ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಪುರುಷ ಬಂದಿಗಳಿಗೆ ಹೊಲಿಗೆ ತರಬೇತಿ ಸಮಾರೋಪ: ಪ್ರಮಾಣಪತ್ರ ವಿತರಣೆ
ಬಳ್ಳಾರಿ,ಅ.16 : ಇಲ್ಲಿನ ಕೇಂದ್ರ ಕಾರಾಗೃಹ ಆವರಣದಲ್ಲಿ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ಸಹಯೋಗದೊಂದಿಗೆ ಪುರುಷ ಬಂದಿಗಳಿಗೆ ಆಯೋಜಿಸಲಾಗಿದ್ದ 30 ದಿನಗಳ ಉಚಿತ ಟೈಲರಿಂಗ್ (ಹೊಲಿಗೆ) ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವು ಗುರುವಾರ ನೆರವೇರಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕೆನರಾ ಬ್ಯಾಂಕ್ನ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾಪ್ರಬಂಧಕ ಅರುಣ್ ಕುಮಾರ್ ಅವರು, ಶಿಬಿರಾರ್ಥಿಗಳು ಅತ್ಯಂತ ಆಸಕ್ತಿಯಿಂದ ತರಬೇತಿ ಪಡೆದು ಕೇವಲ ಒಂದು ತಿಂಗಳ ಅವಧಿಯಲ್ಲಿ ಜೀನ್ಸ್ ಪ್ಯಾಂಟ್ ಹೊಲೆಯುವುದನ್ನು ಕಲಿತಿರುವುದು ಶ್ಲಾಘನೀಯ. ಮಾನವ ಸಂಪನ್ಮೂಲವು ವ್ಯರ್ಥವಾಗದೆ, ಸಮಾಜದ ಮುಖ್ಯವಾಹಿನಿಗೆ ಬಂದ ನಂತರ ಈ ಕೌಶಲ್ಯವನ್ನು ಜೀವನ ನಿರ್ವಹಣೆಗೆ ಅಳವಡಿಸಿಕೊಂಡು ಆರ್ಥಿಕವಾಗಿ ಸಬಲರಾಗಲು ಈ ತರಬೇತಿ ನೆರವಾಗಲಿದೆ ಎಂದು ತಿಳಿಸಿದರು.ಬಳ್ಳಾರಿ ಕೇಂದ್ರ ಕಾರಾಗೃಹದ ಅಧೀಕ್ಷಕ ವಿ. ಕೃಷ್ಣಮೂರ್ತಿ ಅವರು ಮಾತನಾಡಿ, ಬಂದಿಗಳಿಗೆ ಇಂತಹ ಸ್ವ-ಉದ್ಯೋಗ ತರಬೇತಿಗಳನ್ನು ನೀಡುವುದರಿಂದ ಕಾರಾಗೃಹದಲ್ಲಿ ಜೀನ್ಸ್ ಗಾಮೆಂರ್ಟ್ ಘಟಕವನ್ನು ಪ್ರಾರಂಭಿಸಿ ಉದ್ಯೋಗ ಕಲ್ಪಿಸಲು ಸಹಕಾರಿಯಾಗುತ್ತದೆ. ಅಲ್ಲದೆ, ಬಿಡುಗಡೆಯ ನಂತರ ಸ್ವಂತ ಉದ್ಯೋಗ ಮಾಡಿಕೊಂಡು ಗೌರವಯುತ ಹಾಗೂ ಸ್ವಾಭಿಮಾನದ ಜೀವನ ನಡೆಸಲು ಇದು ದಾರೀದೀಪವಾಗಲಿದೆ ಎಂದರು. ಜೊತೆಗೆ, ಇಂತಹ ಉಪಯುಕ್ತ ತರಬೇತಿ ನೀಡಿದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.