಾಜಕೀಯ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಮಂಡಿಸಿದ್ದ ನಾರಿ ಶಕ್ತಿ ವಂದನಾ ಅಧಿನಿಯಮವನ್ನು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಸೋಲಿಸುವ ಮೂಲಕ ಮಹಿಳೆಯರಿಗೆ ದ್ರೋಹ ಎಸಗಿದೆ ಎಂದು ಆರೋಪಿಸಿದರು.
ಈ ದ್ರೋಹವನ್ನು ದೇಶದ ಜನತೆ, ವಿಶೇಷವಾಗಿ ಮಹಿಳೆಯರು ಎಂದಿಗೂ ಕ್ಷಮಿಸುವುದಿಲ್ಲ. ಮಹಿಳಾ ಸಬಲೀಕರಣದ ಮಹತ್ವಾಕಾಂಕ್ಷೆಯ ಈ ಕಾಯ್ದೆಗೆ ಬಂದಿರುವ ಹಿನ್ನೆಡೆ ತಾತ್ಕಾಲಿಕವಾಗಿದ್ದು, ಮುಂದಿನ ದಿನಗಳಲ್ಲಿ ಮಹಿಳಾ ಶಕ್ತಿ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲಿದೆ ಎಂದು ಹೇಳಿದರು.ಈ ನಾಡಿನಲ್ಲಿ 12ನೇ ಶತಮಾನದಲ್ಲೇ ಅನುಭವ ಮಂಟಪದಲ್ಲಿ ಅಕ್ಕಮಹಾದೇವಿಗೆ ಪ್ರಾತಿನಿಧ್ಯ ನೀಡಿದ ಸಂಸ್ಕೃತಿ ಇದ್ದರೂ, ಇಂದು ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡುವ ವಿಧೇಯಕಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿರುವುದು ಅವರ ಸೋಲಿನ ಭಯವನ್ನು ತೋರಿಸುತ್ತದೆ ಎಂದು ಟೀಕಿಸಿದರು.
ಒಂದು ಕುಟುಂಬ ಕೇಂದ್ರಿತ ರಾಜಕಾರಣ ನಡೆಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಮಹಿಳಾ ನಾಯಕತ್ವದ ಕೊರತೆಯೇ ಇರುವುದರಿಂದಲೇ ಈ ವಿಧೇಯಕವನ್ನು ವಿರೋಧಿಸುತ್ತಿದೆ. ಮಹಿಳೆಯರ ಹಕ್ಕುಗಳ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ಗೆ ಇಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.ಮಹಿಳೆಯರ ರಾಜಕೀಯ ಪ್ರಾತಿನಿಧ್ಯವನ್ನು ವಿರೋಧಿಸಿರುವ ಕಾಂಗ್ರೆಸ್ ಪಕ್ಷವನ್ನು ಮಹಿಳೆಯರು ಮುಂದಿನ ಚುನಾವಣೆಗಳಲ್ಲಿ ತಿರಸ್ಕರಿಸುವುದು ಖಚಿತ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಮಹಿಳೆಯರು ರಾಜಕೀಯವಾಗಿ ಬೆಳೆಯಲು ಅವಕಾಶ ಕಲ್ಪಿಸುವ ಮಸೂದೆಗೆ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಲೋಕಸಭೆಯಲ್ಲಿ ವಿರೋಧವಾಗಿ ಮತ ಚಲಾಯಿಸುವ ಮೂಲಕ ತಮ್ಮ ಮಹಿಳಾ ವಿರೋಧಿ ಧೋರಣೆಯನ್ನು ಬಹಿರಂಗಪಡಿಸಿವೆ ಎಂದು ಕಿಡಿಕಾರಿದರು.ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣ ರಾಜ್ಯಗಳಿಗೆ ಯಾವುದೇ ಅನ್ಯಾಯವಾಗುವುದಿಲ್ಲ. ಕಾಂಗ್ರೆಸ್ ಅಭಿವೃದ್ಧಿ ವಿರೋಧಿ ನಿಲುವು ತಾಳಿದ್ದು, ಅನಾವಶ್ಯಕ ಗೊಂದಲ ಸೃಷ್ಟಿಸುತ್ತಿದೆ ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ತಕ್ಷೆ ಶಾಂಭವಿ ಅಶ್ವಥಪೂರ. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾಶಿವ ಹಳಂಗಳಿ.
ಶಕುಂತಲಾ ಡೋಣವಾಡೆ. ಸಂಜೀವ ಪಾಟೀಲ.ಅಪ್ಪಾಸಾಹೇಬ ಚೌಗಲೆ ಮುಂತಾದವರು ಇದ್ದರು. ಬಾಕ್ಸನಾರಿಶಕ್ತಿ ವಂದಾನ ಕಾಯ್ದೆ ಸೋಲಿನ ಕುರಿತು ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಲಿದೆ. ಏ.25 ರಂದು ಜಿಲ್ಲಾ ವ್ಯಾಪ್ತಿ ಹಾಗೂ ಏ27 ರಂದು ಮಂಡಲ ವ್ಯಾಪ್ತಿಯಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಮಹಿಳಾ ಮೋರ್ಚಾ ಬೃಹತ್ ಪ್ರತಿಭಟನೆ ನಡೆಸಿ ಕಾಂಗ್ರೆಸ್ ಪಕ್ಷದ ಮಹಿಳೆಯರ ವಿರೋಧ ನೀತಿ ಖಂಡಿಸಲಾಗುತ್ತದೆ.