ಮಹಲಿಂಗಪುರ

ವಿಶ್ವಪ್ರೇಮ ಮೆರೆಸುವುದು, ಬೆಳೆಸುವುದು ಸುತಾರ್ ಜಿ ಅವರ ಜೀವನದ ಗುರಿಯಾಗಿತ್ತು. !

ವಿಶ್ವಪ್ರೇಮ ಮೆರೆಸುವುದು, ಬೆಳೆಸುವುದು ಸುತಾರ್ ಜಿ ಅವರ ಜೀವನದ ಗುರಿಯಾಗಿತ್ತು. !

ಹೊರದೇಶಗಳಲ್ಲಿರುವ ಅನಿವಾಸಿ ಭಾರತೀಯರಿಂದ ಸಂತಾಪ ಕರೆಗಳು. 

ಮಹಾಲಿಂಗಪುರ 07: ಜೀವನದುದ್ದಕ್ಕೂ ಭಾವೈಕ್ಯತೆಯ ಸಂದೇಶವನ್ನು ಸಾರುತ್ತ ವಿಶ್ವ ಪ್ರೇಮವನ್ನು ಮೆರೆಸುವುದು, ಬೆಳೆಸುವುದು ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ ಅವರ ಜೀವನದ ಗುರಿಯಾಗಿತ್ತು ಎನ್ನುವುದಕ್ಕೆ ಅವರ ಮನೆಯಲ್ಲಿ ನೇತುಹಾಕಿದ ಹಿಂದೂ ಹಾಗೂ ಮುಸ್ಲಿಂ ಸಮಾಜದ ಶ್ಲೋಕಗಳು, ಅಧ್ಯಯನಕ್ಕಾಗಿ ಕೂಡಿಟ್ಟ ಅನೇಕ ಧರ್ಮಗ್ರಂಥಗಳು ಒತ್ತಿ ಹೇಳುತ್ತವೆ ಎನ್ನುವುದಕ್ಕೆ ಜೀವಂತ ಸಾಕ್ಷಿಯಾಗಿ ಇತಿಹಾಸವನ್ನು ಸಾರುತ್ತಿವೆ. 

ತಮ್ಮ ಪ್ರವಚನಗಳಲ್ಲಿ ಆಡಿದಂತೆ ನುಡಿದವರು, ನುಡಿದಂತೆ ನಡೆದವರು, ನಾಡಿನ ಎಲ್ಲ ಮಹಾಸ್ವಾಮಿಗಳ, ಮೌಲ್ವಿಗಳ, ಅಧ್ಯಾತ್ಮದ ಹಸಿವೆ ಉಳ್ಳವರ ಜೊತೆಗೆ ಅನ್ಯೋನ್ಯ ಸಂಬಂಧಗಳನ್ನು ಮುಂದುವರಿಸಿಕೊಂಡು ಬಂದವರು. ಅವರ ಆಚಾರ ವಿಚಾರಗಳನ್ನು ತಮ್ಮ ಜೀವನದಲ್ಲಿಯೂ ಅಳವಡಿಸಿಕೊಂಡು ಮಾದರಿ ಜೀವನ ಸಾಗಿಸಿದವರು.  

ಅವರಿಗೆ ಎಷ್ಟೊಂದು ಭಾವೈಕ್ಯತೆಯ ಹುಚ್ಚು ಇತ್ತು ಎಂದರೆ ಸ್ವತಃ ಅವರ ನಿವಾಸಕ್ಕೆ ಭಾವೈಕ್ಯ ನಿಲಯ ಎಂದೇ ಬರೆಯಿಸಿದ್ದಾರೆ. ಅವರು ಒಂದೇ ಸಮುದಾಯಕ್ಕೆ ಅಂಟಿಕೊಂಡವರಲ್ಲ ಮತ್ತು ಆಭಾಸವಾಗದೇ ಇರಲಿ ಎಂದು ನಿಧನಾನಂತರ ಅವರ ಸಮಾಧಿ ಸ್ವಂತ ಜಾಗೆಯಲ್ಲಾಗಬೇಕೆಂದು ಅವರೇ 1.5ಎಕರೆ ಭೂಮಿಯನ್ನು ಖರೀದಿಸಿದ್ದರು. ಅವರ ಆಸೆಯಂತೆಯೇ ಅವರ ಸಮಾಧಿ ಕೂಡ ಅದೇ ಜಾಗದಲ್ಲಿ ಮಾಡಲಾಗಿದ್ದು, ದರ್ಶನಕ್ಕೆ ಎಲ್ಲ ಸಮುದಾಯಗಳಿಗೂ ಅವಕಾಶವಿದೆ. 

ಸುತಾಜಿಯವರ ಭಾವೈಕ್ಯ ನಿಲಯದಲ್ಲಿ ಇಸ್ಲಾಂ ಧರ್ಮದ ಕುರಾನ್, ಬಸವಣ್ಣ ಹಾಗೂ ಶರಣರ ವಚನಗಳ ಭಾಂಡಾರ, ಹಿಂದೂ ಧರ್ಮದ ಭಗವದ್ಗೀತೆ, ರಾಮಾಯಣ ಮತ್ತು ಮಹಾಭಾರತ, ಸಿದ್ಧಾರೂಢರ ತತ್ವಾಮೃತಗಳು, ನಿಜಗುಣ ಶಿವಯೋಗಿಗಳ ಸರ್ವ ಗ್ರಂಥ ಗಳು ಇನ್ನೂ ಸಾವಿರಾರು ಗ್ರಂಥಗಳನ್ನು ಕ್ರೋಢೀಕರಿಸಿ ಅಧ್ಯಯನ ಮಾಡುತ್ತಿದ್ದರು. ಇದರ ಫಲವಾಗಿಯೇ ನಾಡಿನಾದ್ಯಂತ ಉತ್ತಮ ಪ್ರವಚನಕಾರರು ಹಾಗೂ ಸಂವಾದಕರೆಂದು ಖ್ಯಾತಿ ಪಡೆದು ದೇಶದ ರಾಷ್ಟ್ರಪತಿ ರಾಮನಾಥ ಕೋವಿಂದ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಗಮನಸೆಳೆದು ಪದ್ಮಶ್ರೀ ಪ್ರಶಸ್ತಿ ಗಿಟ್ಟಿಸಿದರು. 1995ರಲ್ಲಿ ಅಂದಿನ ಮುಖ್ಯಮಂತ್ರಿ ಎಚ್‌. ಡಿ. ದೇವೇಗೌಡ ಅವರಿಂದಲೂ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದನ್ನು ನಾವಿಲ್ಲಿ ಗಮನಿಸಿದರೆ ಮೂರು ದಶಕಗಳ ಹಿಂದೆಯೇ ಅಧ್ಯಾತ್ಮದ ಉತ್ತುಂಗಕ್ಕೆ ಏರಿದ್ದರು ಎನ್ನುವುದು ಸಾಬೀತಾಗುತ್ತದೆ. ಒಟ್ಟಾರೆ ಆರು ದಶಕಗಳ ಅವರ ಅಧ್ಯಾತ್ಮದ ಶ್ರಮ ನಾಡಿನ ಜನತೆಗೆ ವರದಾನವಾಗಿ ಪರಿಣಮಿಸಿದೆ. 

ಪವಿತ್ರ ಕುರಾಣಗಳಲ್ಲಿಯ ಚರಣಗಳನ್ನು ಹಾಗೂ ಮಹಾತ್ಮರ (ಸಾಹಬಿಗಳ) ನುಡಿಗಟ್ಟುಗಳನ್ನು ಮತ್ತು ಹಿಂದೂ ಧರ್ಮೀಯರ ಬಗ್ಗೆಯೂ ಆಳವಾಗಿ ಅಧ್ಯಯನ ಮಾಡಿ ಮಹಾಸ್ವಾಮಿಗಳ, ಪಂಡಿತರೋತ್ತಮರ ಜೊತೆ ಚರ್ಚಿಸಿ ಅವುಗಳನ್ನು ಸರ್ವ ಧರ್ಮೀಯರಲ್ಲಿ ಹಂಚಿಕೊಂಡು ಧಮಾಂರ್ಧರಿಗೆ ಭಾವೈಕ್ಯತೆಯ ದಾರಿ ಮಾಡಿಕೊಟ್ಟು ಇದರಲ್ಲಿಯೇ ಮೋಕ್ಷ ಹಾಗೂ ಮುಕ್ತಿ ಇದೆ ಎಂದು ತೋರಿಸಿಕೊಟ್ಟ ಮಹಾತ್ಮ ಇವರು. ಎರಡು ಸಮಾಜಗಳಿಗೆ ಇವರಿಲ್ಲ ಎನ್ನುವುದೇ ಅರಗಿಸಿಕೊಳ್ಳಲಾಗದ ಸಂಗತಿಯಾಗಿದೆ. 

ಹೊರ ದೇಶಗಳಿಂದ ಸಂತಾಪ : ಹೊರದೇಶಗಳಲ್ಲಿರುವ ಅನಿವಾಸಿ ಭಾರತೀಯ ಪ್ರಜೆಗಳಾದ ಇಂಗ್ಲೆಂಡ್ ನಲ್ಲಿರುವ ವೈದ್ಯ ಅಭಿಲಾಶ್, ಬ್ರೆಜಿಲ್ ನಲ್ಲಿರುವ ರಂಗನಾಥ ದೇಸಾಯಿ, ದುಬೈನಲ್ಲಿರುವ ಚಂದ್ರಶೇಖರ್ ಲಿಂಗದಹಳ್ಳಿ ಅವರು ಸುತಾರಜೀ ಅವರ ಪುತ್ರ ಹುಮಾಯೂನ್ ಅವರಿಗೆ ಕರೆ ಮಾಡಿ ಕನ್ನಡದ ಕಬೀರ ಇಬ್ರಾಹಿಂ ಸುತಾರ ಅವರ ನಿಧನಕ್ಕೆ ದಿಗ್ಬ್ರಮೆ ವ್ಯಕ್ತಪಡಿಸಿ ಅವರ ಅಂತಿಮ ದರ್ಶನ ಪಡೆಯಲಾಗದೆ ನಾವು ನತದೃಷ್ಟರಾಗಿದ್ದೇವೆ ಎಂಬ ಕೊರಗನ್ನು ವ್ಯಕ್ತಪಡಿಸಿದ್ದಾರೆ.  

ಈಡೇರದಲಾಗದ ಆಸೆಗಳು : ಅವರಲ್ಲಿ ಕೆಲ ಕೊರಗುಗಳಿದ್ದವು ಸರ್ವಧರ್ಮ ಪೀಠ ಸ್ಥಾಪನೆಯಾಗಬೇಕು, ಒಂದು ಒಳ್ಳೆಯ ಶಿಕ್ಷಣ ಸಂಸ್ಥೆ, ಸರ್ವಧರ್ಮಗಳ ಗ್ರಂಥಗಳನ್ನು ಕ್ರೋಡೀಕರಣ ಮಾಡಿ ಅಧ್ಯಯನದ ಸಾರವನ್ನು ಪ್ರತಿಯೊಬ್ಬರಿಗೂ ತಿಳಿಸಲು ಗ್ರಂಥಾಲಯ ಮತ್ತು ಪ್ರತಿವರ್ಷವೂ ಸರ್ವಧರ್ಮಗಳ ಗ್ರಂಥಗಳ ಆಧಾರಿತ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿತ್ತು. ಇದರಿಂದ ಅವರಲ್ಲಿರುವ ಸಾಮಾಜಿಕ ಕಳಕಳಿ ಸ್ಪಷ್ಟವಾಗುತ್ತದೆ. 

ಅವರು 2019ರಲ್ಲಿ ಭಾವೈಕ್ಯ ಶಾಂತಿ ಸಂದೇಶ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಪ್ರತಿವರ್ಷ ಅದರಡಿಯಲ್ಲಿ ಸಾಮರಸ್ಯ ಗೋಷ್ಠಿ ನಡೆಸುವುದು ಮತ್ತು ಸಾಮರಸ್ಯ ಜೀವನಕ್ಕೆ ಮತ್ತು ಸಮಾಜಕ್ಕೆ ಮಾದರಿಯಾದ ವ್ಯಕ್ತಿಗಳಿಗೆ ಭಾವೈಕ್ಯ ಶ್ರೀ ಪ್ರಶಸ್ತಿ ನೀಡುವುದಾಗಿತ್ತು. ಎರಡು ವರ್ಷಗಳ ಕೋರೋನಾ ಹಾವಳಿಯಿಂದ ಅದರಡಿಯಲ್ಲಿ ಕಾರ್ಯಕ್ರಮಗಳು ಜರುಗಲಿಲ್ಲ ಇದು ವಿಪರ್ಯಾಸದ ಸಂಗತಿಯಾಗಿದೆ.ಇವುಗಳು ಅವರ ಈಡೇರದ ಆಸೆಯಾಗಿರಬಹುದು ಆದರೆ ಪ್ರತಿಯೊಬ್ಬರಲ್ಲಿಯೂ ಇದರ ಬಗ್ಗೆ ಜಿಜ್ಞಾಸೆಯನ್ನು ಮೂಡಿಸಿ ಹೋಗಿದ್ದಾರೆ.  



ಸುದ್ದಿ ಓದಿ