ಚಂದ್ರಯಾನ ಲ್ಯಾಂಡಿಂಗ್ ಲೈವ್ ವೀಕ್ಷಣೆ ಮೊದಲು ಪ್ರಾರ್ಥಿಸಿ ನಂತರ ಸಂಭ್ರಮಿಸಿದ ವಿದ್ಯಾರ್ಥಿಗಳು
ಮಹಾಲಿಂಗಪುರ: ಸ್ಥಳೀಯ ಕೆಎಲ್ಇ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಉಪಗ್ರಹ ಲ್ಯಾಂಡಿಂಗ್ ಕ್ಷಣಗಳನ್ನು ಲೈವ್ ಆಗಿ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿತ್ತು. ಶಾಲೆ ಬಿಟ್ಟ ಕ್ಷಣದಿಂದ ಸಂಜೆ 5 ಗಂಟೆಯಿಂದಲೇ ವಿದ್ಯಾರ್ಥಿಗಳು ತರಗತಿಯಲ್ಲಿ ಪ್ರೋಜೆಕ್ಟರ್ ಪರದೆ ಮುಂದೆ ಕಾತರದಿಂದ ಕುಳಿತಿದ್ದರು. ಆಗಾಗ ಕೈಮುಗಿದು ಲ್ಯಾಂಡಿಂಗ್ ಯಶಸ್ವಿಯಾಗಲೆಂದು ಸಾಮೂಹಿಕ ಪ್ರಾರ್ಥನೆ ಮಾಡುತ್ತಿದ್ದರು.
ಸ್ಥಿತಿಗತಿ ಬಗ್ಗೆ ಇಸ್ರೋ ವಿಜ್ಞಾನಿಗಳು ನೀಡುತ್ತಿದ್ದ ಮಾಹಿತಿಯನ್ನು ಕನ್ನಡದಲ್ಲಿ ಭಾಷಾಂತರಿಸಿ ಮಕ್ಕಳಿಗೆ ತಿಳಿಸಲಾಯಿತು. ಲ್ಯಾಂಡಿಂಗ್ ಯಶಸ್ವಿಯಾದ ಕ್ಷಣದಿಂದಲೇ ವಿದ್ಯಾರ್ಥಿಗಳೆಲ್ಲಾ ಚಪ್ಪಾಳೆ ತಟ್ಟಿ ಸಂಭ್ರಮದಿಂದ ವಿಜಯದ ನಗೆ ಬೀರಿದರು. ಅದರಲ್ಲೂ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳ ಬರ್ತಡೇ ಅದೇ ದಿನ ಇದ್ದಿದ್ದರಿಂದ ಜನ್ಮ ಸಾರ್ಥಕವಾಯಿತು ಎಂದು ಹೆಮ್ಮೆ ಪಟ್ಟಳು. ಒಟ್ಟಿನಲ್ಲಿ ಇಸ್ರೋ ವಿಜ್ಞಾನಿಗಳ ಅವಿರತ ಶ್ರಮಕ್ಕೆ ಸಿಕ್ಕ ಪ್ರತಿಫಲವನ್ನು ಕಣ್ತುಂಬಿಕೊಂಡು ಹೆಮ್ಮೆಯಿಂದ ಭಾರತ ಮಾತಾ ಕಿ ಜೈ ಎಂದು ಬೀಗುತ್ತ ಮನೆಗೆ ತೆರಳಿದರು.
ಉಪಪ್ರಾಂಶುಪಾಲ ಬಿ.ಎನ್.ಅರಕೇರಿ, ವಿಜ್ಞಾನ ಶಿಕ್ಷಕಿಯರಾದ ಸಪನಾ ಅನಿಗೋಳ, ಭಾಗ್ಯಶ್ರೀ ಹಿರೇಮಠ, ಪ್ರತಿಮಾ ಪಡೇಸೂರ, ಪರಮಾನಂದ ಹಿಪ್ಪರಗಿ ಹಾಗೂ ವಿದ್ಯಾರ್ಥಿಗಳು ಇದ್ದರು.