ಮಹಾತಪಸ್ವಿ ಮುರುಘೇಂದ್ರ ಶಿವಯೋಗಿಗಳ ಜಯಂತಿ ಆಚರಣೆ

ಮಹಾತಪಸ್ವಿ ಮುರುಘೇಂದ್ರ ಶಿವಯೋಗಿಗಳ ಜಯಂತಿ ಆಚರಣೆ

ಲೋಕದರ್ಶನ ವರದಿ 


ಮಹಾತಪಸ್ವಿ ಮುರುಘೇಂದ್ರ ಶಿವಯೋಗಿಗಳ ಜಯಂತಿ ಆಚರಣೆ 

ಹಾವೇರಿ, ಜು.16: ಶರಣರ ಚಳವಳಿಯ ಮುಂಚೂಣಿಯಲ್ಲಿ ಅನೇಕ ಮಹನೀಯರು ಅವತರಿಸಿ ಸಮಾಜೋದ್ಧಾರ ಕಾರ್ಯಗಳನ್ನು ಕೈಗೊಂಡಿದ್ದಾರೆ. ಎಡೆಯೂರು ಸಿದ್ಧಲಿಂಗೇಶ್ವರರು, ಷಣ್ಮುಖ ಶಿವಯೋಗಿಗಳು ಹಾಗೂ ಮುರುಘೇಂದ್ರ ಶಿವಯೋಗಿಗಳು ತಮ್ಮ ಜ್ಞಾನ, ವೈರಾಗ್ಯ ಮತ್ತು ಆಧ್ಯಾತ್ಮಿಕ ಶಕ್ತಿಯಿಂದ ಲಕ್ಷಾಂತರ ಭಕ್ತರಿಗೆ ದಾರೀದೀಪರಾಗಿದ್ದಾರೆ ಎಂದು ಹೊಸಮಠದ ಬಸವ ಶಾಂತಲಿಂಗ ಮಹಾಸ್ವಾಮೀಜಿ ಹೇಳಿದರು.  

ಬಸವ ಕೇಂದ್ರ ಶ್ರೀಹೊಸಮಠದ ಆಶ್ರಯದಲ್ಲಿ ನಡೆದ ಲಿಂಗೈಕ್ಯ ಜಗದ್ಗುರು ಶ್ರೀ ನೈಘಂಟಿನ ಸಿದ್ಧಬಸವ ಮುರುಘರಾಜೇಂದ್ರ ಮಹಾಸ್ವಾಮಿಗಳು ಹಾಗೂ ಮಹಾತಪಸ್ವಿ ಶ್ರೀ ಮುರುಘೇಂದ್ರ ಶಿವಯೋಗಿಗಳ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

1915ರಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು ಅಥಣಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಿವಯೋಗಿಗಳೊಂದಿಗೆ ನಡೆದ ಸಂಭಾಷಣೆಯನ್ನು ಸ್ಮರಿಸಿದ ಅವರು, ಸ್ವಾತಂತ್ರ್ಯದ ಕುರಿತು ಶಿವಯೋಗಿಗಳ ದೂರದೃಷ್ಟಿ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಉಲ್ಲೇಖಿಸಿದರು.  

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯ ಹಿರೇಮಠ ಮಾತನಾಡಿ, “ಮುರುಘೇಂದ್ರ ಶಿವಯೋಗಿಗಳ ಆದರ್ಶಗಳು ಎಲ್ಲರಿಗೂ ಮಾದರಿಯಾಗಿವೆ. ಇಂತಹ ಮಹನೀಯರ ಸ್ಮರಣೆಯ ಮೂಲಕ ಸಮಾಜಕ್ಕೆ ಮೌಲ್ಯಯುತ ಸಂದೇಶಗಳನ್ನು ತಲುಪಿಸುವ ಕಾರ್ಯ ನಡೆಯುತ್ತಿದೆ” ಎಂದರು.  

ನಿವೃತ್ತ ಶಿಕ್ಷಕಿ ರುದ್ರಮ್ಮ ನೆಲವಿಗಿ ಮಾತನಾಡಿ, ಮಹನೀಯರ ಜೀವನ ಸಾಧನೆಗಳನ್ನು ಪ್ರತಿಯೊಬ್ಬರೂ ಅನುಸರಿಸಬೇಕು ಎಂದು ಕರೆ ನೀಡಿದರು.  

ಈ ಸಂದರ್ಭದಲ್ಲಿ ಉಭಯ ಶ್ರೀಗಳ ಭಾವಚಿತ್ರ ಹೊತ್ತ ಪಲ್ಲಕ್ಕಿ ಉತ್ಸವ ನಡೆಯಿತು. ಶಿವಲೀಲಾ ಮರಗಾಳ, ವೀರಯ್ಯ ಹಿರೇಮಠ, ಎ.ಸಿ. ಹಿರೇಮಠ ಹಾಗೂ ರುದ್ರಮ್ಮ ನೆಲವಿಗಿ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು.  

ಕಾರ್ಯಕ್ರಮದಲ್ಲಿ ಮುರುಗಪ್ಪ ಕಡೇಕೊಪ್ಪ, ದಯಾನಂದ ಯಡ್ರಾವಿ, ರುದ್ರೇಶ್ ಚನ್ನಣ್ಣನವರ ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು. ಲಕ್ಕಣ್ಣವರ ಸೋದರಿಯರು ವಚನ ಗಾಯನ ನಡೆಸಿದರು. ಗೂಳಪ್ಪ ಅರಳಿಕಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಿ.ಜಿ. ಯಳಗೇರಿ ಸ್ವಾಗತಿಸಿದರು ಹಾಗೂ ನಿಂಗಪ್ಪ ಎಂ. ಆರೇರ ವಂದಿಸಿದರು. 


ಸುದ್ದಿ ಓದಿ