ಲೇಖನಗಳು

ಸ್ಪರ್ಧೆ: ಜೀವನದ ಒಂದು ಹೊಸ ನಿಯಮ

ಸ್ಪರ್ಧೆ: ಜೀವನದ ಒಂದು ಹೊಸ ನಿಯಮ

ಚಾರ್ಲ್ಸ ಡಾರ್ವಿನರವರ ‘ಅಸ್ತಿತ್ವಕ್ಕಾಗಿ ಹೋರಾಟ’ ಹಾಗೂ ‘ನೈಸರ್ಗಿಕ ಆಯ್ಕೆ’ ಎಂಬ ಸಿದ್ಧಾಂತಗಳನ್ನು ಓದುವಾಗ ಇದು ಕೇವಲ ಜೀವಸಂಕುಲದ ಜೀವಜಂತುಗಳಿಗೆ ಅನ್ವಯವಾಗುತ್ತದೆಂದು ಅನಿಸುತಿತ್ತು. ಆದರೆ, ಈ ಒಂದು ಸಿದ್ಧಾಂತವು ಮನುಸಂಕುಲಕ್ಕೆ ಪ್ರತಿ ಹಂತದಲ್ಲೂ ಅನ್ವಯವಾಗುತ್ತದೆ. ಹುಟ್ಟಿನಿಂದ ಹಿಡಿದು ಸತ್ತ ಮೇಲೆ ಹೂಳುವ ಭೂಮಿಗಾಗಿಯೂ ಇಂದಿನ ಜಾಯಮಾನದಲ್ಲಿ ನಾವು ಕಾಣುತ್ತೇವೆ.    

ಸ್ಪರ್ಧೆ ಅನ್ನುವುದು ಉಗಮವಾಗುವುದು ಕಡಿಮೆ ಸಂಪನ್ಮೂಲಗಳಿಗೆ ಜಾಸ್ತಿ ಬೇಡಿಕೆಯಿದ್ದಾಗ. ಭಾರತವು ಸ್ವತಂತ್ರಗೊಂಡಾಗ 33 ಕೋಟಿ ಜನಸಂಖ್ಯೆಯಿತ್ತು. ಈಗ ಅದರ ನಾಲ್ಕು ಪಟ್ಟಾಗಿದೆ. ಆದರೆ, ನಮಗಿರುವ ಮುಖ್ಯ ಸಂಪನ್ಮೂಲಗಳಾದ ಊಳುವ ಭೂಮಿಯು ಕ್ಷೀಣಗೊಳ್ಳುತ್ತಿದೆ. ಆದ್ದರಿಂದ, ಆಹಾರಕ್ಕಾಗಿ ಹಾಹಾಕಾರವನ್ನು ನೋಡುತ್ತೇವೆ. ಇದನ್ನು ನೀಗಿಸಲು ನಾವು ಹೈಬ್ರಿಡ್ ತಳಿಗಳನ್ನು ಬಳಸಿ ಹೆಚ್ಚು ಇಳುವರಿ ಪಡೆಯುತ್ತಿದ್ದೇವೆ. ಆದರೆ ನಮ್ಮ ಮಣ್ಣಿನ ಲವಣಾಂಶಗಳು ನಿಯಮಿತ ಪ್ರಮಾಣದಲ್ಲಿರುವುದರಿಂದ ನಮಗೆ ಹೆಚ್ಚು ಇಳುವರಿಯಲ್ಲಿ ಸಿಗುವ ಪೌಷ್ಟಿಕಾಂಶಗಳು ನಿಯಮಿತವಾಗಿರುತ್ತವೆ. ಈ ರೀತಿಯಾಗಿ ಸ್ಪರ್ಧೆ ಎನ್ನುವುದು ನಮ್ಮ ಆರೋಗ್ಯದ ಮೇಲೆ ನೇರ ಪ್ರಭಾವವನ್ನು ಬೀರುತ್ತದೆ.   

ಅದೇ ರೀತಿಯಾಗಿ ಮಕ್ಕಳ ಬೆಳವಣಿಗೆಯ ಹಂತದಲ್ಲಿ ನೋಡಿದರೆ ಶಿಕ್ಷಣ ಮತ್ತು ಆರೋಗ್ಯವು ಮೂಲ ಅಂಶಗಳಾಗಿರುತ್ತವೆ. ಈ ನಿಟ್ಟಿನಲ್ಲಿ ಒಳ್ಳೆಯ ಶಾಲೆಗಳು ಕಡಿಮೆ ಪ್ರಮಾಣದಲ್ಲಿರುವುದರಿಂದ ಎಲ್ಲ ಮಕ್ಕಳಿಗೂ ಒಳ್ಳೆಯ ಶಿಕ್ಷಣವು ಸಿಗುವುದಿಲ್ಲ. ಒಂದು ವೇಳೆ ಸಿಗುವುದಾದಲ್ಲಿ ಅದಕ್ಕೆ ತಕ್ಕನಾದ ಬೆಲೆಯನ್ನು ತೆರಬೇಕು. ಒಳ್ಳೆಯ ಶಿಕ್ಷಣ ಪಡೆಯದೇ ಹೋದ ಮಕ್ಕಳೆಲ್ಲರೂ ಈ ಸ್ಪರ್ಧಾ ಜಗತ್ತಿನ ಮೊದಲ ಓಟದಲ್ಲಿಯೇ ಹಿಂದುಳಿಯುತ್ತಾರೆ. ಒಂದಿಲ್ಲ ಒಂದು ರೀತಿಯಲ್ಲಿ ಅವರು ಸಕ್ಷಮರಾಗದೇ ತಮ್ಮ ಅವಶ್ಯಕತೆಗಳನ್ನು ನೀಗಿಸದೇ ನಿರಾಶರಾಗುತ್ತಾರೆ.   

ಇನ್ನು ಉದ್ಯೋಗ ವಲಯಕ್ಕೆ ಬಂದಾಗ ಸರಕಾರವು ಕೇವಲ 8ಅ ಉದ್ಯೋಗವನ್ನು ನೀಡುತ್ತದೆ. ಆದರೆ ಕೆಲಸವು ಖಾಯಂ ಇರುವುದರಿಂದ ಬಹಳಷ್ಟು ಉದ್ಯೋಗಾಕಾಂಕ್ಷಿಗಳು ಬೇರೆ ಕ್ಷೇತ್ರಗಳ ಖಾಸಗಿ ನೌಕರಿಗಳನ್ನು ಬಯಸುವುದಿಲ್ಲ. ವರ್ತಮಾನದಲ್ಲಿ ಒಂದು ಸರಕಾರಿ ನೌಕರಿಗೆ 1000-5000 ಅರ್ಜಿಗಳು ಬಂದಿರುತ್ತವೆ. ಅರ್ಜಿದಾರರು ಆ ಕೆಲಸದ ಅರ್ಹತೆಗೂ ಮೀರಿದ ಅರ್ಹತೆ ಹೊಂದಿರುತ್ತಾರೆ. ಆದರೂ ಕೂಡ ಜೀವನೋಪಾಯಕ್ಕಾಗಿ ಆ ಕೆಲಸಗಳನ್ನು ಆಯ್ದುಕೊಳ್ಳುತ್ತಾರೆ. ಇನ್ನು ಕಡಿಮೆ ಅರ್ಹತೆವುಳ್ಳವರು ಬೇರೆ ಕೆಲಸಗಳಿಗಾಗಿ ಪರದಾಡುತ್ತಾರೆ. ಐ.ಎ.ಎಸ್‌. ಪರೀಕ್ಷೆ ಹಿಡಿದು ಗುಮಾಸ್ತನ ಪರಿಕ್ಷೆಯವರೆಗೂ ಈ ಪರಿಸ್ಥಿತಿಯನ್ನು ನಾವು ನೋಡುತ್ತೇವೆ. ಆದ್ದರಿಂದ ಕೆಲವು ಅಭ್ಯರ್ಥಿಗಳು ವಾಮಮಾರ್ಗವನ್ನು ಹಿಡಿದು ಅರ್ಹ ಅಭ್ಯರ್ಥಿಗಳನ್ನು ಹೊರಗಿಡಿಸಿ ಆ ಹುದ್ದೆಯನ್ನು ತಮ್ಮದಾಗಿಸಿಕೊಳ್ಳುವುದನ್ನು ನಾವು ನೋಡಿದ್ದೇವೆ.   

