ಶಿಕ್ಷಕರ ಸಂಘ ತಾಲೂಕ ಘಟಕದಿಂದ ಸ್ವಚ್ಚತಾ ಕಾರ್ಯಕ್ರಮ
ಹುನಗುಂದ06: ಸ್ವಚ್ಚತೆ ಆರೋಗ್ಯದ ಸಂಕೇತವೆಂದು ಮಕ್ಕಳಿಗೆ ಪಾಠ ಬೋಧನೆ ಮಾಡುವ ಶಿಕ್ಷಕರು ಸ್ವತಃ ಸ್ವಚ್ಚತೆ ಕಾರ್ಯಕ್ಕೆ ಮುಂದಾಗುವ ಮೂಲಕ ಶಿಕ್ಷಕರ ಆಸ್ತಿಯಾದ ಗುರುಭವನದ ಸುತ್ತಲು ಬೆಳೆದ ಮುಳ್ಳು ಕಂಟಿ, ಕಸಕಡ್ಡಿ ಮತ್ತು ಕೊಳಚೆಯನ್ನು ಸ್ವಚ್ಚಗೊಳಿಸುವ ಮೂಲಕ ಪಟ್ಟಣದ ಜನರ ಮೆಚ್ಚುಗೆಗೆ ಪಾತ್ರರಾದರು.
ನಗರದ ಅಮರಾವತಿ ರಸ್ತೆಯಲ್ಲಿರುವ ಗುರುಭವನದ ಸುತ್ತಮುತ್ತಲು ಗಲೀಜು ಪ್ರದೇಶದ ಅಸ್ವಚ್ಚತೆಯನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘ ತಾಲೂಕ ಘಟಕದಿಂದ ಹಮ್ಮಿಕೊಂಡಿದ್ದ ಸ್ವಚ್ಚತಾ ಕಾರ್ಯಕ್ರಮದಲ್ಲಿ ಪೆನ್ನು ಪುಸ್ತಕ ಹಿಡಿಯುವ ಕೈಗಳಲ್ಲಿ ರವಿವಾರ ಸೂರ್ಯೋದಯಕ್ಕೆ ಸಲಕೆ. ಪಿಕಾಸೆ, ಕೊಡಲೆ, ಬೆಡಗ ಹಾಗೂ ಪುಟ್ಟಿಗಳನ್ನು ಹಿಡಿದು ನೂರಾರು ಶಿಕ್ಷಕರು ಸ್ವಯಂಪ್ರೇರಿತರಾಗಿ ಆಗಮಿಸಿ ಶ್ರಮದಾನ ಮಾಡಿ ಪ್ರದೇಶವನ್ನು ಸ್ವಚ್ಚಗೊಳಿಸಿದರು. ಶಿಕ್ಷಕರು ಮುಳ್ಳು ಕಂಟಿಗಳನ್ನು ಕಡೆದು ಶುಚಿಗೊಳಿಸಿದ್ದಲ್ಲದೇ ದೊಡ್ಡ ದೊಡ್ಡ ಕಲ್ಲುಗಳನ್ನು ಎತ್ತಿ ಒಂದೆಡೆ ಹಾಕಿದರು. ಶಿಕ್ಷಕಿಯರು ಕೈಯಲ್ಲಿ ಪ್ಲಾಸ್ಟಿಕ್ ಬುಟ್ಟಿಯನ್ನು ಹಿಡಿದು ಕಸಕಡ್ಡಿ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳನ್ನು ಆರಿಸಿ ಸ್ವಚ್ಚಗೊಳಿಸಿದರು. ಇನ್ನು ಆವರಣದ ಮುಂದೆ ಬಿದ್ದ ತಗ್ಗು ದಿಣ್ಣಿಗಳಿಗೆ ಮಣ್ಣು ಹಾಕಿ ಸಮತಟ್ಟುಗೊಳಿಸಿದರು. ಈ ವೇಳೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘ ತಾಲೂಕ ಘಟಕದ ತಾಲೂಕಾಧ್ಯಕ್ಷ ಸಿದ್ದು ಶೀಲವಂತರ ಮಾತನಾಡಿ ಸ್ವಚ್ಚತೆ ಕುರಿತು ಸದಾ ಮಕ್ಕಳಿಗೆ ಪಾಠ ಮಾಡೋ ನಾವುಗಳು ಸಧ್ಯ ಶಿಕ್ಷಕರಿಗೆ ಸೇರಿದ ಅಮೂಲ್ಯ ಆಸ್ತಿಯಾದ ಗುರುಭವನದ ಸ್ವಚ್ಚತೆ ಮಾಡುವ ಕಾರ್ಯವನ್ನು ಕೈಕೊಂಡಿದ್ದೇವೆ. ಇದಕ್ಕೆ ತಾಲೂಕಿನ ಎಲ್ಲ ಶಿಕ್ಷಕರು ಉತ್ಸಾಹದಿಂದ ಬೆಂಬಲವನ್ನು ಸೂಚಿಸಿ ಭಾಗವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನು ಒಳ್ಳೆಯ ಕಾರ್ಯಕ್ರಮವನ್ನು ಇಲ್ಲಿ ಹಮ್ಮಿಕೊಂಡು ಮಾದರಿ ಶಿಕ್ಷಕರ ಭವನವನ್ನಾಗಿ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಎಂ.ಬಾಗವಾನ, ಎನ್ಪಿಎಸ್ ನೌಕರರ ಸಂಘದ ತಾಲೂಕಾಧ್ಯಕ್ಷ ಸಂಗಮೇಶ ಪಾಟೀಲ, ಶಿಕ್ಷಣ ಸಂಯೋಜಕ ಪಿ.ಬಿ.ಹಿರೇಗೊಂಡ, ಎ.ಆರ್.ನಡುವಿನಮನಿ, ಬಿ.ಡಿ.ಕಂದಕೂರ, ಸುರೇಶ ಹುದ್ದಾರ, ಗೀತಾ ತಾರಿವಾಳ, ಸುಜಾತಾ ಹಂಚಿನಾಳ, ಅಂದಾನಯ್ಯ ವಸ್ತ್ರದ, ಈಶ್ವರ ಅಂಗಡಿ, ರಾಜು ಷಣ್ಮುಖನವರ, ಸಿದ್ದು ಪಾಟೀಲ ಸೇರಿದಂತೆ ಅನೇಕ ಶಿಕ್ಷಕ ಶಿಕ್ಷಕಿಯರು ಭಾಗವಹಿಸಿದ್ದರು.