ಸೇವಾ ನಿಷ್ಠೆ ಹಾಗೂ ಸಂಘಟನಾ ಬದ್ಧತೆಗೆ ಸುಭಾಷಚಂದ್ರ ಡೋರಿ ಅವರಿಗೆ ಅಭಿನಂದನೆ
ಮುಂಡಗೋಡ 04 : ಸುದೀರ್ಘ ಸೇವಾವಧಿಯಲ್ಲಿ ಕರ್ತವ್ಯನಿಷ್ಠೆ, ಪ್ರಾಮಾಣಿಕತೆ, ಸರಳತೆ ಹಾಗೂ ಸಂಘಟನಾ ಬದ್ಧತೆಯಿಂದ ಶಿಕ್ಷಕರು ಮತ್ತು ಸರ್ಕಾರಿ ನೌಕರರ ಹಿತಕ್ಕಾಗಿ ಕಾರ್ಯನಿರ್ವಹಿಸಿದ ಸುಭಾಷಚಂದ್ರ ಆರ್. ಡೋರಿ ಅವರ ಸೇವೆ ಮಾದರಿಯಾಗಿದೆ ಎಂದು ಗಣ್ಯರು ಅಭಿಪ್ರಾಯಪಟ್ಟರು. ಮುಂಡಗೋಡದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ವಿವಿಧ ಇಲಾಖೆಗಳ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಅಭಿನಂದನೋತ್ಸವ ಕಾರ್ಯಕ್ರಮದಲ್ಲಿ ತಹಸೀಲ್ದಾರ ಎಸ್.ಎ. ಪ್ರಸಾದ ಅವರು ಉದ್ಘಾಟಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸುಮಾ ಜಿ. ಅವರು ಸುಭಾಷಚಂದ್ರ ಡೋರಿ ಅವರ ಸೇವಾ ಬದುಕನ್ನು ಒಳಗೊಂಡ ‘ಸ್ಮರಣಾಂಜಲಿ’ ನೆನಪಿನ ಬುತ್ತಿ ಕೃತಿಯನ್ನು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಟಿ.ವೈ. ದಾಸನಕೊಪ್ಪ, ವಸಂತ ಎಸ್. ಕೊಣಸಾಲಿ, ಎಸ್.ಡಿ. ಮುಡೆಣ್ಣವರ, ಸತೀಶ ನಾಯಕ ಸೇರಿದಂತೆ ಗಣ್ಯರು, ಡೋರಿ ಅವರ ಸೇವಾ ಮನೋಭಾವ, ಸಹೋದ್ಯೋಗಿಗಳೊಂದಿಗಿನ ಆತ್ಮೀಯತೆ ಹಾಗೂ ಸಂಘಟನಾ ಕ್ಷೇತ್ರದಲ್ಲಿನ ಕೊಡುಗೆಯನ್ನು ಶ್ಲಾಘಿಸಿದರು. ಅಭಿನಂದನೆ ಸ್ವೀಕರಿಸಿದ ಸುಭಾಷಚಂದ್ರ ಆರ್. ಡೋರಿ ಅವರು, ತಮ್ಮ ಸೇವಾ ಅವಧಿಯಲ್ಲಿ ಸಹಕಾರ ನೀಡಿದ ಅಧಿಕಾರಿಗಳು, ಸಹೋದ್ಯೋಗಿಗಳು, ಸ್ನೇಹಿತರು ಹಾಗೂ ಸಂಘಟನೆಗಳಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೃಷ್ಣ ಕುಳೂರು, ಎಸ್.ಸಿ. ಬಸನಗೌಡ, ಫಕ್ಕೀರೇಶ ವರ್ದಿ, ಗಣೇಶ ಗಬ್ಬೂರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು, ನೌಕರರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.