ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ಗೆ ಧ್ವನಿ ಎತ್ತಿದ ಜನರ ಆಶಯಕ್ಕೆ ಬದ್ಧ: ಶಾಸಕ ಜೆ.ಎನ್. ಗಣೇಶ್
ಲೋಕದರ್ಶನ ವರದಿ
ಕಂಪ್ಲಿ, ಆ. 6: ಪಕ್ಷದಲ್ಲಿ ಶಿಸ್ತು ಅತ್ಯಂತ ಮುಖ್ಯವಾಗಿದ್ದು, ಕಂಪ್ಲಿ ಕ್ಷೇತ್ರದ ಜನರು ಕಂಪ್ಲಿಯಿಂದ ಹೈಕಮಾಂಡ್ವರೆಗೆ ಸಚಿವ ಸ್ಥಾನ ನೀಡುವಂತೆ ಧ್ವನಿ ಎತ್ತುವ ಮೂಲಕ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ನೀಡಿದರೆ ಅದನ್ನು ಸ್ವೀಕರಿಸುತ್ತೇನೆ ಎಂದು ಶಾಸಕ ಜೆ.ಎನ್. ಗಣೇಶ್ ಹೇಳಿದ್ದಾರೆ.
ಪಟ್ಟಣದ ಹೊಸಪೇಟೆ ಬೈಪಾಸ್ ರಸ್ತೆಯಲ್ಲಿರುವ ಶಾಸಕರ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಪಕ್ಷ ನೀಡುವ ಪ್ರತಿಯೊಂದು ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ಪಕ್ಷದ ನಿರ್ಧಾರಕ್ಕೆ ಸದಾ ಬದ್ಧನಾಗಿರುತ್ತೇನೆ" ಎಂದರು.
ಬಳ್ಳಾರಿ, ವಿಜಯನಗರ, ಕೊಪ್ಪಳ ಹಾಗೂ ರಾಯಚೂರು ಸೇರಿದಂತೆ ಕರ್ನಾಟಕ, ಆಂಧ್ರ್ರದೇಶ ಮತ್ತು ತೆಲಂಗಾಣ ರಾಜ್ಯಗಳ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಪ್ರಸ್ತುತ 64 ಟಿಎಂಸಿ ನೀರು ಸಂಗ್ರಹವಾಗಿರುವುದು ಸಂತಸದ ವಿಷಯವಾಗಿದೆ ಎಂದು ಹೇಳಿದರು.
"ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಆದಷ್ಟು ಬೇಗ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಕರೆಯಬೇಕು. ರೈತರು ಬೆಳೆ ಬೆಳೆಯಲು ಅಗತ್ಯ ನೀರು ಒದಗಿಸುವ ಕುರಿತು ಕ್ರಮ ಕೈಗೊಳ್ಳಬೇಕು" ಎಂದು ಅವರು ಒತ್ತಾಯಿಸಿದರು.
ಈಗಾಗಲೇ ರೈತರು ಹಾಕಿರುವ ಸಸಿ ಮಡಿಗಳು ಒಣಗುತ್ತಿದ್ದು, ಇದರಿಂದ ಸಂಕಷ್ಟ ಎದುರಾಗಿದೆ. ಆದ್ದರಿಂದ ಸರ್ಕಾರ ಹಾಗೂ ನೀರಾವರಿ ಸಲಹಾ ಸಮಿತಿಯು ಜಲಾಶಯದ ಮುನಿರಾಬಾದ್ನಲ್ಲಿ ಶೀಘ್ರ ಸಭೆ ನಡೆಸಿ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಆಗ ಮಾತ್ರ ಈ ಭಾಗದ ರೈತರ ಸಂಕಷ್ಟ ನಿವಾರಿಸಲು ಸಾಧ್ಯವಾಗುತ್ತದೆ ಎಂದು ಶಾಸಕ ಜೆ.ಎನ್. ಗಣೇಶ್ ಹೇಳಿದರು.