ಮಹಲಿಂಗಪುರ

ಅಭಿವೃದ್ಧಿಯ ಕೆಲಸದಲ್ಲಿ ಪುರಸಭೆಗೆ ಸಹಕರಿಸಿ: ಜಮಾದಾರ

ಅಭಿವೃದ್ಧಿಯ ಕೆಲಸದಲ್ಲಿ ಪುರಸಭೆಗೆ ಸಹಕರಿಸಿ: ಜಮಾದಾರ

ಮಹಾಲಿಂಗಪುರ 02: ಗ್ರಾಮ, ಪಟ್ಟಣಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುವಾಗ ಸ್ಥಳೀಯ ಆಡಳಿತಕ್ಕೆ ಹಲವಾರು ತೊಂದರೆಗಳು ಬರುವುದು ಸಹಜ, ಆದರೆ ಇದನ್ನೇ ಮಾನದಂಡವಾಗಿ ಇಟ್ಟುಕೊಂಡು ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸಲಾಗುವುದಿಲ್ಲ ಅದಕ್ಕೆ ಪರಿಹಾರ ಕಂಡುಕೊಂಡು ಕೆಲಸ ಮಾಡಬೇಕಾಗುತ್ತದೆ ಎಂದು ಭಾಜಪಾ ಧುರೀಣ ಹನಮಂತ ಜಮಾದಾರ ಹೇಳಿದರು.  

ಭಾಜಪ ಯುವ ಮೋರ್ಚಾ, ನಾಗರಿಕ ಹಿತರಕ್ಷಣಾ ಸಮಿತಿ ಜಂಟಿಯಾಗಿ ಸ್ಥಳೀಯ ಜಿ ಎಲ್ ಬಿ ಸಿ ಸಭಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 

ಪಟ್ಟಣದ ಪ್ರಾಚೀನ ಗುಂಡದ ಭಾವಿ ಮೇಲೆ ಇದ್ದ ಎರಡು ಗಿಡಗಳನ್ನು ಪುರಸಭೆ ವತಿಯಿಂದ ಇತ್ತೀಚೆಗೆ ತೆರವುಗೊಳಿಸಲಾಗಿತ್ತು. ಈ ಸಮಯದಲ್ಲಿ ಮರದಲ್ಲಿಯ 5-6 ನವಜಾತ ಪಕ್ಷಿಗಳು ಅಸುನೀಗಿದ್ದಕ್ಕೆ ನಾವೂ ಸಹ ವಿಷಾದಿಸುತ್ತೇವೆ.  

ಸದರಿ ಮರಗಳು ಮುಧೋಳ- ನಿಪ್ಪಾಣಿ ರಾಜ್ಯ ಹೆದ್ದಾರಿಯ ಪಟ್ಟಣದ ಹೃದಯ ಭಾಗದಲ್ಲಿರುವುದರಿಂದ ಸದರಿ ಸ್ಥಳದಲ್ಲಿ ನೀರೀಕ್ಷೆಯ ಮೂವತ್ತು ಲಕ್ಷ ರೂಪಾಯಿಗಳ ಅನುದಾನದಡಿಯಲ್ಲಿ ಕಾಂಪ್ಲೆಕ್ಸ್‌ ನಿರ್ಮಾಣಕ್ಕಾಗಿ ಮರಗಳ ತೆರವಿಗೆ ಅರಣ್ಯ ಹಾಗೂ ಪರಿಸರ ಇಲಾಖೆಗಳಿಗೆ ಮನವಿ ಸಹ ಮಾಡಲಾಗಿದೆ. ಇಲ್ಲಿ ವಿಭಿನ್ನ ರೀತಿಯ ವ್ಯಾಪಾರ ಮಳಿಗೆಗಳನ್ನು ನಿರ್ಮಿಸಿ ಪುರಸಭೆಗೆ ಆದಾಯ, ಹಲವಾರು ನಿರುದ್ಯೋಗಿಗಳಿಗೆ, ವ್ಯಾಪಾರಸ್ಥರಿಗೆ ಉದ್ಯೋಗಾವಕಾಶ ಒದಗುತ್ತದೆ.ಇದರಿಂದ ಅವರ ಆರ್ಥಿಕ ಅಭಿವೃದ್ಧಿಗೂ ಕಾರಣವಾಗುತ್ತದೆ.ಇದು ಅನೇಕ ಆರ್ಥಿಕ ಅಸಬಲರಿಗೆ ಪೂರವಾಗಬಲ್ಲ ಸಮಾಜಮುಖಿ ಕಾಮಗಾರಿಯಾಗಿದೆ. ಪಟ್ಟಣದ ಅಭಿವೃದ್ಧಿ ಸಹಿಸದ ಕೆಲವರು ವೃಥಾ ಆರೋಪ ಮಾಡಿ ಕಾಮಗಾರಿ ನಿಲ್ಲಿಸುವ ಹುನ್ನಾರ ಮಾಡುತ್ತಿರುವುದು ಸುತಾರಾಂ ಸರಿಯಲ್ಲ ಇದರಲ್ಲಿ ರಾಜಕೀಯ ಬೆರೆಸಬೇಡಿ ಪಟ್ಟಣದ ಅಭಿವೃದ್ಧಿಯ ಕೆಲಸದಲ್ಲಿ ಪುರಸಭೆಗೆ ಸಹಕರಿಸಿ ಎಂದರು.  

