ರಾಜಧಾನಿ ಪಟ್ಟಣವಾಗಿ ಬೆಳೆಯುವುದಕ್ಕೆ ಕಾಲುವೆಗಳು ಮಹತ್ವದ ಪಾತ್ರವಹಿಸಿವೆ: ಮಲ್ಲೇಶಪ್ಪ ಪಿ.
ಬಳ್ಳಾರಿ23: ವಿಜಯನಗರ ಪಟ್ಟಣದಲ್ಲಿ ಅಸಂಖ್ಯಾತ ಕಾಲುವೆಗಳು ನಿರ್ಮಾಣವಾಗಿದ್ದು, ವಾಸ್ತು ರಚನಾ ದೃಷ್ಠಿಯಿಂದ ಆಕರ್ಷಣಿಯವಾಗಿವೆ. ರಾಜಧಾನಿ ಪಟ್ಟಣವಾಗಿ ಬೆಳೆಯುವುದಕ್ಕೆ ಕಾಲುವೆಗಳು ಮಹತ್ವದ ಪಾತ್ರವಹಿಸಿವೆ ಎಂದು ಪಿಹೆಚ್.ಡಿ ಸಂಶೋಧನಾರ್ಥಿ ಮಲ್ಲೇಶಪ್ಪ ಪಿ. ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗವು ಬುಧವಾರ ಹಮ್ಮಿಕೊಂಡಿದ್ದ 101 ನೇ ವಾರದ ಮಾತು ಕಾರ್ಯಕ್ರಮದಲ್ಲಿ ವಿಜಯನಗರ ಪಟ್ಟಣದ ಕಾಲುವೆಗಳು ಎಂಬ ವಿಷಯ ಕುರಿತು ಅವರು ವಿಷಯ ಮಂಡನೆ ಮಾಡಿದರು.
ಕಾಲುವೆಗಳು ನೀರನ್ನು ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಸರಾಗವಾಗಿ ಹರಿಯಲು ಅನುಕೂಲ ಮಾಡಿಕೊಡುತ್ತವೆ. ತುಂಗಭದ್ರ ನದಿಯ ನೀರು ಕುಡಿಯಲು ಮತ್ತು ಕೃಷಿಗೆ ಬಳಸಿಕೊಳ್ಳುವಲ್ಲಿ ಕಾಲುವೆಗಳು ತುಂಬಾ ಪ್ರಾಮುಖ್ಯತೆ ಪಡೆದಿದೆ. ವಿಜಯನಗರ (ಹಂಪಿ) ಪಟ್ಟಣವು ಮಧ್ಯಯುಗೀನ ದಕ್ಷಿಣ ಭಾರತದ ಪ್ರಮುಖ ಪಟ್ಟಣವಾಗಿದ್ದು, ವಿಜಯನಗರ ಪಟ್ಟಣದಲ್ಲಿ ಮೊದಲ ಕಾಲುವೆ ತುರ್ತು ಕಾಲುವೆಯಾಗಿದ್ದು, ಇದು ಕ್ರಿ.ಶ. 1389 ರಲ್ಲಿ ತುಂಗಭದ್ರ ನದಿಗೆ ನಿರ್ಮಿಸಿದ ಅಣೆಕಟ್ಟು. ಈ ಕಾಲುವೆಯ ನೀರು ವಿರುಪಾಕ್ಷ ದೇವಾಲಯದಿಂದ ಕೃಷ್ಣಪುರಕ್ಕೆ ಸರಬರಾಜಾಗುತ್ತಿತ್ತು. ಈ ಕಾಲುವೆ ಅಚ್ಯುತಾಪುರದವರೆಗೂ ಮುಂದುವರೆದಿದೆ.
ಈ ಸಂದರ್ಭದಲ್ಲಿ ವಿಜಯನಗರದ ಹಿರಿಯ ಕಾಲುವೆಗಳ ಬಗ್ಗೆ ಸಹ ಉಲ್ಲೇಖಿಸಿದರು. ಕ್ರಿ.ಶ. 1521 ರಲ್ಲಿ ವಲ್ಲಭಾಪುರ ಅಣೆಕಟ್ಟಿಗೆ ನಿರ್ಮಿಸಿದ ರಾಯ ಬಸವಣ್ಣ ಕಾಲುವೆಗಳನ್ನು ಕೋಟೆ ಹೊರಭಾಗದಲ್ಲಿ ನಿರ್ಮಿಸಿದ್ದಾರೆ. ಮಣ್ಣಿನ ಕಾಲುವೆ, ಕಲ್ಲಿನ ಕಾಲುವೆ, ಸುಟ್ಟಮಣ್ಣಿನ ಕಾಲುವೆಗಳು ವಿಜಯನಗರ ಪಟ್ಟನದಲ್ಲಿ ಕಂಡುಬರುವಂತಹ ಇನ್ನಿತರ ಕಾಲುವೆಗಳ ಬಗ್ಗೆ ಸಹ ಚರ್ಚಿಸಿದರು. ವಿಜಯನಗರ ಪಟ್ಟಣದ ಕಾಲುವೆಗಳು ಜೀವಜಲಗಳಾಗಿದ್ದವೆಂದು ಅವರು ಬಣ್ಣಿಸಿದರು.
101 ನೇ ವಾರದ ಮಾತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ವಿಭಾಗದ ಪ್ರಾಧ್ಯಾಪಕರಾದ ಡಾ. ವಾಸುದೇವ ಬಡಿಗೇರ ಅವರು ವಿಜಯನಗರ ಪಟ್ಟಣದ ಕಾಲುವೆಗಳ ಬಗ್ಗೆ ತೌಲನಿಕವಾಗಿ ಅಧ್ಯಯನ ಮಾಡಬೇಕೆಂದು ತಿಳಿಸಿದರು. ಕಾಲುವೆಗಳ ಬಗ್ಗೆ ಸಂಕ್ಷೀಪ್ತ ಮಾಹಿತಿಯನ್ನು ಸಂಶೋಧನಾರ್ಥಿಗಳಿಗೆ ನೀಡಿದರು. ಹಾಗೆಯೇ ವಿಭಾಗದ ಮುಖ್ಯಸ್ಥರಾದ ಡಾ. ಎಸ್.ವೈ. ಸೋಮಶೇಖರ್ ಅವರು ವಿಜಯನಗರ ಪಟ್ಟಣದ ರಾಯ ಕಾಲುವೆಗಳ ಬಗ್ಗೆ ಸಂಶೋಧನಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ವಿಭಾಗದ ಹಾಗೂ ವಿವಿಧ ವಿಭಾಗದ ಸಂಶೋಧನಾರ್ಥಿಗಳು ಭಾಗವಹಿಸಿ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ವಿಭಾಗದ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.