ಉದ್ಯೋಗ ಸಿಗದ ಜನ ವ್ಯಾಪಾರವನ್ನು ಆರಂಭಿಸಲು ಹೊರಟರೆ ಮೊದಲಿನ ರೀತಿ ಯಶಸ್ಸನ್ನು ಕಾಣುವುದು ಕಷ್ಟ. 30 ವರ್ಷಗಳ ಹಿಂದಿನ ಕಾಲವನ್ನು ನೋಡಿದಾಗ, ಕೇವಲ ಜ್ಞಾನ ಹಾಗೂ ಹೊಸ ವಿಚಾರಗಳು ಇದ್ದಾರೆ ಉತ್ತಮ ಗುಣಮಟ್ಟದ ಸರಕು ಅಥವಾ ಸೇವೆಯನ್ನು ನೀಡುವ ಸಂಸ್ಥೆಗಳು ಕೆಲವೇ ವರ್ಷಗಳಲ್ಲಿ ಹಲವಾರು ಜನರಿಗೆ ಉದ್ಯೋಗಾವಕಾಶ ನೀಡಿ ಅವರ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಸಹಾಯಕಾರಿಯಗುತ್ತಿದ್ದವು. ಆದರೆ, ಈಗಿನ ಸಂದರ್ಭದಲ್ಲಿ ಜ್ಞಾನ ಮತ್ತು ಹೊಸ ವಿಚಾರದ ಜೊತೆಗೆ ನಾವು ಆ ಉದ್ಯಮದಲ್ಲಿ ಹೂಡುವ ಬಂಡವಾಳ ಹಾಗೂ ಮಾಡುವ ಮಾರ್ಕೆಟಿಂಗ್ ಅಷ್ಟೇ ಪ್ರಭಾವ ಬೀರುತ್ತದೆ. ಆದ್ದರಿಂದ ನಗರ ಮತ್ತು ಮಹಾನಗರಗಳಲ್ಲಿ ಸರಾಸರಿ ಆರು ತಿಂಗಳಿಗೊಮ್ಮೆ ಒಂದೇ ಜಾಗದಲ್ಲಿ ಬೇರೆ ಬೇರೆ ಮಳಿಗೆಗಳು ಕಾಣಸಿಗುತ್ತವೆ. ಬಂಡವಾಳ ಮತ್ತು ಮಾರ್ಕೆಟಿಂಗ್ ಅನ್ನುವ ಆಟದಲ್ಲಿ ಸದಾ ದುಡ್ಡುಳ್ಳವರೇ ಗೆಲ್ಲುತ್ತಾರೆ. ಹಾಗಾಗಿ ಬಹುರಾಷ್ಟ್ರೀಯ, ವಿದೇಶಿ ಹಣವನ್ನು ಬಳಸುವ ಹಾಗೂ ಕಪ್ಪು ಹಣವನ್ನು ಬಿಳಿಹಣವನ್ನಾಗಿ ಮಾಡುವ ಕಂಪನಿಗಳೆಂಬ ತಿಮಿಂಗಲುಗಳು ಸಣ್ಣ ಸಣ್ಣ ಉದ್ಯಮಗಳನ್ನು ಗುಳುಂ ಮಾಡುತ್ತವೆ. ಸಣ್ಣ ಸಣ್ಣ ಉದ್ಯಮಗಳ ಮಾಲೀಕರು ದೊಡ್ಡ ದೊಡ್ಡ ಕಂಪನಿಗಳ ಗುಲಾಮರಾಗಿ ದುಡಿಯಬೇಕಾಗುತ್ತದೆ.   

ಹಾಗಾದರೆ, ಇದಕ್ಕೆ ಉಪಾಯವೇನು? ಮೊದಲಿಗೆ, ಜನಸಂಖ್ಯೆಯ ಮೇಲೆ ಕಡಿವಾಣವನ್ನು ಹಾಕಬೇಕು. ಈ ನಿಟ್ಟಿನಲ್ಲಿ ಈಗಿನ ದಂಪತಿಗಳು ಒಂದೇ ಮಗುವಿಗೆ ಸಂತಾನವನ್ನು ನಿಲ್ಲಿಸುವ ಕ್ರಮವನ್ನು ಅನುಸರಿಸುವುದನ್ನು ಕಾಣಬಹುದು. ಇದೇ ರೀತಿಯಾಗಿ ಸಾಗಿದರೆ, 2035-40 ರ ವೇಳೆಗೆ ನಾವು ಇದರ ಆರ್ಥಿಕ ಲಾಭವನ್ನು ಕಾಣಬಹುದು. ಆದರೆ, ಭಾರತದ ಜನಸಂಖ್ಯೆಯನ್ನು ಕೇವಲ ಗ್ರಾಹಕರಂತೆ ನೋಡುವ ದೃಷ್ಟಿ ಬದಲಾಗಬೇಕು. ಎರಡನೆಯದಾಗಿ, ನಾವು ಬಂಡವಾಳಶಾಹಿಯನ್ನು ಬಿಗಿದಪ್ಪಿಕೊಳ್ಳದೆ ಸಮಾಜವಾದಿ ತತ್ವಗಳನ್ನು ಬೇಕಾದಷ್ಟು ಅಳವಡಿಸಿ, ಸ್ಪರ್ಧಾಘಾತುಕ ರೂಢಿಗಳನ್ನು ನಿಯಂತ್ರಿಸಬೇಕು. ಕೊನೆಯದಾಗಿ, ಪ್ರತಿಯೊಬ್ಬ ಪ್ರಜೆಯಲ್ಲಿಯೂ ‘ನಾವೂ ಬದುಕೋಣ, ಇತರರನ್ನೂ ಬದುಕಲು ಬಿಡೋಣ’ ಎಂಬ ಮನೋಭಾವನೆಯನ್ನು ಬಿತ್ತಬೇಕು. ‘ಸರ್ವೇ ಜನ: ಸುಖಿನೋ ಭವಂತು:’ ಎಂಬ ಮಂತ್ರವನ್ನು ಜಪಿಸುತ್ತ ಈ ಕಲಿಯುಗದ ಅತಿ ಕಠಿಣ ಕಾಲವನ್ನು ಸವೆಸಬೇಕು.  

- ಮೃತ್ಯುಂಜಯ ಶಿ. ನಾವಲಗಟ್ಟಿ  

ಬೆಳಗಾವಿ 

- * * * - 


   


ಸುದ್ದಿ ಓದಿ