ನಾಗರಿಕ ಹಿತರಕ್ಷಣಾ ಸಮಿತಿಯ ಉಪಾಧ್ಯಕ್ಷ ಸಿದ್ದು ಶಿರೋಳ ಮಾತನಾತಿಡುತ್ತಾ ಅಭಿವೃದ್ಧಿ ಸಂದರ್ಭದಲ್ಲಿ ಚಿಕ್ಕ ತೊಂದರೆಗಳು ಸಾಮಾನ್ಯ, ಅದನ್ನೇ ನೆಪವಾಗಿಟ್ಟುಕೊಂಡು ಹಲವರು ಮಾಡುವ ವಿರೋಧ ಕಾರ್ಯತಂತ್ರಗಳಿಂದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡು ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಅದು ಅಲ್ಲದೆ ಮಳಿಗೆ ನಿರ್ಮಾಣ, ರಸ್ತೆ ಅಗಲೀಕರಣದಂತಹ ಸಂದರ್ಭಗಳಲ್ಲಿ ಮರಗಳ ತೆರವು ಮಾಡುವುದು ಮತ್ತು ಅಲ್ಲಿ ಕೆಲ ತೊಂದರೆಗಳು ಸಾಮಾನ್ಯ ವಿಷಯ. ಇದನ್ನೇ ನೆಪವಾಗಿಟ್ಟುಕೊಂಡು ಕೆಲವರು ಇಲಾಖೆ ಮತ್ತು ಅಧಿಕಾರಗಳ ಮೇಲೆ ದಬ್ಬಾಳಿಕೆ ಮಾಡುತ್ತಿರುವುದು ಮಾತ್ರ ಸರಿಯಲ್ಲ ಎಂದರು. 

ಮೊದಲೇ ಜನರೇಟರ್ ಮೂಲಕ ಶಬ್ದ ಮಾಡಿ ಗಿಡಗಳಲ್ಲಿರುವ ಪಕ್ಷಿಗಳು ಹಾರಿ ಹೋಗುವಂತೆ ಮಾಡಿದ್ದಾರೆ. ಕೆಲವರು ತಮ್ಮ ಸ್ವಾರ್ಥಕ್ಕಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಪಟ್ಟಣದ ಅಭಿವೃದ್ಧಿಗೆ ಮಾರಕವಾಗಿದೆ ಹಾಗೂ ಪಕ್ಷಿ ಪ್ರೇಮದ ಹೆಸರಿನಲ್ಲಿ ಅಧಿಕಾರಿಗಳಿಗೆ ತೊಂದರೆ ಮತ್ತು ದಬ್ಬಾಳಿಕೆ ಮಾಡುತ್ತಿರುವುದು ಖಂಡನೀಯ. ನಮಗೂ ಪರಿಸರದ ಬಗ್ಗೆ ಕಾಳಜಿ ಇದೆ ಅಭಿವೃದ್ಧಿ ಕೆಲಸದಲ್ಲಿ ಯಾರು ಮೂಗು ತೂರಿಸಬಾರದು. 

ನಿಂಗನಗೌಡ. ರಾ. ಪಾಟೀಲ,

ಉಪಾಧ್ಯಕ್ಷ, ಕರ್ನಾಟಕ ನವನಿರ್ಮಾಣ ಸೇನೆ, ಮಹಾಲಿಂಗಪುರ. 

ಪಟ್ಟಣದ ಗುಂಡದ ಭಾವಿ ಹತ್ತಿರ ಇರುವ ಜಾಗೆಯಲ್ಲಿ ನೂತನ ವ್ಯಾಪಾರ ಮಳಿಗೆಗಳ ಕ್ರಿಯಾಯೋಜನೆಗೆ ಜಿಲ್ಲಾಧಿಕಾರಿಗಳಿಂದ ಅನುಮೋದನೆ ದೊರಕಿದೆ. ಕಾಮಗಾರಿ ಆರಂಭಕ್ಕೆ ಮುನ್ನ ಕೆಇಬಿ ಕಂಬಗಳನ್ನು ಸ್ಥಳಾಂತರಗೊಳಿಸಲು, ಬಾವಿಯ ಪಕ್ಕದಲ್ಲಿರುವ ಗಿಡಗಳ ತೆರವಿಗೂ ಅರಣ್ಯ ಇಲಾಖೆಗೆ ಮನವಿ ಮಾಡಲಾಗಿದೆ.  

ಎಚ್ ಎಸ್ ಚಿತ್ತರಗಿ,

ಮುಖ್ಯಾಧಿಕಾರಿ ಮಹಾಲಿಂಗಪುರ. 

ಭಾಜಪ ಯುವ ಮೋರ್ಚಾ ಅಧ್ಯಕ್ಷ ಶಿವನಗೌಡ ಪಾಟೀಲ, ಮಹಾಲಿಂಗ ನರಗಟ್ಟಿ, ಬಸವರಾಜ , ನಿಂಗನಗೌಡ ಪಾಟೀಲ, ಭೈರೇಶ ಆದೆಪ್ಪನವರ , ಭರತ ಕದ್ದಿಮನಿ, ಅರ್ಜುನ ಪವಾರ, ಆನಂದ ಪವಾರ, ವಿನಾಯಕ ಗುಂಜಿಗಾವಿ, ಅಭಿಷೇಕ ಲಮಾಣಿ, ರಾಜೇಶ ಪರಮಾನಟ್ಟಿ, ಅಭಿ ಸೊನ್ನದ, ಹರೀಶ ಮಂಟೂರ, ಮುಜಮಿಲ್ಲ ಖಾತಿಬ, ರಾಘು ಘರಗಟಗಿ ಇದ್ದರು. 

ಸುದ್ದಿ ಓದಿ