ಪೌರ ಕಾರ್ಮಿಕರೇ ನಿಜವಾದ ಸ್ವಚ್ಛತಾ ಸೈನಿಕರು: ಅಶ್ವಥ್ ವೈದ್ಯ ಅಭಿಮತ
ಸವದತ್ತಿ 23: ನಗರದ ಸ್ವಚ್ಛತೆ ಮತ್ತು ಆರೋಗ್ಯ ಕಾಪಾಡುವಲ್ಲಿ ಪೌರ ಕಾರ್ಮಿಕರ ಪಾತ್ರ ಅತ್ಯಂತ ಹಿರಿದಾಗಿದ್ದು, ಸಮಾಜದಲ್ಲಿ ಯಾರೂ ಮಾಡದ ಶ್ರಮದಾಯಕ ಕೆಲಸ ನಿರ್ವಹಿಸುವ ಇವರೇ ನಿಜವಾದ ಸ್ವಚ್ಛತಾ ಸೈನಿಕರು ಎಂದು ಕಾಂಗ್ರೆಸ್ ಮುಖಂಡ ಅಶ್ವಥ್ ವೈದ್ಯ ಅಭಿಪ್ರಾಯಪಟ್ಟರು.ನಗರಸಭೆ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯ ಪೌರ ನೌಕರರ ಸಂಘ ಹಾಗೂ ಪೌರ ಕಾರ್ಮಿಕರ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.ಬೆಳಕು ಹರಿಯುವ ಮುನ್ನವೇ ಎದ್ದು ಊರ ಕಸ ಗುಡಿಸಿ, ನಗರವನ್ನು ನಳನಳಿಸುವಂತೆ ಮಾಡುವ ಪೌರ ಕಾರ್ಮಿಕರ ಸೇವೆ ಅಮೂಲ್ಯವಾದುದು.
ಸಮಾಜದ ಸ್ವಾಸ್ಥ್ಯಕ್ಕಾಗಿ ತಮ್ಮ ಆರೋಗ್ಯವನ್ನೇ ಪಣಕ್ಕಿಟ್ಟು ಶ್ರಮಿಸುತ್ತಿರುವ ಇವರ ಸೇವೆಗೆ ಸದಾ ತಕ್ಕ ಗೌರವ ಸಿಗಬೇಕು. ಸರ್ಕಾರದಿಂದ ಪೌರ ಕಾರ್ಮಿಕರಿಗೆ ದೊರೆಯುವ ಸೌಲಭ್ಯಗಳು ಹಾಗೂ ಕಲ್ಯಾಣ ಕಾರ್ಯಕ್ರಮಗಳನ್ನು ಅರ್ಹರಿಗೆ ತಲುಪಿಸಲು ನಗರಸಭೆ ಬದ್ಧವಾಗಿದೆ ಎಂದರು.ಬಳಿಕ ಮಾತನಾಡಿದ ನಗರಸಭೆ ಪೌರಾಯುಕ್ತರು ಸಂಗನಬಸಯ್ಯ ಗದಗಿಮಠ, ನಗರಗಳು ಆರೋಗ್ಯಯುತವಾಗಿರಲು ಪೌರ ಕಾರ್ಮಿಕರೇ ನಿಜವಾದ ರೂವಾರಿಗಳು. ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಬಿಸಾಡದೆ, ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ನೀಡುವುದರ ಮೂಲಕ ಪೌರ ಕಾರ್ಮಿಕರೊಂದಿಗೆ ಕಡ್ಡಾಯವಾಗಿ ಸಹಕರಿಸಬೇಕು.
ಸ್ವಚ್ಛತೆಯ ಕುರಿತು ಪ್ರತಿಯೊಬ್ಬ ನಾಗರಿಕನೂ ಜಾಗೃತರಾದಾಗ ಮಾತ್ರ ಆರೋಗ್ಯಪೂರ್ಣ ಸಮಾಜದ ನಿರ್ಮಾಣ ಸಾಧ್ಯ ಎಂದು ಕಳಕಳಿಯ ಮನವಿ ಮಾಡಿಕೊಂಡರು. ಆರೋಗ್ಯ ನೀರೀಕ್ಷಣಾ ಅಧಿಕಾರಿ ಅಶೋಕ ಮುರಗೋಡ ಅವರು ಆರೋಗ್ಯ ಮತ್ತು ನೈರ್ಮಲ್ಯದ ಕುರಿತು ಉಪಯುಕ್ತ ಮಾಹಿತಿ ನೀಡಿದರು. ಕಾರ್ಯಕ್ರಮದ ಅಂತ್ಯದಲ್ಲಿ ಸಮಾಜದ ನೈರ್ಮಲ್ಯಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ ಪೌರ ಕಾರ್ಮಿಕರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.ಈ ಸಮಾರಂಭದಲ್ಲಿ ಆರ್.ಆರ್. ಕುಲಕರ್ಣಿ, ಡಾ. ಅಭಿನಂದನ ಕಬಿಣ್ಣ, ಶಂಕರ್ ದಂಡಿನ, ಹಿರಿಯ ಆರೋಗ್ಯ ನೀರೀಕ್ಷಕರು ಚಂದ್ರಶೇಖರ ಮಲಕಣ್ಣವರ, ಕಿರಿಯ ಆರೋಗ್ಯ ನೀರೀಕ್ಷಕರು ರಾಘವೇಂದ್ರ ವಾಡಕರ, ಶಿವಾಜಿ ಕುದರಿ,ಎಮ್.ಐ.ಪಾಟೀಲ, ಎಸ್.ವೈ. ಹಾದಿಮನಿ, ಬಿ.ಎಚ್. ಆನಿ, ಎಲ್.ಎಸ್. ನಾಯಕ ಸೇರಿದಂತೆ ನಗರಸಭೆಯ ಸಿಬ್ಬಂದಿ ವರ್ಗ ಹಾಗೂ ವಿವಿಧ ಗಣ್ಯರು ಉಪಸ್ಥಿತರಿದ್ದರು.