ಗಂಗಾದೇವಿ ಗಂಗೆಸ್ಥಳ ಮತ್ತು ಭಾವಚಿತ್ರ ಮೆರವಣಿಗೆ ಸಂಭ್ರಮ
ಲೋಕದರ್ಶನ ವರದಿ
ಕಂಪ್ಲಿ, 10: ತಾಲೂಕಿನ ರಾಮಸಾಗರ ಗ್ರಾಮದಲ್ಲಿ ಗಂಗಾಮತ ಸಮಾಜದ ವತಿಯಿಂದ ಗಂಗಾದೇವಿ ಗಂಗೆಸ್ಥಳ ಹಾಗೂ ಭಾವಚಿತ್ರ ಮೆರವಣಿಗೆ ಶುಕ್ರವಾರ ಅದ್ಧೂರಿಯಾಗಿ ನಡೆಯಿತು. ಗ್ರಾಮದ ಮುಖ್ಯರಸ್ತೆ ಬದಿಯಲ್ಲಿ ಗಂಗಾಮತ ಸಮಾಜದ ಗಂಗಾ ಪರಮೇಶ್ವರಿ ಸೇವಾ ಸಮಿತಿ ಟ್ರಸ್ಟ್ನ ನಾಮಫಲಕವನ್ನು ಉದ್ಘಾಟಿಸಲಾಯಿತು. ಬಳಿಕ ತುಂಗಭದ್ರಾ ನದಿ ತೀರದಲ್ಲಿ ಗಂಗೆ ಪೂಜೆ ನೆರವೇರಿಸಿ, ನಂತರ ಗಂಗೆಸ್ಥಳ ಮೆರವಣಿಗೆ ನಡೆಸಲಾಯಿತು.
ತನುಗೊಡ, ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು. ಗಂಗಾದೇವಿ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಎದುರು ಬಸವಣ್ಣನವರ ಮೂಲಕ ಪುನಃ ದೇವಸ್ಥಾನದಲ್ಲಿ ಸಮಾಪ್ತಿಗೊಂಡಿತು.
ಮಹಿಳೆಯರ ಕಳಸ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾ ಪ್ರಕಾರಗಳೊಂದಿಗೆ ಗಂಗಾದೇವಿ ಭಾವಚಿತ್ರ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದಲ್ಲಿ ಗಂಗಾಮತ ಸಮಾಜದ ಮುಖಂಡರು, ಯುವಕರು, ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲ ವರ್ಗದ ಜನರು ಭಾಗವಹಿಸಿದ್ದರು. ನಂತರ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು.