32 ವರ್ಷಗಳ ನಂತರ ಸಂಗಮಿಸಿ ಸಂಭ್ರಮಿಸಿದ ಸಹಪಾಠಿಗಳು
ಮಹಾಲಿಂಗಪುರ 31: ಇಲ್ಲಿನ ಎಸ್ಸಿಪಿ ಪ್ರೌಢಶಾಲೆಯ 1990-91ನೇ ಸಾಲಿನ ಎಸ್ಸೆಸೆಲ್ಸಿ ಬ್ಯಾಚ್ ವಿದ್ಯಾರ್ಥಿಗಳು ಹಾಗೂ ಗುರುವರ್ಯರು 32 ವರ್ಷಗಳ ನಂತರ ಬನಶಂಕರಿ ಸಾಂಸ್ಕೃತಿಕ ಭವನದಲ್ಲಿ ಸೇರಿದರು.
ಅಂದಿನ ವಿದ್ಯಾರ್ಥಿಗಳು ಕಣ್ಮುಂದೆ ಬಂದಾಗ ಗುರುಗಳು ಭಾವುಕರಾದರು. ಆ ದಿನಗಳ ಮೋಜು-ಮಸ್ತಿಯ ಅನುಭವಗಳನ್ನು ನೆನೆದರು. 32 ವರ್ಷಗಳ ಹಿಂದೆ ಶಿಕ್ಷಣ ನೀಡಿದ ಶಿಕ್ಷಕರನ್ನು ಗೌರವಿಸಿ ಮತ್ತೆ ಅವರ ಮಾತು ಕೇಳಿ ಖುಷಿಪಟ್ಟರು. ಹಳೆ ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ಸನ್ಮಾನಿಸಿದರು. ತಮ್ಮ ಅನುಭವದ ಮೆಲಕು ಹಾಕಿದ್ದಲ್ಲದೇ ಸಾಮೂಹಿಕ ನೃತ್ಯ ಮಾಡಿ ಸಂಭ್ರಮಿಸಿದರು. ಗ್ರುಪ್ ಫೋಟೋ ಕ್ಲಿಕ್ಕಿಸಿಕೊಂಡರು.
ಇದಕ್ಕೂ ಮುನ್ನ ವಿದ್ಯಾರ್ಥಿಗಳು ಎಲ್ಲ ಗುರುವರ್ಯರನ್ನು ಸಾಂಸ್ಕೃತಿಕ ಭವನದ ಹೊರಗಿನಿಂದ ವೇದಿಕೆವರೆಗೆ ಪುಷ್ಪವೃಷ್ಠಿ ಮಾಡುವ ಮೂಲಕ ಕೈಮುಗಿದು ಸ್ವಾಗತ ಕೋರಿದರು. ನಂತರ ವೇದಿಕೆ ಮೇಲೆ ಗುರುಗಳ ಪಾದಪೂಜೆ ಮಾಡಿದರು. ಅಗಲಿದ ಗುರುಗಳು ಹಾಗೂ ವಿದ್ಯಾರ್ಥಿಗಳಿಗೆ ಮೌನಾಚರಣೆ ಮಾಡಿ ಶ್ರದ್ದಾಂಜಲಿ ಸಲ್ಲಿಸಿದರು. ನಂತರ ಎಲ್ಲರೂ ಸಾಮೂಹಿಕ ಭೋಜನ ಸವಿದರು. ಹಳೆ ಗುರುವೃಂದ ಹಾಗೂ ಹಳೇ ಸಹಪಾಠಿಗಳು ಸಂಭ್ರಮಿಸಿ ಪರಸ್ಪರ ಋಣಸಂದಾಯದ ಮಾತುಗಳೊಂದಿಗೆ ಮೈಮರೆತರು. ಎಸ್ಸೆಸೆಲ್ಸಿ ಮತ್ತು ಪಿಯುಸಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
ಗುರುಗಳಾದ ಎಚ್.ಸಿ.ಹುಕ್ಕೇರಿ ಅಧ್ಯಕ್ಷತೆ ವಹಿಸಿದ್ದರು. 1990-91ನೇ ಬ್ಯಾಚ್ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹಾದೇವ ಕೋಳಿಗುಡ್ಡ, ವಿವೇಕಾನಂದ ನಿಂಬರಗಿ, ಮಲ್ಲಪ್ಪ ಗೌಡವಾಡ, ಮಹಾಲಿಂಗ ಮುಗಳಖೋಡ, ಮಹಾದೇವ ಹುಣಶ್ಯಾಳ, ಡಾ. ಸಂಜು ಮುರಗೋಡ, ಡಾ. ಸುಧೀರ ಯಾದವಾಡ, ಅಶೋಕ ಕಲ್ಯಾಣಿ, ಅಪ್ಪು ಪಾವಟೆ, ಬಸು ಬಾರಕೋಲ, ರುದ್ರ್ಪ ಮೋದಿ, ಸುಭಾಸ್ ಮುಗಳಖೋಡ, ಸಂಜು ಹಳ್ಳಿ, ಮುತ್ತಪ್ಪ ಹಿಪ್ಪರಗಿ, ಸಿದ್ದಪ್ಪ ಪಾಟೀಲ, ಕಿರಣ ಗುಂಡಾ, ಸುನೀಲ ಮುಧೋಳ, ಹನಮಂತ ವಗ್ಗರ, ಪ್ರಕಾಶ ಚಿಂಚಖಂಡಿ, ದಯಾನಂದ ಕಡಪಟ್ಟಿ, ಗೀತಾ ಮಮದಾಪೂರ, ಡಿ.ವಿ.ಲತಾ, ವೀಣಾ ತಿರಕಪಡಿ, ವೀಣಾ ಸಂಶಿ, ನಫೀಸಾ ಯಕ್ಸಂಬಿ ಸೇರಿದಂತೆ ನೂರಾರು ಸಹಪಾಠಿಗಳು ಇದ್ದರು.