ಶಿಶು ಈ ದೇಶದ ಸಂಪತ್ತು : ಶಾಸಕ ಸಿದ್ದು ಸವದಿ
ಮಹಾಲಿಂಗಪುರ: ಶಿಶು ಈ ದೇಶದ ಸಂಪತ್ತು ಅದರ ರಕ್ಷಣೆಗೆ ನಾವೆಲ್ಲರೂ ಕಟಿಬದ್ಧರಾಗಬೇಕೆಂದು ಶಾಸಕ ಸಿದ್ದು ಸವದಿ ಹೇಳಿದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ಆರೋಗ್ಯ ಸಮುದಾಯ ಕೇಂದ್ರದ ವತಿಯಿಂದ ಸ್ಥಳೀಯ ಬಸವನಗರದ ಬಸವೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳನ್ನು ದಡಾರ ರುಬೆಲ್ಲಾದಿಂದ ರಕ್ಷಣೆ ಮಾಡಲು ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರ, ಉಪ ಕೇಂದ್ರ ಹಾಗೂ ಅಂಗನವಾಡಿಗಳಲ್ಲಿ ಉಚಿತವಾಗಿ ಲಸಿಕೆ ನೀಡುತ್ತಿದ್ದು, ಮೊದಲ ಹಂತದಲ್ಲಿ ಆಗಸ್ಟ್ 7 ರಿಂದ 12 ರವರೆಗೆ ಲಸಿಕಾ ಕಾರ್ಯ ಜರುಗುತ್ತಿದ್ದು ಯಾವುದೇ ಮಗು ಲಸಿಕೆಯಿಂದ ವಂಚಿತರಾಗದಂತೆ ಪಾಲಕರು ನೋಡಿಕೊಳ್ಳಿ. ದೇಶದ ಸದೃಢತೆ ಶಿಶುಗಳ ಆರೋಗ್ಯವನ್ನು ಅವಲಂಬಿಸಿದೆ ಹಾಗಾಗಿ ಪ್ರತಿ ಶಿಶುವಿಗೂ ಲಸಿಕೆ ಹಾಕಿಸಿ ಸದೃಢ ಭಾರತವನ್ನು ಕಟ್ಟೋಣ ಎಂದರು.
ಬಿತ್ತಿ ಪತ್ರ ಬಿಡುಗಡೆಗೊಳಿಸಿ, ಮಕ್ಕಳಿಗೆ ಲಸಿಕೆ ಹಾಕಿ ಕಾರ್ಯಕ್ರಮ ಉದ್ಘಾಟಿಸಿದರು.
ಪುರಸಭಾ ಸದಸ್ಯ ಶೇಖರ ಅಂಗಡಿ, ಮುಖಂಡರಾದ ಜಿ.ಎಸ್.ಗೊಂಬಿ, ಬಸಯ್ಯ ಚಟ್ಟಿಮಠ, ಬಸವರಾಜ ಚಮಕೇರಿ ವೈದ್ಯಾಧಿಕಾರಿ ಸಂಜಯಕುಮಾರ ತೇಲಿ, ಈರಪ್ಪ ಕೈಸೂಲಗಿ, ಮಹಾಂತೇಶ ಪಾತ್ರೋಟ, ರವಿ ಗಿರಿಸಾಗರ, ಮಹೇಶ ಕುಲಕುಂದ ಹಾಗೂ ಆರೋಗ್ಯ ಸಿಬ್ಬಂದಿ ವಿವೇಕಾನಂದ ಬೆಳ್ಳುಬ್ಬಿ, ಶರತ್ ಪಾಟೀಲ, ಮೈತ್ರಾದೇವಿ ಎಸ್ ಇತರರಿದ್ದರು