ಸ್ವಚ್ಛತೆ, ನಿರ್ವಹಣೆಗೈಯುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ: ಸಿದ್ದು ಸವದಿ
ಲೋಕದರ್ಶನ ವರದಿ
ಮಹಾಲಿಂಗಪುರ 27: ನಗರದ ಪ್ರತಿಯೊಂದು ವಾರ್ಡಗಳಲ್ಲಿ ಬರುವ ಪುರಸಭೆಯ ಖಾಲಿ ನಿವೇಶನ, ಉದ್ಯಾನವನಗಳು ಇನ್ನಿತರೆ ಸರ್ಕಾರಿ ಸ್ವಾಮಿತ್ವದ ಜಾಗೆಗಳು ನಮಗೆ ಸಂಬಂಧಿಸಿದಲ್ಲ ಸರ್ಕಾರಕ್ಕೆ ಸಂಬಂಧಿಸಿದ್ದು ಎಂದು ಅಸಡ್ಡೆಯನ್ನು ತೋರದೆ ಅವುಗಳ ಸ್ವಚ್ಛತೆ ಮತ್ತು ನಿರ್ವಹಣೆಗೈಯುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಿದೆ ಎಂದು ವಿದ್ಯಾಧರ ಸಿದ್ದು ಸವದಿ ಹೇಳಿದರು.
ಪಟ್ಟಣದ 7ನೇ ವಾರ್ಡಿನಲ್ಲಿ ಪುರಸಭೆಯಿಂದ ನೂತನವಾಗಿ ನಿರ್ಮಿಸಿರುವ ಉದ್ಯಾನವನಕ್ಕೆ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಹೆಸರು ನಾಮಕರಣ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಅವರು ನೆರೆಹೊರೆಯನ್ನು ಸ್ವಚ್ಛವಾಗಿಟ್ಟುಕ್ಕೊಂಡಲ್ಲಿ ನಮ್ಮ ಬದುಕೂ ಸಹ ಹಸನಾಗಿರುತ್ತದೆ, ಆದ್ದರಿಂದ ಮರ ಗಿಡಗಳ ನೆಟ್ಟು ಪರಿಸರ ಹಸಿರಾಗಿಸಿಕೊಂಡು ಶುದ್ಧ ವಾತಾವರಣ ಪಡೆಯಲು ತಿಳಿಸಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕರು ಪ್ರಾಣ ತ್ಯಾಗ ಮಾಡಿದ್ದಾರೆ. ಮುಂದಿನ ಪೀಳಿಗೆಗೆ ಅವರ ನೈಜ ಇತಿಹಾಸ ಹರಿದು ಬರಬೇಕಾದರೆ ಸಾರ್ವಜನಿಕ ಕ್ರೀಡಾಂಗಣ, ಕಟ್ಟಡ, ಉದ್ಯಾನವನಗಳಿಗೆ ಅಲ್ಲದೆ ಇನ್ನೂ ಅನೇಕ ಕಡೆಗಳಲ್ಲಿ ಹೆಸರಿಡುವ ಮೂಲಕ ಅವರನ್ನು ಅಜರಾಮರವಾಗಿರಿಸಬೇಕು. ಇಂತಹ ಕಾರ್ಯವನ್ನು ಈ ಗಣರಾಜ್ಯೋತ್ಸವ ಸೂ- ಸಂದರ್ಭದಲ್ಲಿ 7ನೇ ವಾರ್ಡಿನ ಪು. ಸದಸ್ಯ ರವಿ ಜವಳಗಿ ಸಮಯೋಚಿತವಾಗಿ ವೀರ ಸಂಗೊಳ್ಳಿ ರಾಯಣ್ಣ ಉದ್ಯಾನವನವೆಂದು ಹೆಸರಿಸಿರುವ ಅವರ ಕಾರ್ಯ ಮೆಚ್ಚುವಂತಹದ್ದು ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಜಿ.ಎಸ್.ಗೊಂಬಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಪುರಸಭೆ ಆಸ್ತಿಗಳು ಎಲ್ಲರ ಆಸ್ತಿಗಳಾಗಿವೆ, ಅವುಗಳು ಹಾಳಾಗದಂತೆ ಸ್ವಚ್ಛವಾಗಿಟ್ಟುಕೊಳ್ಳಬೇಕು.ಇವುಗಳು ಸಾರ್ವಜನಿಕ ಉಪಯೋಗಿಯಾಗಿದ್ದು ಇಲ್ಲಿ ಸಣ್ಣ- ಪುಟ್ಟ ಸಭೆ ಸಮಾರಂಭಗಳನ್ನು ಕೂಡ ಮಾಡಿಕೊಳ್ಳಬಹುದು. ಇವು ಸುಸ್ತಿತಿಯಲ್ಲಿ ಉಳಿಯಬೇಕಾದರೆ ಪುರಸಭೆಯೇ ಕಾರ್ಯ ನಿರ್ವಹಿಸಲಿ ಎಂದರೆ ಆಗದ ಮಾತು ಸ್ಥಳೀಯ ಸಂಘ ಸಂಸ್ಥೆಗಳು, ಸಾರ್ವಜನಿಕರು ತಮ್ಮ ತನು- ಮನ- ಧನಗಳಿಂದ ಕೈ ಜೋಡಿಸಿದಾಗ ಮಾತ್ರ ಉದ್ಯಾನವನಗಳ ಅಭಿವೃದ್ಧಿ ಮತ್ತು ಉತ್ತಮ ಪರಿಸರ ನಿರ್ಮಾಣ ಸಾಧ್ಯ ಎಂದರು.
ವೀರ ಸ್ವಾತಂತ್ರ್ಯ ಯೋಧ ಸಂಗೊಳ್ಳಿ ರಾಯಣ್ಣ ಭಾವಚಿತ್ರವನ್ನು ಭಗೀರಥ ಸರ್ಕಲ್ ದಿಂದ ನೂತನ ಉದ್ಯಾನವನ ವರೆಗೆ ಕಾರ್ಯಕರ್ತರೊಂದಿಗೆ ವಾದ್ಯವೃಂದಗಳೊಂದಿಗೆ ಮೆರವಣಿಗೆಯಲ್ಲಿ ತರಲಾಯಿತು.
ಧುರೀಣ ಮನೋಹರ್ ಶಿರೋಳ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ಪುರಸಭಾಧ್ಯಕ್ಷೆ ಸ್ನೇಹಲ್. ಶಿವಾನಂದ. ಅಂಗಡಿ ವಹಿಸಿ, ದಿವ್ಯ ಸಾನಿಧ್ಯವನ್ನು ಹಂದಿಗುಂದ ಶ್ರೀಮಂತಜ್ಜ ಶ್ರೀಗಳು ವಹಿಸಿಕ್ಕೊಂಡಿದ್ದರು. ಮುಖ್ಯ ಅತಿಥಿಗಳಾಗಿ, ಮಹಾಲಿಂಗಪ್ಪ ಕೋಳಿಗುಡ್ಡ, ಶ್ರೀಮಂತ ಹಳ್ಳಿ, ಲಕ್ಕಪ್ಪ ಚಮಕೇರಿ, ಶಂಕರ ಅಂಬಿ, ಚನ್ನಪ್ಪ ಪಟ್ಟಣಶೆಟ್ಟಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮ ನಿರ್ವಹಣೆ ಪತ್ರಕರ್ತ ಚಂದ್ರಶೇಖರ್ ಮೋರೆ, ವಂದನಾರೆ್ಣ ಅರ್ಜುನ ಪವಾರ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಕಾರ್ಯಕರ್ತರು, ಗಣ್ಯಮಾನ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.